ಜಿಲ್ಲೆಯಲ್ಲೊಂದಿದೆ ಏಕೋಪಾಧ್ಯಾಯ ಕಾಲೇಜು!

| Published : Mar 24 2025, 12:35 AM IST

ಜಿಲ್ಲೆಯಲ್ಲೊಂದಿದೆ ಏಕೋಪಾಧ್ಯಾಯ ಕಾಲೇಜು!
Share this Article
  • FB
  • TW
  • Linkdin
  • Email

ಸಾರಾಂಶ

There is one Ekopadhyaya College in the district!

- ಬೋಧಕ-ಬೋಧಕೇತರ ಸಿಬ್ಬಂದಿ ಇಲ್ಲ, ಪ್ರಾಂಶುಪಾಲರೇ ಇಲ್ಲಿ ಎಲ್ಲ

- ಮಂತ್ರಾಲಯ ರಸ್ತೆಯ ಸಿದ್ರಾಂಪುರ ಬಳಿ ಸರ್ಕಾರಿ ಮಾದರಿ ಪದವಿ ಕಾಲೇಜಿನ ದುಸ್ಥಿತಿ

- ಸುಸಜ್ಜಿತ ಕಟ್ಟಡ, ವಸತಿ ನಿಲಯಗಳಿದ್ದರೂ ಬಳಕೆ ಗೌಣ, ಪ್ರಚಾರ ಕೊರತೆ, ಬರೀ 36 ಪ್ರವೇಶರಾಮಕೃಷ್ಣ ದಾಸರಿ

ಕನ್ನಡಪ್ರಭ ವಾರ್ತೆ ರಾಯಚೂರು

ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಏಕೋಪಾದ್ಯಯರು ಇರುವುದು ಸಾಮಾನ್ಯ. ಆದರೆ, ರಾಯಚೂರಿನಲ್ಲೊಂದು ಏಕೋಪಾಧ್ಯಾಯ ಕಾಲೇಜು ಇದೆ ಎಂಬುದು ಬಹುತೇಕರ ಗಮನಕ್ಕೂ ಇರುವುದಿಲ್ಲ.

ಇದು ಅಚ್ಚರಿಯಾದರೂ ಸತ್ಯ… ರಾಯಚೂರಿನ ಸರ್ಕಾರಿ ಮಾದರಿ ಪದವಿ ಕಾಲೇಜಿನ ದುಸ್ಥಿತಿಯ ಪ್ರೋಫೈಲ್‌ ಈ ಭಾಗದ ಉನ್ನತ ಶಿಕ್ಷಣಕ್ಕೆ ಜನಪ್ರತಿನಿಧಿಗಳು, ಸರ್ಕಾರ ಹಾಗೂ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಯಾವ ಮಟ್ಟದ ನಿರ್ಲಕ್ಷ್ಯ ವಹಿಸಿದೆ ಎಂಬುವುದನ್ನು ಎತ್ತಿ ತೋರಿಸುತ್ತದೆ.

ಗ್ಯಾರಂಟಿ ದೌರ್ಭಾಗ್ಯ: ಜಿಲ್ಲಾ ಕೇಂದ್ರವಾದ ರಾಯಚೂರು ನಗರದ ಹೊರವಲಯದ ಮಂತ್ರಾಲಯಕ್ಕೆ ಹೋಗುವ ರಸ್ತೆಯಲ್ಲಿನ ಸಿದ್ರಾಂಪುರ ವ್ಯಾಪ್ತಿಯ ಪ್ರದೇಶದಲ್ಲಿರುವ ಸರ್ಕಾರಿ ಮಾದರಿ ಪದವಿ ಕಾಲೇಜು ಹೆಸರಿನಲ್ಲಿ ಮಾತ್ರ ಮಾದರಿಯಿದೆ. ಆದರೆ, ವಾಸ್ತವದಲ್ಲಿ ಗ್ಯಾರಂಟಿ ದೌರ್ಭಾಗ್ಯವನ್ನು ದಕ್ಕಿಸಿಕೊಂಡಿದೆ.

ಏನಿದು ಮಾದರಿ ಕಾಲೇಜು?: ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯ, ಉನ್ನತ ಶಿಕ್ಷಣ ಇಲಾಖೆ-ರಾಷ್ಟ್ರೀಯ ಉಚ್ಛತರ ಶಿಕ್ಷಾ ಅಭಿಯಾನ (ಆರ್‌ಯುಎಸ್ಎ)ದಡಿ ವಿಶಾಲವಾದ 10 ಎಕರೆ ಪ್ರದೇಶದಲ್ಲಿ ಸುಮಾರು 12 ಕೋಟಿ ವೆಚ್ಚದಲ್ಲಿ ಮಾದರಿ ಕಾಲೇಜು ಕಟ್ಟಡ ಹಾಗೂ ವಿದ್ಯಾರ್ಥಿ (ಹೆಣ್ಣು-ಗಂಡು)ಗಳಿಗೆ ವಸತಿ ನಿಲಯ ನಿರ್ಮಾಣದ ಕಟ್ಟಡ ಕಾಮಗಾರಿಗೆ 2019, ಫೆಬ್ರವರಿ 3ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವರ್ಚ್ಯುವಲ್‌ ಮುಖಾಂತರ ಶಂಕುಸ್ಥಾಪನೆಯನ್ನು ನೆರವೇರಿಸಿದ್ದರು. ನಾಲ್ಕು ವರ್ಷಗಳ ಬಳಿಕ ಪೂರ್ಣಗೊಂಡ ಸುಸಜ್ಜಿತ ಕಟ್ಟಡವನ್ನು 2023, ಫೆ.26 ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕೇಂದ್ರ ಸಚಿವರೊಂದಿಗೆ ಸೇರಿ ಲೋಕಾರ್ಪಣೆ ಮಾಡಿದ್ದರು. ಇಲ್ಲಿ ತನಕ ಎಲ್ಲವೂ ಸರಿಯಾಗಿಯೇ ಇತ್ತು. ಆದರೆ, ಜಿಲ್ಲಾಡಳಿತ, ಜಿಪಂ, ಹಾಗೂ ಕಾಲೇಜು ಶಿಕ್ಷಣ ಇಲಾಖೆ ಹೆಚ್ಚಾಗಿ ಕಾಳಜಿ ವಹಿಸದ ಕಾರಣಕ್ಕೆ ಆರಂಭದಲ್ಲಿಯೇ ಅಗತ್ಯ ಸವಲತ್ತುಗಳಿಲ್ಲದಕ್ಕೆ ಕಾಲೇಜು ಕಂಗೆಟ್ಟುಹೋಗಿದೆ.

ಸಿಬ್ಬಂದಿ ಇಲ್ಲ, ಪ್ರಾಂಶುಪಾಲರೇ ಎಲ್ಲ: ಸರ್ಕಾರಿ ಮಾದರಿ ಪದವಿ ಕಾಲೇಜಿನಲ್ಲಿ ಬಿ.ಕಾಂ, ಬಿ.ಎ,ಬಿಎಸ್ಸಿ, ಬಿಸಿಎ ಪದವಿ ಕೋರ್ಸ್‌ಗಳಿದ್ದು, ಒಬ್ಬ ಪ್ರಾಂಶುಪಾಲರು, ವಿಷಯವಾರು ಉಪನ್ಯಾಸಕರು, ಕಚೇರಿ ಸಹಾಯಕರು, ಕ್ಲರ್ಕ್‌, ಸ್ವಚ್ಛತೆ ಸೇರಿದಂತೆ ಹತ್ತಾರು ಹುದ್ದೆಗಳಿಗೆ ಬೋಧಕ-ಬೋಧಕೇತರ ಸಿಬ್ಬಂದಿಯ ಅಗತ್ಯವಿದೆ. ಆದರೆ, ಕೇವಲ ಪ್ರಾಂಶುಪಾಲರನ್ನು ಮಾತ್ರ ನೇಮಿಸಿರುವುದರಿಂದ ಬೋಧನೆಯಿಂದ ಹಿಡಿದು ಸ್ವಚ್ಛತೆಯವರೆಗೂ ಒಬ್ಬರೇ ನಿಭಾಯಿಸಿಕೊಳ್ಳುವಂತಹ ದುಸ್ಥಿತಿ ನಿರ್ಮಾಣಗೊಂಡಿದೆ. ಉಳಿದ ಕಾಲೇಜುಗಳಲ್ಲಿ ಕಾಯಂ ಬೋಧಕ-ಬೋಧಕೇತರ ಸಿಬ್ಬಂದಿ ಇಲ್ಲದಿದ್ದರೂ ಅತಿಥಿ ಉಪನ್ಯಾಸಕರು ಹಾಗೂ ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿದ್ದಾರೆ. ಆದರೆ ಈ ಕಾಲೇಜಿನಲ್ಲಿ ಅದಕ್ಕೂ ಕ್ರಮ ವಹಿಸಿಲ್ಲ.

ಪರ್ಯಾರ್ಯ ವ್ಯವಸ್ಥೆ: ಪ್ರಚಾರದ ಕೊರತೆ, ಸವತ್ತುಗಳಿಲ್ಲದ ಕಾರಣಕ್ಕೆ ಕಾಲೇಜಿನಲ್ಲಿರುವ ನಾಲ್ಕು ಕೋರ್ಸ್‌ಗಳಲ್ಲಿ ಕೇವಲ ಬಿಎಸ್ಸಿ, ಬಿ.ಎ ಮಾತ್ರ ಆರಂಭಗೊಂಡಿದೆ. ಪ್ರಸಕ್ತ ಸಾಲಿನಲ್ಲಿ ಬಿಎಗೆ 21 ಹಾಗೂ ಬಿಎಸ್ಸಿಗೆ 15 ಸೇರಿ ಬರೀ 36 ವಿದ್ಯಾರ್ಥಿಗಳು ದಾಖಲಾತಿ ಪಡೆದಿದ್ದಾರೆ. ಕೇವಲ ಒಬ್ಬ ಪ್ರಾಂಶುಪಾಲರು ಮಾತ್ರ ಇದ್ದು, ಬೋಧನೆಗೆ ಅಗತ್ಯ ವಾತಾವರಣ ಇಲ್ಲದ್ದಕ್ಕೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ದಾಖಲಾದ 36 ವಿದ್ಯಾರ್ಥಿಗಳಿಗೆ ರಾಯಚೂರು ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಬೋಧನೆ ಹಾಗೂ ಪ್ರಾಯೋಗಿಕ ತರಬೇತಿಗಳನ್ನು ನೀಡಲಾಗಿದ್ದು, ಇದೀಗ ಆ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸುತ್ತಿದ್ದಾರೆ. ಕಾಲೇಜಿನ ಕಟ್ಟಡದ ಸಮೀಪದಲ್ಲಿಯೇ ಸುಸಜ್ಜಿತ ವಸತಿ ನಿಲಯದ ಕಟ್ಟಡವು ನಿರ್ಮಿಸಲಾಗಿದ್ದು, ಕಡಿಮೆ ದಾಖಲಾತಿ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರೆ ಸವಲತ್ತುಗಳನ್ನು ಒದಗಿಸದ ಕಾರಣಕ್ಕೆ ವಸತಿ ನಿಲಯವನ್ನು ಸಹ ಆರಂಭಿಸಿಲ್ಲ.

.....ಕೋಟ್........

ಸರ್ಕಾರಿ ಮಾದರಿ ಪದವಿ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದು, ಅಗತ್ಯವಾದ ಬೋಧಕ-ಬೋಧಕೇತರ ಸಿಬ್ಬಂದಿ ಇಲ್ಲದ ಕಾರಣಕ್ಕೆ ಪ್ರವೇಶ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ ದರ್ಜೆ ಕಾಲೇಜಿನಲ್ಲಿ ತರಗತಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ವಸತಿ ನಿಲಯ ಆರಂಭಕ್ಕೆ ಇಲಾಖೆಗೆ ಮನವಿ ಮಾಡಲಾಗಿದೆ. ಪ್ರಚಾರ ಕೈಗೊಂಡು ದಾಖಲಾತಿ ಹೆಚ್ಚಿಸುವಲ್ಲಿ ಪ್ರಯತ್ನ ನಡೆಸಲಾಗುವುದು.

-ಡಾ.ಮಹಬೂಬ ಅಲಿ, ಪ್ರಾಂಶುಪಾಲರು, ಸರ್ಕಾರಿ ಮಾದರಿ ಪದವಿ ಕಾಲೇಜು, ರಾಯಚೂರು

------------------------

23ಕೆಪಿಆರ್‌ಸಿಆರ್‌ 01: ರಾಯಚೂರು ಹೊರವಲಯದ ಮಂತ್ರಾಲಯ ರಸ್ತೆಯ ಸಿದ್ರಾಂಪುರ ಸಮೀಪದ ಸರ್ಕಾರಿ ಮಾದರಿ ಪದವಿ ಕಾಲೇಜು.

23ಕೆಪಿಆರ್‌ಸಿಆರ್ 02: ರಾಯಚೂರು ಸರ್ಕಾರಿ ಮಾದರಿ ಪದವಿ ಕಾಲೇಜಿನ ವಸತಿ ನಿಲಯ ಮೂಲಸವಲತ್ತುಗಳಿಲ್ಲದೇ ಆರಂಭ ಕಂಡಿಲ್ಲ.