ಮಕ್ಕಳ ಭಾವನಾತ್ಮಕ ಸ್ವಾಸ್ಥ್ಯ ಸದೃಢವಾಗಿಸಲು ಕಲೆ ಸಹಾಯಕ: ಸಂಸದೆ ಡಾ.ಪ್ರಭಾ

| Published : Sep 22 2024, 01:50 AM IST

ಸಾರಾಂಶ

ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ನಡೆದ ಕಾಲೇಜಿನ 60ನೇ ವರ್ಷದ ವಜ್ರ ಮಹೋತ್ಸವ ಸಮಾರಂಭವನ್ನು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ, ದಾವಣಗೆರೆ

ಮೊಬೈಲ್ ಗೀಳಿಗೆ ಅಂಟಿಕೊಂಡಿರುವುದರಿಂದ ಇಂದಿನ ಮಕ್ಕಳ ದೈನಂದಿನ ಚಟುವಟಿಕೆಯಲ್ಲಿ ವ್ಯತ್ಯಾಸವಾಗಿದೆ. ಇದನ್ನು ಸರಿಪಡಿಸಲು ಮಕ್ಕಳಲ್ಲಿ ಕಲಾಭಿರುಚಿ ಬೆಳೆಸಬೇಕು. ಮಕ್ಕಳ ಭಾವನಾತ್ಮಕ ಸ್ವಾಸ್ಥ್ಯ ಸದೃಢವಾಗಿಸಲು ಕಲೆ ಸಹಾಯಕವಾಗಿದೆ. ಈ ದಿಸೆಯಲ್ಲಿ ಸಮಾಜದ ಆಸ್ತಿಯಾಗಿರುವ ಕಲಾ ವಿದ್ಯಾರ್ಥಿಗಳು ಜನರನ್ನು ಕಲೆಯತ್ತ ಸೆಳೆಯುವ ಮೂಲಕ ಸಾಮಾಜಿಕ ಜವಾಬ್ದಾರಿ ನಿರ್ವಹಿಸಬೇಕು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ನಗರದ ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶನಿವಾರ ದಾವಣಗೆರೆ ದೃಶ್ಯಕಲಾ ಶಾಲೆ ಹಳೆಯ ವಿದ್ಯಾರ್ಥಿಗಳ ಸಂಘ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾಲೇಜಿನ 60ನೇ ವರ್ಷದ ವಜ್ರ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜಿನ ಅಭಿವೃದ್ಧಿಯಲ್ಲಿ ಹಳೇ ವಿದ್ಯಾರ್ಥಿಗಳ ಜವಾಬ್ದಾರಿ ಹೆಚ್ಚಿದೆ. ವಜ್ರ ಮಹೋತ್ಸವದ ಸವಿನೆನಪಿಗಾಗಿ ಇಲ್ಲೊಂದು ಕಲಾಭವನ ನಿರ್ಮಾಣ ಆಗಬೇಕೆಂಬುದು ಚಿ.ಸು. ಕೃಷ್ಣಶೆಟ್ಟಿ ಅವರ ಕನಸಾಗಿದೆ. ಇದಕ್ಕಾಗಿ ಹಳೇ ವಿದ್ಯಾರ್ಥಿಗಳು ಸಭೆ ನಡೆಸಿ ಅಭಿವೃದ್ಧಿಯ ಯೋಜನೆ ರೂಪಿಸಬೇಕು. ದೃಶ್ಯಕಲಾ ಮಹಾವಿದ್ಯಾಲಯದ ಜೊತೆ ನಾವಿದ್ದು, ಈ ಕಲಾಶಾಲೆಯ ಅಭಿವೃದ್ಧಿಗೆ ಪೂರಕವಾದ ಕ್ರಿಯಾಯೋಜನೆ ರೂಪಿಸಿದರೆ, ರಾಜ್ಯದಲ್ಲೇ ಮಾದರಿ ಕಾಲೇಜು ಮಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ ಎಂದು ಅವರು ಭರವಸೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಡಿ.ಕುಂಬಾರ್ ಮಾತನಾಡಿ, ಹಳೇ ವಿದ್ಯಾರ್ಥಿಗಳು ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಈ ಕಾಲೇಜು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಸಾಧ್ಯ. ಕಾಲೇಜಿನ ಅಭಿವೃದ್ಧಿಗೆ ಹಳೆಯ ವಿದ್ಯಾರ್ಥಿಗಳ ಸಂಘದವರು ಸಹಕರಿಸಬೇಕು. ಕಾಲೇಜಿನ ಪ್ರಾಧ್ಯಾಪಕರನ್ನು ಕಾಯಂಗೊಳಿಸಲು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಹೇಳಿದರು.

ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಚಿ.ಸು.ಕೃಷ್ಣಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಲಾ ಕಾಲೇಜಿಗೆ ಈವರೆಗೆ ಬಹಳ ಅನ್ಯಾಯವಾಗಿದೆ. ಈ ಹಿಂದೆ ಇದ್ದ ಪ್ರಾಚಾರ್ಯರಿಂದ ಕಾಲೇಜು ತನ್ನ ಜಾಗ ಕಳೆದುಕೊಂಡಿದೆ. ಕಾಲೇಜು ಅಭಿವೃದ್ಧಿಗೆ ದಾವಣಗೆರೆ ಜನರು ಈ ಹಿಂದೆ ಮಾಡಿದ್ದ ಪ್ರಮಾಣವನ್ನು ಈ ದಿನ ನೆನಪಿಸಿಕೊಂಡು ಕಾರ್ಯ ಪ್ರವೃತ್ತರಾಗಬೇಕು. ಕಲಾಶಾಲೆಯ ಆಸ್ತಿಯಲ್ಲಿ ಕಾಲೇಜಿಗೆ ಸಂಬಂಧಿಸಿದ ಕಟ್ಟಡವಷ್ಟೇ ನಿರ್ಮಾಣವಾಗಬೇಕು. ನಮ್ಮ ಕಾಲೇಜಿನ ಒಂದಿಂಚೂ ಜಾಗವು ಬೇರೆ ಉದ್ದೇಶಕ್ಕೆ ಬಳಕೆಯಾಗದಂತೆ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಪ್ರಾಚಾರ್ಯ ಡಾ.ಜೈರಾಜ್ ಎಂ.ಚಿಕ್ಕಪಾಟೀಲ್, ಹಳೆಯ ವಿದ್ಯಾರ್ಥಿಗಳ ಸಂಘದ ಗಣಪತಿ ಎಸ್.ಹೆಗಡೆ, ಸುರೇಶ್ ವಾಘ್ಮೋರೆ, ಗೋಪಾಲ್ ಕೃಷ್ಣ ಸೇರಿದಂತೆ ಕಾಲೇಜಿನ ಬೋಧನಾ ಸಹಾಯಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಡಾ.ಎಂ.ಸಿ.ಮೋದಿ ವೃತ್ತದಿಂದ ದೃಶ್ಯಕಲಾ ವಿದ್ಯಾಲಯದವರೆಗೆ ಕಲಾತಂಡಗಳ ಅದ್ಧೂರಿ ಮೆರವಣಿಗೆ ನಡೆಯಿತು.