ಕೊಪ್ಪಳ: ಕಲೆ ಮತ್ತು ಸಂಸ್ಕೃತಿಯು ಮನುಷ್ಯನ ಬದುಕಿನಲ್ಲಿ ಉತ್ಸಾಹ, ಸಂತಸ ಹಾಗೂ ನೆಮ್ಮದಿ ಮೂಡಿಸುವುದರ ಜತೆಗೆ ಜೀವನ ಅರ್ಥಪೂರ್ಣವಾಗಿಸಿ ಆಯುಷ್ಯ ವೃದ್ಧಿಗೆ ಸಹಕಾರಿಯಾಗುತ್ತದೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ಕರಾವಳಿ ಬಳಗದಿಂದ ಆಯೋಜಿಸಿದ್ದ ಮಹಾಶಕ್ತಿ ಮಹಾಕಾಳಿ ಯಕ್ಷಗಾನ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಮ್ಮ ನಾಡಿನ ಕಲೆ, ಸಾಹಿತ್ಯ ಹಾಗೂ ಸಂಸ್ಕೃತಿ ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಕಲೆ ಮನುಷ್ಯನ ಮನಸ್ಸಿಗೆ ನೆಮ್ಮದಿ ನೀಡುವ ಶಕ್ತಿ ಹೊಂದಿದ್ದು, ಕಲೆಯೊಂದಿಗೆ ಬದುಕುವವರು ಆರೋಗ್ಯಕರ ಹಾಗೂ ಸಂತಸದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.

ಕರಾವಳಿ ಭಾಗದ ಜನರ ಜೀವನಶೈಲಿ, ಸಂಸ್ಕೃತಿ ಹಾಗೂ ಶಿಸ್ತನ್ನು ಶ್ಲಾಘಿಸಿದ ಅವರು, ಕರಾವಳಿಯ ಜನರಲ್ಲಿ ಶಿಸ್ತು, ಸಮಯಪ್ರಜ್ಞೆ ಹಾಗೂ ಸಂಘಟನಾ ಮನೋಭಾವ ಗಮನಾರ್ಹವಾಗಿದೆ. ಅಲ್ಲಿನ ಕಲೆ, ಜಾನಪದ ಸಂಪ್ರದಾಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಗಳು ಕರ್ನಾಟಕದ ಹೆಮ್ಮೆಯಾಗಿವೆ ಎಂದು ಹೇಳಿದರು.

ಯುವಜನತೆ ಆಧುನಿಕತೆಯೊಂದಿಗೆ ನಮ್ಮ ಸಾಂಪ್ರದಾಯಿಕ ಕಲೆ ಮತ್ತು ಸಂಸ್ಕೃತಿ ಅಳವಡಿಸಿಕೊಂಡು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕು. ಕಲೆ ಕೇವಲ ಮನರಂಜನೆಯ ಸಾಧನವಲ್ಲ, ಅದು ಸಮಾಜವನ್ನು ಒಗ್ಗೂಡಿಸುವ ಹಾಗೂ ಉತ್ತಮ ಮೌಲ್ಯ ಬೆಳೆಸುವ ಶಕ್ತಿಯಾಗಿದೆ ಎಂದು ತಿಳಿಸಿದರು.


ಅಪರ ಜಿಲ್ಲಾಧಿಕಾರಿ ಸಿದ್ದಾರಾಮೇಶ್ವರ ಮಾತನಾಡಿ, ಕರಾವಳಿ ಭಾಗದ ಜನರು ಶಿಸ್ತು ಮತ್ತು ಸಮಯಪ್ರಜ್ಞೆಗೆ ಹೆಸರುವಾಸಿಯಾಗಿದ್ದಾರೆ. ಹೋಟೆಲ್ ಉದ್ಯಮದಲ್ಲಿಯೂ ಕರಾವಳಿ ಜನರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇಂತಹ ಕಾರ್ಯಕ್ರಮ ಆಯೋಜಿಸುವ ಮೂಲಕ ಕರಾವಳಿ ಭಾಗದ ಕಲೆ, ಸಂಸ್ಕೃತಿ ಕೊಪ್ಪಳದ ಜನರಿಗೆ ಪರಿಚಯಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಕರಾವಳಿ ಬಳಗದ ಗೌರವಾಧ್ಯಕ್ಷ ಜೀವನ್ ಶೆಟ್ಟಿ ಹಾಗೂ ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ, ಹಾಲಾಡಿಯ ಭಾಗವತ ರಾಘವೇಂದ್ರ ಮಯ್ಯ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆ ಕರಾವಳಿ ಬಳಗದ ಅಧ್ಯಕ್ಷ ಹಾಗೂ ಕೊಪ್ಪಳ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಶಶಿಕರ್ ಶೆಟ್ಟಿ ವಹಿಸಿದ್ದರು. ನಂತರ ಮಹಾಶಕ್ತಿ ಮಹಾಕಾಳಿ ಯಕ್ಷಗಾನ ಪ್ರದರ್ಶನ ಆರಂಭಗೊಂಡು ಕಲಾಭಿಮಾನಿಗಳ ಮನಸೂರೆಗೊಂಡಿತು. ಕಲಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಕ್ಷಗಾನ ಪ್ರದರ್ಶನ ವೀಕ್ಷಿಸಿದರು.