ಸಾರಾಂಶ
ಹಾರೋಹಳ್ಳಿ: ಹಾರೋಹಳ್ಳಿ ಶ್ರೀ ಚಾಮುಂಡೇಶ್ವರಿ ಅಮ್ಮನವರ 9ನೇ ವರ್ಷದ ಅದ್ಧೂರಿ ದಸರಾ ಮಹೋತ್ಸವ ನಡೆಯಿತು.
ಸಂಜೆ 4.30ಕ್ಕೆ ಶ್ರೀ ಅರುಣಾಚಲೇಶ್ವರಸ್ವಾಮಿ ದೇವಾಲಯದಿಂದ ಜಾನಪದ ಕಲಾತಂಡಗಳು ಸಾಲು ಸಾಲಾಗಿ ಒಗ್ಗೂಡಿದ್ದವು. ಅಲಂಕಾರಗೊಂಡ ಹೂವಿನ ಪಲ್ಲಕ್ಕಿ ಉತ್ಸವದಲ್ಲಿ ಆದಿದೇವತೆ ಚಾಮುಂಡೇಶ್ವರಿ ಹಾಗೂ ಪಾರ್ವತಿ ಅಮ್ಮನವರ ವಿಗ್ರಹವನ್ನಿರಿಸಿ ಪೂಜೆ ಸಲ್ಲಿಸಲಾಯಿತು. ಸಾಹಿತಿ ಹಂಪ ನಾಗರಾಜ್ ವೈಭವಯುತ ದಸರಾ ಮೆರವಣಿಗೆಗೆ ವಿದ್ಯುಕ್ತ ಚಾಲನೆ ನೀಡಿದರು.ಕಲಾತಂಡಗಳ ದರ್ಬಾರು ಪೂಜಾ ಕುಣಿತ, ಪಟ್ಟ ಕುಣಿತ, ಚಿಲಿಪಿಲಿ ಗೊಂಬೆ ನೃತ್ಯ, ಕೀಲು ಕುದುರೆ, ಡೊಳ್ಳು, ವೀರಗಾಸೆ ಕುಣಿತ, ಮೈಸೂರು ನಗಾರಿ, ನಾದಸ್ವರ, ಮಂಗಳವಾದ್ಯ, ನಂದಿದ್ವಜ, ಗ್ರಾಮ ದೇವತೆಗಳ ಉತ್ಸವ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿದವು. ಕಳೆದ ಬಾರಿಗಿಂತಲೂ ಈ ಬಾರಿ ಜನಪದ ಕಲಾತಂಡಗಳು ಪಾಲ್ಗೊಂಡು ಮುಖ್ಯರಸ್ತೆ ಚಾಮುಂಡೇಶ್ವರಿ ಅಮ್ಮನ ದೇವಾಲಯದ ಬನ್ನಿ ಮರದವರೆಗೂ ರಸ್ತೆಯ ಎರಡು ಬದಿಯಲ್ಲಿ ಕಿಕ್ಕಿರಿದು ನಿಂತಿದ್ದ ಜನಸ್ತೋಮ ಭಕ್ತಿ ಭಾವ ಮೆರೆದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಆನಂದ್ ಗುರೂಜಿ ಆಶೀರ್ವದಿಸಿ, ಹಾರೋಹಳ್ಳಿ ದಸರಾ ಆಚರಣೆ ಸಮಿತಿ ಧಾರ್ಮಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ನವರಾತ್ರಿ ಹಬ್ಬದ ಪ್ರಯುಕ್ತ ಅರುಣಾಚಲೇಶ್ವರ ಸ್ವಾಮಿ ದೇಗುಲದಲ್ಲಿ ನವದುರ್ಗ ಮಾತೆಯ ಪ್ರತಿಷ್ಠಾಪನೆ ಮತ್ತು ಆರಾಧನೆಯಲ್ಲಿ 9 ದಿನಗಳ ಕಾಲ ನಿತ್ಯ ದೇವಿಯರನ್ನು ಪ್ರತಿಷ್ಠಾಪಿಸಿ ಮಹಾನವಮಿ ವಿಶೇಷವಾಗಿ ಅಂತಿಮವಾಗಿ ಸಿದ್ದಿದಾತ್ರಿ ದೇವಿ ಪೂಜಿಸಿ ಒಂದು ಹೆಣ್ಣು ಮಗು 8 ಮಂದಿ ಮಹಿಳೆಯರಿಂದ ಪೂಜೆ ನಡೆಸಿರುವುದು ದೇವಿ ಮಾನಸಿಕ ಗೊಂದಲ ನಿವಾರಿಸಿ ಜನರಿಗೆ ಧೈರ್ಯ, ಶಕ್ತಿ, ಆರೋಗ್ಯ ನೀಡುತ್ತಾಳೆ ಎಂದರು.ವಿಶೇಷ ಕಲೆ ಸಂಸ್ಕೃತಿ ಹೊಂದಿರುವ ಪ್ರಜಾಪ್ರಭುತ್ವ ದೇಶ ವಿಜಯನಗರ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ದಸರಾ ಸಾಂಸ್ಕೃತಿಕ ಹಬ್ಬವನ್ನು ಹಾರೋಹಳ್ಳಿಯಲ್ಲಿ ಉಳಿಸಿಕೊಂಡು ನಡೆಸುತ್ತಿರುವ ಹೆಮ್ಮೆ ನಮ್ಮ ಜಿಲ್ಲೆಗೆ ಸಲ್ಲುತ್ತದೆ. ಇದು ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯ ನಂತರ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಬನ್ನಿ ಪೂಜೆ ನೆರವೇರಿಸಲಾಯಿತು. ನಂತರ ಸರ್ಕಾರಿ ಶಾಲಾ ಮೈದಾನದಲ್ಲಿ ಕಣ್ಮನ ತಣಿಸುವ ಆಕರ್ಷಕ ಅದ್ದೂರಿ ಮತ್ತು ಗುಂಡು ಪ್ರದರ್ಶನದಲ್ಲಿ 25 ಅಡಿ ಎತ್ತರದ ಅಂಧಕಾಸುರನ ವಧೆ ಚಿತ್ರಣವನ್ನು ಜನ ಕಣ್ತುಂಬಿ ಕೊಂಡರು.ಅರುಣಾಚಲೇಶ್ವರ ದೇವಾಲಯದ ಧರ್ಮದರ್ಶಿ ಆದಿತ್ಯ ರಸರಂಜನ್, ದಸರಾ ಆಚರಣೆ ಸಮಿತಿ ಅಧ್ಯಕ್ಷ ಎಂ.ಗೌತಮ್‌ಗೌಡ, ಸಂಚಾಲಕ ಎಂ.ಮಲ್ಲಪ್ಪ, ಉಪಾಧ್ಯಕ್ಷ ವಿಜಯಕುಮಾರ್, ಸಹ ಸಂಚಾಲಕ ಹೆಚ್.ಎಸ್.ಮುರುಳಿಧರ್, ಜಗದೀಶ್, ಯಾಕೂಬ್ ಪಾಷಾ, ಅನಂತ್, ಸುರೇಶ್, ರಾಘವೇಂದ್ರ, ಪದ್ಮಮ್ಮ ಸುಮಿತ್ರಮ್ಮ ಸೇರಿದಂತೆ ಪದಾಧಿಕಾರಿಗಳು ಸಾವಿರಾರು ಮಂದಿ ಭಾಗಿಯಾಗಿದ್ದರು.
3ಕೆಆರ್ ಎಂಎನ್ 1.ಜೆಪಿಜಿಹಾರೋಹಳ್ಳಿ ಶ್ರೀ ಚಾಮುಂಡೇಶ್ವರಿ ಅಮ್ಮನವರ 9ನೇ ವರ್ಷದ ಅದ್ಧೂರಿ ದಸರಾ ಮಹೋತ್ಸವದಲ್ಲಿ ಶ್ರೀ ಆನಂದ್ ಗುರೂಜಿ ಮತ್ತಿತರರು ಪಾಲ್ಗೊಂಡಿರುವುದು.