ಚಿತ್ರಕಲಾವಿದರು ಸಂಘಟಿತರಾಗಿ : ಜಿಪಂ ಪಿ.ಲಕ್ಷ್ಮಿ

| Published : Feb 05 2024, 01:48 AM IST

ಸಾರಾಂಶ

ಚಾಮರಾಜನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಜಿಲ್ಲಾ ಚಿತ್ರ ಕಲಾವಿದರ ಸಂಘದ ಉದ್ಘಾಟನೆ ಹಾಗೂ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಚಾಮರಾಜನಗರಚಿತ್ರಕಲಾವಿದರು ಸಂಘಟಿತರಾಗಿ ಸರ್ಕಾರದಿಂದ ದೊರೆಯುವ ಸವಲತ್ತುಗಳನ್ನು ಪಡೆದು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಲಕ್ಷ್ಮಿ ಹೇಳಿದರು.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ಜಿಲ್ಲಾ ಚಿತ್ರ ಕಲಾವಿದರ ಸಂಘದ ಉದ್ಘಾಟನೆ ಹಾಗೂ ಚಿತ್ರಕಲಾ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಲಾವಿದರ ಜೀವನ ಏರು-ಪೇರುಗಳಿಂದ ಕೂಡಿರುತ್ತದೆ, ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸುತ್ತಾರೆ. ಆದರೆ ಉತ್ತಮವಾದ ಚಿತ್ರಗಳನ್ನು ಬಿಡಿಸಿ ನೋಡುಗರಿಗೆ ಖುಷಿ ಕೊಡುತ್ತಾರೆ. ಇಂತಹ ಸಮಯದಲ್ಲಿ ಚಿತ್ರಕಲಾವಿದರು ಸಂಘಟಿತರಾಗುತ್ತಿರುವುದು ಉಪಯೋಗವಾಗುತ್ತದೆ. ಈ ಮೂಲಕ ಕಲಾವಿದರ ಸೇವೆ ದ್ವಿಗುಗುಣವಾಗಲಿ ಎಂದು ಆಶಿಸಿದರು.

ಈ ಚಿತ್ರಕಲಾ ಪ್ರದರ್ಶನವು ಜಿಲ್ಲೆಯಲ್ಲಿ ಅದ್ಭುತ ಕಲಾವಿದರು ಇದ್ದಾರೆ ಎಂಬುದನ್ನು ತೋರಿಸುತ್ತದೆ. ಗ್ರಾಮೀಣ ಭಾಗದಲ್ಲಿ ಸಾಕಷ್ಟು ಕಲಾವಿದರು ರೂಪುಗೊಳ್ಳುತ್ತಿದ್ದಾರೆ. ಗ್ರಾಪಂ ಚೆಂದವನ್ನು ಹೆಚ್ಚಿಸುವಲ್ಲಿ ಚಿತ್ರಕಲಾವಿದರ ಪಾತ್ರ ಅಪಾರವಾಗಿದೆ. ಇಲಾಖೆಯಿಂದ ಚಿತ್ರಕಲಾವಿದರಿಗೆ ಮುಂದೆಯೂ ಹಲವು ಅವಕಾಶಗಳನ್ನು ಕೊಡುವುದಾಗಿ ಭರವಸೆ ನೀಡಿದರು.ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್ ಮಾತನಾಡಿ, ಕಲೆಯಲ್ಲಿ ಎಲ್ಲವನ್ನು ಪರಿಚಯಿಸಬಹುದು ಎಂಬುದನ್ನು ಚಿತ್ರಕಲೆಯಲ್ಲಿ ಕಾಣಬಹುದು. ಈ ಸಂಘ ಜಿಲ್ಲೆಗೆ ಅವಶ್ಯಕತೆ ಇತ್ತು. ಕಲಾವಿದರನ್ನು ಗುರುತಿಸಲು ಇದು ಅಗತ್ಯವಾಗಿ ಬೇಕಾಗಿದೆ ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಕಲೆಯನ್ನು ಶ್ರದ್ಧೆ ಭಕ್ತಿಯಿಂದ ಮಾಡಬೇಕಾಗುತ್ತದೆ. ಕಲೆಯಲ್ಲಿ ಸರಸ್ವತಿಯ ಸಹಕಾರ ಇರಬೇಕಾಗುತ್ತದೆ. ಗಡಿನಾಡಿನಲ್ಲಿ ಅನೇಕ ಚಿತ್ರಕಲಾವಿದರು ಇದ್ದಾರೆ. ಅವರನ್ನು ಗುರುತಿಸಿ ಬೆಳಕಿಗೆ ತರುವ ನಿಟ್ಟಿನಲ್ಲಿ ಇದು ಒಳ್ಳೆಯ ಪ್ರಯತ್ನವಾಗಿದೆ. ಜಿಲ್ಲೆಯಲ್ಲಿ ಕಲಾವಿದರನ್ನು ಹುಟ್ಟು ಹಾಕಲು ಇದು ಉಪಯುಕ್ತವಾಗಿದೆ ಈ ಸಂಘವು ಯಶಸ್ಸು ಹೊಂದಲಿ ಎಂದರು. ಕಾರ‍್ಯಕ್ರಮದಲ್ಲಿ ಖ್ಯಾತ ವನ್ಯಜೀವಿ ಚಿತ್ರ ಕಲಾವಿದ ಶಕ್ತಿ ಪ್ರಸಾದ್, ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಗಾನಗಂಧರ್ವ ವೇದಿಕೆ ಗೌರವಾಧ್ಯಕ್ಷ ಸುರೇಶ್ ಗೌಡ, ಸಮಾಜ ಸೇವಕ ಡಾ.ಪರಮೇಶ್ವರ್, ಖ್ಯಾತ ಚಿತ್ರಕಲಾವಿದ ಎ.ಮಹದೇವಸ್ವಾಮಿ, ಗ್ರಾಮ ಆಡಳಿತಾಧಿಕಾರಿ ಹಾಗೂ ಸಾಹಿತಿ ಕೆ.ಶ್ರೀಧರ್ (ಸಿರಿ), ಜಿಲ್ಲಾ ಚಿತ್ರ ಕಲಾವಿದರ ಸಂಘದ ಅಧ್ಯಕ್ಷ ರವಿತೇಜ್, ಪ್ರಧಾನ ಕಾರ್ಯದರ್ಶಿ ಎನ್.ಅನಿಲ್ ಕುಮಾರ್ , ಕಲಾವಿದ ದುಂಡುಮಹದೇವ್,ಲೋಕೇಶ್ ಗೌಸ್,ಶಿವಕುಮಾರ, ಪ್ರದೀಪ್ ಟ್ಯಾಬ್ಲೋ ಮಹದೇವ್, ಮಧುಸೂದನ್, ರವಿ ಇತರರು ಹಾಜರಿದ್ದರು ಚಿತ್ರ ನಟ ಶ್ರೀಸಾಯಿ ಮಂಜು ಪ್ರಾರ್ಥಿಸಿದರು. ಚಿತ್ರಕಲಾ ಶಿಕ್ಷಕ ಸಂಪತ್‌ಕುಮಾರ್ ಕಾರ್ಯಕ್ರಮವನ್ನು ಸ್ವಾಗತಿಸಿದರು.