ಸಾರಾಂಶ
ಕನ್ನಡಪ್ರಭ ವಾರ್ತೆ ಬಳ್ಳಾರಿ
ಜಿಲ್ಲೆಯ ವಿವಿಧ ಕಲಾ ಪ್ರಕಾರಗಳಿಗೆ ಉತ್ತೇಜನ ನೀಡುವ ಆಶಯದ ಹಿನ್ನೆಲೆಯಲ್ಲಿ ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾ ಕಲಾವಿದರ ಸಂಘದಿಂದ "ಸಾಂಸ್ಕೃತಿಕ ಸಂಭ್ರಮ " ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಹಿರಿಯ ಚಿತ್ರಕಲಾವಿದ ನಾಡೋಜ ವಿ.ಟಿ. ಕಾಳೆ ಅವರು, ಕಲಾವಿದರು ಸಂಘಟಿತರಾಗಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಬದುಕು ಸುಧಾರಣೆ ಮಾಡಿಕೊಳ್ಳಬೇಕು. ಕಲಾವಿದರ ನೆರವಿಗೆ ಸರ್ಕಾರವೂ ಮುಂದಾಗಬೇಕು. ಇದಕ್ಕಾಗಿಯೇ ಕ್ರಿಯಾ ಯೋಜನೆ ರೂಪಿಸುವಂತಾಗಬೇಕು ಎಂದು ಹೇಳಿದರು.
ಬಳ್ಳಾರಿ ಜಿಲ್ಲೆ ಕಲಾವಿದರ ತವರೂರಾಗಿದೆ. ಈ ಜಿಲ್ಲೆಯಲ್ಲಿರುವಷ್ಟು ಕಲಾವಿದರು ಹಾಗೂ ಕಲಾಪ್ರಕಾರಗಳು ರಾಜ್ಯದ ಬೇರೆ ಯಾವುದೇ ಜಿಲ್ಲೆಯಲ್ಲಿ ಕಂಡು ಬರುವುದಿಲ್ಲ. ಆದರೆ, ಕಲಾವಿದರಿಗೆ ಸೂಕ್ತ ಪ್ರೋತ್ಸಾಹ ಹಾಗೂ ನೆರವಿನ ಕೊರತೆ ಕಂಡು ಬರುತ್ತದೆ. ಕಲಾವಿದ ಉಳಿಯದಿದ್ದರೆ ಕಲೆಗಳು ಉಳಿಯುವುದಿಲ್ಲ. ಹೀಗಾಗಿ ಸರ್ಕಾರ, ಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ಸಹ ಕಲಾವಿದರನ್ನು ಉತ್ತೇಜಿಸುವ ಕೆಲಸ ಮಾಡಬೇಕು ಎಂದು ತಿಳಿಸಿದರು.ಜಿಲ್ಲೆಯ ಕಲಾವಿದರನ್ನು ಸಂಘಟಿಸುವ ಹಾಗೂ ಅವರ ಬದುಕಿನ ಸುಧಾರಣೆಗೆ ಶ್ರಮಿಸುವ ಉದ್ದೇಶದಿಂದ ಆರಂಭಗೊಂಡಿರುವ ಬಳ್ಳಾರಿ ಜಿಲ್ಲಾ ಕಲಾವಿದರ ಸಂಘ ಮೂಲ ಆಶಯದಿಂದ ವಿಮುಖಗೊಳ್ಳದಂತೆ ಜನಪರವಾಗಿ ಕಾರ್ಯ ನಿರ್ವಹಿಸುವಂತಾಗಲಿ. ಸಂಘದ ಚಟುವಟಿಕೆಗಳು ಕಲೆ ಹಾಗೂ ಕಲಾವಿದರ ಉನ್ನತಿಗೆ ಪೂರಕವಾಗಲಿ ಎಂದು ಹಿರಿಯ ಕಲಾವಿದ ವಿ.ಟಿ.ಕಾಳೆ ಹಾರೈಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಉದ್ಯಮಿ ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರು, ಸಂಘಟನೆಯಿಂದ ಮಾತ್ರ ಹೆಚ್ಚಿನ ಶಕ್ತಿ ಬರಲು ಸಾಧ್ಯ. ಕಲಾವಿದರು ಒಗ್ಗೂಡಿ ಕಾರ್ಯನಿರ್ವಹಿಸಬೇಕು ಎಂದು ಸಲಹೆ ನೀಡಿದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಚೋರನೂರು ಕೊಟ್ರಪ್ಪ ಮಾತನಾಡಿ, ಕಲೆ ಹಾಗೂ ಕಲಾವಿದರನ್ನು ಗೌರವಿಸುವ ಸಂಸ್ಕಾರ ಪ್ರತಿಯೊಬ್ಬರಲ್ಲೂ ಬೆಳೆಯಬೇಕು. ಜಿಲ್ಲೆಯ ಅನೇಕ ಕಲಾವಿದರು ರಾಷ್ಟ್ರಮಟ್ಟದಲ್ಲಿ ಬೆಳೆಯುವಷ್ಟು ಪ್ರತಿಭಾನ್ವಿತರಿದ್ದಾರೆ. ಅವರನ್ನು ಗುರುತಿಸುವ ಕೆಲಸ ಮೊದಲಾಗಬೇಕು. ಎಲೆಮರೆಯ ಕಾಯಿಯಂತೆ ತಮ್ಮಷ್ಟಕ್ಕೆ ತಾವಿದ್ದು ಕಲೆಯನ್ನು ಉಳಿಸಿ-ಬೆಳೆಸುವವರನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾಳಜಿಯ ಕಾರ್ಯ ಸಂಘ-ಸಂಸ್ಥೆಗಳಿಂದಾಗಬೇಕು ಎಂದು ಅಭಿಪ್ರಾಯಪಟ್ಟರು.
ರಾಘವ ಸ್ಮಾರಕ ಸಂಘದ ಗೌರವಾಧ್ಯಕ್ಷ ಕೆ.ಚನ್ನಪ್ಪ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಯಲಾಟ ಹಿರಿಯ ಕಲಾವಿದೆ ಸುಜಾತಮ್ಮ, ರಂಗಭೂಮಿಯ ಹಿರಿಯ ಕಲಾವಿದ ರಮೇಶಗೌಡ ಪಾಟೀಲ್, ವೀಣಾ ಆದೋನಿ, ವರಲಕ್ಷ್ಮೀ, ನೃತ್ಯಗುರು ಜಿಲಾನಿಬಾಷಾ, ಹಿರಿಯ ತಬಲಾ ಕಲಾವಿದ ಪಾಂಡುರಂಗಪ್ಪ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಕೆ. ವಸಂತ ಕುಮಾರ್, ಕವಿತಾ ಗಂಗೂರ್, ಡಿ.ವಿರೂಪಾಕ್ಷಪ್ಪ ಅವರಿಂದ ವಚನ ಗಾಯನ, ಯಲ್ಲನಗೌಡ ಶಂಕರಬಂಡೆ ಹಾಗೂ ಜಡೇಶ ಎಮ್ಮಿಗನೂರು ತಂಡದಿಂದ ಭಾವಗೀತೆ, ವೀರೇಶ ದಳವಾಯಿ ಕಲಾ ತಂಡದಿಂದ ಜಾನಪದ ಗೀತೆ ಗಾಯನ, ಪುಷ್ಪಾವತಿ ಕಲಾ ತಂಡದಿಂದ ಮಹಿಳಾ ಕೋಲಾಟ, ವೀಣಾ ಕುಮಾರಿ ಮತ್ತು ಶ್ರೇಯಾ ಕಲಾ ತಂಡದಿಂದ ಭರತನಾಟ್ಯ, ಮೂನ್ ವಾಕರ್ಸ್ ಕಲಾ ತಂಡದಿಂದ ಜಾನಪದ ನೃತ್ಯ, ಶ್ರೀಲಕ್ಷ್ಮಿ ಕಲಾ ಕ್ಷೇತ್ರ ತಂಡ ಮತ್ತು ತುಂಗಾ-ಗಂಗಾ ಸಾಂಸ್ಕೃತಿಕ ಕಲಾ ಟ್ರಸ್ಟ್‌ನಿಂದ ಸಮೂಹ ನೃತ್ಯ, ಅಶ್ವರಾಮಣ್ಣ ತಂಡದಿಂದ ರಂಗಗೀತೆ ಗಾಯನ ಹಾಗೂ ಹಗಲುವೇಷ ಪ್ರದರ್ಶನ, ಮಲ್ಲಯ್ಯ ಕಲಾ ತಂಡದಿಂದ ಗೊರವರ ಕುಣಿತ, ಚಂದ್ರು ಕಲಾ ತಂಡದಿಂದ ಡೊಳ್ಳು ಕುಣಿತ, ಕಲಾಂಜಲಿ ಟ್ರಸ್ಟ್ ನಿಂದ ಸಮೂಹ ನೃತ್ಯ, ಸುಜಾತಮ್ಮ ಕಲಾ ತಂಡದಿಂದ ಬಯಲಾಟ ರಂಗಗೀತೆ, ಸುಬ್ಬಣ್ಣ ಕಲಾ ತಂಡದಿಂದ ತೊಗಲುಗೊಂಬೆಯಾಟ, ಎರಿಸ್ವಾಮಿ ಅವರಿಂದ ನಗೆಹಬ್ಬ, ಮೋಹನ್ ಕಲಾ ತಂಡದಿಂದ ತಾಷಾರಾಮ್ ಡೋಲ್, ಗೆಣಿಕೆಹಾಳ್ ತಿಮ್ಮನಗೌಡ ಕಲಾ ತಂಡದಿಂದ ಗಧಾಯುದ್ಧ ಪೌರಾಣಿಕ ನಾಟಕ ಪ್ರದರ್ಶನ, ಈ.ಹನುಮಾವಧೂತ ಕಲಾ ತಂಡ ಹಾಗೂ ಜ್ಯೋತಿ ಕಲಾ ತಂಡದಿಂದ ಬಯಲಾಟ ಪ್ರದರ್ಶನಗಳು ಜರುಗಿದವು. ಬೆಳಗ್ಗೆ 11ರಿಂದ ರಾತ್ರಿ 11ರ ವರೆಗೆ ನಿರಂತರವಾಗಿ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಲಾಪ್ರಿಯರು ಕಣ್ತುಂಬಿಕೊಂಡರು.ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ, ಕಾರ್ಯದರ್ಶಿ ಎಚ್. ತಿಪ್ಪೇಸ್ವಾಮಿ ಮುದ್ದಟನೂರು, ಎಂ.ವಿನೋದ್ ಕುಮಾರ್ ಹಾಗೂ ಆಲಂಬಾಷಾ ಕಾರ್ಯಕ್ರಮ ನಿರ್ವಹಿಸಿದರು.