ಭಾರತೀಯ ಸಂದರ್ಭದಲ್ಲಿ ಆಯಾ ನೆಲದಲ್ಲಿ ತನ್ನ ಅವಶ್ಯಕತೆಗೆ ತಕ್ಕಂತೆ ಬೇರೆ ಬೇರೆ ಕಲೆಗಳ ಉದ್ಭವ ಆಗಿದೆ. ಎಲ್ಲದರ ಒಟ್ಟೂ ಉದ್ದೇಶ ಒಂದೇ.

ನವರಸ ಯಕ್ಷೋತ್ಸವ ಉದ್ಘಾಟಿಸಿದ ಮಕ್ಕಳ ಸಾಹಿತಿ

ಕನ್ನಡಪ್ರಭ ವಾರ್ತೆ ಸಿದ್ದಾಪುರಭಾರತೀಯ ಸಂದರ್ಭದಲ್ಲಿ ಆಯಾ ನೆಲದಲ್ಲಿ ತನ್ನ ಅವಶ್ಯಕತೆಗೆ ತಕ್ಕಂತೆ ಬೇರೆ ಬೇರೆ ಕಲೆಗಳ ಉದ್ಭವ ಆಗಿದೆ. ಎಲ್ಲದರ ಒಟ್ಟೂ ಉದ್ದೇಶ ಒಂದೇ. ಮನಸ್ಸಿಗೆ ನೀಡುವ ಆನಂದ. ಮನುಷ್ಯನ ಕನಿಷ್ಠ ಅವಶ್ಯಕತೆಗಳಾದ ಅನ್ನ, ನೀರು ಮುಂತಾದವುಗಳ ಹಾಗೆ ಕಲೆಯೂ ಅತ್ಯಂತ ಅನಿವಾರ್ಯ ಎನ್ನುವುದು ಅತಿಶಯೋಕ್ತಿ ಅಲ್ಲ. ಕಲೆಯು ನಮ್ಮ ಮನಸ್ಸಿಗೆ ಆನಂದವನ್ನು ನೀಡುವುದಲ್ಲದೆ ಸಂಸ್ಕಾರವನ್ನೂ ನೀಡುತ್ತದೆ ಎಂದು ಮಕ್ಕಳ ಸಾಹಿತಿ ತಮ್ಮಣ್ಣ ಬೀಗಾರ ಹೇಳಿದರು.ತಾಲೂಕಿನ ಸಾಂಸ್ಕೃತಿಕ ಸಂಘಟನೆ ಕಲಾಭಾಸ್ಕರವು ಸಂಸ್ಕೃತಿ ಸಚಿವಾಲಯದ ಯೋಜನೆಯಡಿಯಲ್ಲಿ ಹಮ್ಮಿಕೊಂಡ ನವರಸ ಯಕ್ಷೋತ್ಸವವನ್ನು ಬಿದ್ರಕಾನ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಉದ್ಘಾಟಿಸಿ ಮಾತನಾಡಿದರು.

ಸಿದ್ದಾಪುರ ತಾಲೂಕಿನ ಭೂಮಿ ಯಕ್ಷಗಾನ ಅತ್ಯಂತ ಹುಲುಸಾಗಿದೆ. ಯಕ್ಷಕವಿಗಳು, ಕಲಾವಿದರು ಹಾಗೂ ಸಂಘಟಕರು ಅತ್ಯಂತ ಪ್ರಭಾವಶಾಲಿಯಾಗಿ ಈ ನೆಲದಲ್ಲಿ ಹಿಂದೆಯೂ ಇದ್ದರು, ಈಗಲೂ ಇದ್ದಾರೆ. ಜಾನಕೈ ತಿಮ್ಮಪ್ಪ ಹೆಗಡೆ, ಬೆಳಸಲಿಗೆ ಗಣಪತಿ ಹೆಗಡೆ ಮುಂತಾದವರ ಯಕ್ಷಸಾಹಿತ್ಯ ಸಾಂಗತ್ಯವು ಸಮೃದ್ಧವಾಗಿವೆ ಎಂದರು.ಕೆ.ಸಿ.ಸಿ ಕೆ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಘವೇಂದ್ರ ಶಾಸ್ತ್ರಿ ಬಿಳಗಿ ಮಾತನಾಡಿ, ಜಾಗತೀಕರಣ ಎನ್ನುವುದು ನಮ್ಮ ಬದುಕಿನ ಎಲ್ಲ ಕ್ಷೇತ್ರಗಳ ಮೇಲೂ ಉಭಯ ರೀತಿಯಲ್ಲೂ ಪರಿಣಾಮ ಆಗಿದೆ. ಒಳಿತನ್ನು ಪಡೆಯುವ ಕಾಲಕ್ಕೆ ಕೆಡುಕುಗಳನ್ನು ಆದಷ್ಟು ಬದಿಗಿರಿಸಿ ಮುನ್ನಡೆಯಬೇಕಾದ ಅನಿವಾರ್ಯತೆ ಇದೆ ಎಂದರು.

ಬಿದ್ರಕಾನ ಸೇ.ಸ.ಸಂಘ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಭಟ್ಟ ಚಟ್ನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿದ್ರಕಾನ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುಬ್ರಹ್ಮಣ್ಯ ಹೆಗಡೆ, ಎಸ್.ಡಿಎಮ್.ಸಿ ಅಧ್ಯಕ್ಷ ವೆಂಕಟರಮಣ ಹೆಗಡೆ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ವಿನಾಯಕ ಹೆಗಡೆ ಕವಲಕೊಪ್ಪ ಸ್ವಾಗತಿಸಿದರು. ನಂತರ ಕವಿ ಇಟಗಿ ಮಹಾಬಲೇಶ್ವರ ಭಟ್ಟ ವಿರಚಿತ ಗೋ ಮಹಿಮೆ ಎಂಬ ಪೌರಾಣಿಕ ಯಕ್ಷಗಾನ ಪ್ರದರ್ಶನ ನಡೆಯಿತು. ಭಾಗವತರಾಗಿ ತುಳಿಗೇರೆ ಗಜಾನನ ಭಟ್ಟ, ಮದ್ದಳೆ ವಾದಕರಾಗಿ ಮೂಡಗಾರು ಶ್ರೀಪಾದ ಭಟ್ಟ, ಚಂಡೆ ವಾದಕರರಾಗಿ ರಾಮ ಭಂಡಾರಿ ಕರ್ಕಿ ಭಾಗವಹಿಸಿದ್ದರು.

ನಾಟ್ಯಾಚಾರ್ಯ ಶಂಕರ ಭಟ್ಟ (ದಿಲೀಪ), ಇಟಗಿ ಮಹಾಬಲೇಶ್ವರ ಭಟ್ಟ (ನಂದಿನಿ), ಸದಾನಂದ ಪಟಗಾರ (ಸುದಕ್ಷಿಣೆ), ಗಣಪತಿ ಹೊನ್ನೆಕೂ (ಜಂಘಾಸುರ), ಗಣಪತಿ ಹೆಗಡೆ ಗುಂಜಗೋಡು (ವಸಿಷ್ಠ), ವೆಂಕಟೇಶ ಬೊಗರಿಮಕ್ಕಿ(ಸಿಂಹ) ಪಾತ್ರ ನಿರ್ವಹಿಸಿದರು. ಭಾಗವತ ಸತೀಶ ಹೆಗಡೆ ದಂಟ್ಕಲ್ ಭಾಗವತಿಕೆಯಲ್ಲಿ ಕವಿ ಮಾಲೆಕೊಡ್ಲು ಶಂಭು ಭಟ್ಟ ವಿರಚಿತ ಚಂದ್ರಹಾಸ ಚರಿತ್ರೆ ಯಕ್ಷಗಾನದಲ್ಲಿ ಶಿರಗುಣಿ ಲಕ್ಷ್ಮೀನಾರಾಯಣ (ದುಷ್ಟಬುದ್ದಿ), ಅವಿನಾಶ ಹೆಗಡೆ ಕೊಪ್ಪ (ಕುಳಿಂದ), ಪ್ರಸನ್ನ ಹೆಗಡೆ ಹೊಸಗದ್ದೆ(ಕಟುಕ), ಚಂದ್ರಹಾಸ (ಪ್ರವೀಣ ಹೆಗಡೆ ತಟ್ಟಿಸರ), ಕು.ಮೈತ್ರಿ ಗೌಡ ಸಂಪೆಸರ (ವಿಷಯೆ), ಪ್ರಣವ ಭಟ್ಟ ಶಿರಳಗಿ (ಮದನ) ಪಾತ್ರ ನಿರ್ವಹಿಸಿದರು.