ರಾಮನಗರ: ಕಲೆ , ಸಾಹಿತ್ಯ ಮತ್ತು ಸಂಸ್ಕೃತಿ ದೇಶದ ಸಂಪತ್ತು. ಅದನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಹೆಚ್ಚಾಗಿ ನಡೆಯಬೇಕಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು

ರಾಮನಗರ: ಕಲೆ , ಸಾಹಿತ್ಯ ಮತ್ತು ಸಂಸ್ಕೃತಿ ದೇಶದ ಸಂಪತ್ತು. ಅದನ್ನು ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಹೆಚ್ಚಾಗಿ ನಡೆಯಬೇಕಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಎಬಿಸಿಡಿ ಡ್ಯಾನ್ಸ್ ಅಕಾಡೆಮಿ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಕರುನಾಡ ಜಾನಪದ ಕಲಾ ಮಹೋತ್ಸವ - 2026 ಮತ್ತು ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಸಮಾಂಭದಲ್ಲಿ ಅವರು ಮಾತನಾಡಿದರು.

ಕಲೆ ಜೀವನದ ಅವಿಭಾಜ್ಯ ಅಂಗ, ಅದು ಪ್ರತಿಯೊಬ್ಬರಲ್ಲೂ ವಿವಿಧ ರೀತಿಯಲ್ಲಿ ಅಭಿವ್ಯಕ್ತವಾಗುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಬೇಕು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ವೇದಿಕೆಗಳು ಅಗತ್ಯ. ಕಲೆ ಇಲ್ಲದ ದೇಶವಿಲ್ಲ, ಸಾಹಿತ್ಯವಿಲ್ಲದ ಭಾಷೆ ಇಲ್ಲ. ಅನಾದಿ ಕಾಲದಿಂದಲೂ ಜನ ಜೀವನದೊಂದಿಗೆ ಕಲೆ ಬೆರೆತಿದೆ. ಒಂದೊಂದು ಪ್ರದೇಶದಲ್ಲೂ ಒಂದೊಂದು ಭಾಷೆ, ಕಲೆ, ಸಂಸ್ಕೃತಿ ರೂಪಗೊಂಡು ಸಮಾಜದೊಂದಿಗೆ ಅನನ್ಯವಾಗಿ ಬೆರೆತಿವೆ. ಮಕ್ಕಳಿಗೆ ಬಾಲ್ಯದಿಂದಲೇ ಅವುಗಳ ಬಗ್ಗೆ ತಿಳಿಸಬೇಕು ಎಂದು ಹೇಳಿದರು.

ಮಕ್ಕಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಬೇಕು. ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯಲ್ಲಿ ಅರಿತುಕೊಳ್ಳಲು ಮಕ್ಕಳಲ್ಲಿ ಆಸಕ್ತಿ ಬೆಳೆಸಬೇಕು. ಪೋಷಕರು ಮಕ್ಕಳನ್ನು ಕೇವಲ ಪಠ್ಯಗಳಿಗೆ ಮಾತ್ರ ಸೀಮಿತಗೊಳಿಸದೆ, ಕಲೆ ಸಾಹಿತ್ಯದಲ್ಲೂ ತೊಡಗಿಕೊಳ್ಳಲು ಪ್ರೋತ್ಸಾಹಿಸಬೇಕು ಎಂದು ಇಕ್ಬಾಲ್ ಹುಸೇನ್ ಹೇಳಿದರು.

ರಾಜ್ಯ ವೈಜ್ಞಾನಿಕ ಸಂಶೋಧನಾ ಮಂಡಳಿ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ಕಲೆ ಸಾಧಕನ ಸ್ವತ್ತೇ ಹೊರತು ಸೋಮಾರಿಗಳ ಸ್ವತ್ತಲ್ಲ. ಕಲೆ ನಮ್ಮ ಬದುಕನ್ನು ರೂಪಿಸುವ ಜೊತೆಗೆ ಮನಸ್ಸನ್ನು ನೆಮ್ಮದಿಗೊಳಿಸುತ್ತದೆ. ಮಾನಸಿಕವಾಗಿ ಸದೃಢರಾಗುವಂತೆ ಮಾಡುತ್ತದೆ. ನಮ್ಮ ಬದುಕಿನ ಕೌಶಲ್ಯ, ರೀತಿ ರಿವಾಜು, ಸಂಸ್ಕೃತಿಯನ್ನು ಕಲಿಸುವ ಜೊತೆಗೆ ಪುರಾತನ ಘಟನೆಗಳನ್ನು ಮರುಕಳಿಸವಂತೆ ಮಾಡುತ್ತದೆ ಎಂದು ತಿಳಿಸಿದರು.

ಮನುಷ್ಯ ಮತ್ತು ಮನುಷ್ಯನ ವ್ಯಕ್ತಿತ್ವವನ್ನು ಬದಲಾಯಿಸುವ ಶಕ್ತಿ ಕಲೆಗಿದೆ. ಸಾಮಾಜಿಕ ಜಾಲತಾಣಗಳು ಎಲ್ಲರ ಮನಸ್ಸುಗಳು ವಿಚಲಿತಗೊಳ್ಳುವಂತೆ ಮಾಡಿ, ಕಲೆಗಳನ್ನು ಬಲಿ ಹಾಕುತ್ತಿವೆ. ಇದಾಗಬಾರದು ಅಂದರೆ ಮಕ್ಕಳನ್ನು ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯತ್ತ ಹೆಚ್ಚು ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸತೀಶ್ ಮಾತನಾಡಿ, ಇಂದು ಅನೇಕ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಅವರನ್ನು ಕಲೆಯಲ್ಲಿ ತೊಡಗಿಸಿದರೆ ಬದಲಾವಣೆ ಕಾಣಬಹುದು. ಕಲೆ ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಜ್ಞಾನಾರ್ಜನೆ ಮಾಡುತ್ತಿರುವ ಎಬಿಸಿಡಿ ಡ್ಯಾನ್ಸ್ ಅಕಾಡೆಮಿ ಕಾರ್ಯವನ್ನು ಶ್ಲಾಘಿಸಿದರು.

ಶ್ರೀ ರೇವಣಸಿದ್ದೇಶ್ವರ ಸ್ವಾಮಿ ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮಿ, ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಪದ್ಮಶ್ರೀ ಪುರಸ್ಕೃತ ಹಾಸನ ರಘು, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಎ. ಬಿ. ಚೇತನ್ ಕುಮಾರ್, ನಗರಸಭೆ ಮಾಜಿ ಅಧ್ಯಕ್ಷ ರವಿ ಕುಮಾರ್, ಹಿಂದುಳಿದ ವರ್ಗಗಳ ಒಕ್ಕೂಟ ಜಿಲ್ಲಾಧ್ಯಕ್ಷ ರೖಡ್ ನಾಗರಾಜ್, ಯುವ ಕಾಂಗ್ರೆಸ್ ಮುಖಂಡ ಗುರುಪ್ರಸಾದ್, ಕರವೇ ಜಿಲ್ಲಾಧ್ಯಕ್ಷ ಎಂಎನ್ ಆರ್ ರಾಜು, ಡ್ಯಾನ್ಸ್ ಮಾಸ್ಟರ್ ರವಿಕುಮಾರ್, ಎಂಐ ಲೈಫ್ ಸ್ಟೈಲ್ ಸಿಟಿಸಿ ಹೇಮಂತ್ ಕುಮಾರ್, ಕಲಾಜ್ಯೋತಿ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕ ಎಸ್.ರೇಣುಕಾಪ್ರಸಾದ್, ನಂದಗೋಕುಲ ವೃದ್ಧಾಶ್ರಮ ಸಂಸ್ಥಾಪಕ ಡಾ.ಎನ್.ವಿ.ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.

ಕೋಟ್ ...............

ಈ ಹಿಂದೆ ಚಲನಚಿತ್ರ ಗೀತೆಗಳು ಸಂಸ್ಕೃತಿ, ಪ್ರೀತಿ ಕೊಡುತ್ತಿದ್ದವು, ಈಗ ಹೊಡಿಬಡಿ, ಕೊಲ್ಲುವ ಸಂಸ್ಕೃತಿಯನ್ನು ಕೊಡುತ್ತಿದೆ. ವೈದ್ಯರು, ವಿಕೃತಿ ಮನಸ್ಸು ಹಾಗೂ ಹೊಡಿಬಡಿ ಕೊಲ್ಲುವ ಸಂಸ್ಕೃತಿಯಿಂದ ದೂರ ಇರಬೇಕಾದರೆ ಕಲೆಯನ್ನು ಆರಾಧಿಸಿ, ಪ್ರೀತಿಸಿ ಗೌರವಿಸುವ ಕೆಲಸ ಆಗಬೇಕು.

- ಹುಲಿಕಲ್ ನಟರಾಜು

ಬಾಕ್ಸ್................

ಕಲಾಜ್ಯೋತಿ ಜಾನಪದ ರತ್ನ ಪ್ರಶಸ್ತಿ ಪ್ರದಾನ

ಕಲಾಜ್ಯೋತಿ ಜಾನಪದ ರತ್ನ ಪ್ರಶಸ್ತಿಯನ್ನು ಅಂತಾರಾಷ್ಟ್ರೀಯ ಜಾನಪದ ಕಲಾವಿದ ಎಸ್.ಪ್ರದೀಪ್, ಡೊಳ್ಳು ಕುಣಿತ ಕಲಾವಿದ ರಮೇಶ್, ಪೂಜಾ ಕುಣಿತ ಕಲಾವಿದ ಪಾರ್ಥಸಾರಥಿ, ತಂಬೂರಿ ಕಲಾವಿದ ತಂಬೂರಿ ಶಿವಣ್ಣ, ತಮಟೆ ಕಲಾವಿದ ಮಲ್ಲೇಶ್, ಕೋಲಾಟ ಕಲಾವಿದ ಜಿ.ಚನ್ನಪ್ಪ, ಭರತನಾಟ್ಯ ಕಲಾವಿದ ವಿದುಷಿ ಹೇಮಾ, ಯಕ್ಷಗಾನ ಕಲಾವಿದೆ ಪಂಚಮಿ, ಗಾಯಕ ಕೆಂಗಲ್ ವಿನಯ್ ಕುಮಾರ್, ರಂಗಭೂಮಿ ಕಲಾವಿದ ಎಚ್.ವಿ.ಮೂರ್ತಿ ಅವರಿಗೆ ಪ್ರದಾನ ಮಾಡಲಾಯಿತು.

ಬಾಕ್ಸ್ ...........

ಕಲಾ ಜ್ಯೋತಿ ಕನ್ನಡರತ್ನ ಪ್ರಶಸ್ತಿ ಪ್ರದಾನ

ಪತ್ರಕರ್ತರಾದ ಸು.ತಾ.ರಾಮೇಗೌಡ, ಚೆಲುವರಾಜು, ರುದ್ರೇಶ್ , ಕೆ.ಅರುಣ್ , ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಜಗದೀಶ್, ಕನ್ನಡಪರ ಹೋರಾಟಗಾರ ಗೋವಿಂದರಾಜು, ಆರ್ ಬಿಎಲ್ ಮಾಲೀಕ ಲೋಕೇಶ್ , ಭರತನಾಟ್ಯ ಕಲಾವಿದೆ ಕಾವ್ಯಶ್ರೀ, ಗಾಯಕ ರಘುನಂದನ್ , ರೇಣುಕಾ ಟಿಫಾನಿಸ್ ಮಾಲೀಕ ನಾಗರಾಜ್ ಅವರಿಗೆ ಕಲಾ ಜ್ಯೋತಿ ಕನ್ನಡರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

16ಕೆಆರ್ ಎಂಎನ್ 1,2.ಜೆಪಿಜಿ

1.ರಾಮನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕರುನಾಡ ಜಾನಪದ ಕಲಾ ಮಹೋತ್ಸವ ಸಮಾರಂಭದಲ್ಲಿ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿದರು.

2.ರಾಮನಗರದ ಅಂಬೇಡ್ಕರ್ ಭವನದಲ್ಲಿ ನಡೆದ ಕರುನಾಡ ಜಾನಪದ ಕಲಾ ಮಹೋತ್ಸವ ಸಮಾರಂಭದಲ್ಲಿ

ಸಾಧಕರಿಗೆ ಕಲಾ ಜ್ಯೋತಿ ಕನ್ನಡರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.