ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಹಿಂಸಾಚಾರವನ್ನು ಮಹಿಳೆಯರು ಮತ್ತು ಮಕ್ಕಳು ಅನುಭವಿಸುತ್ತಿದ್ದಾರೆ. ಇದಕ್ಕೆ ದಿವ್ಯ ಔಷಧ ಎಂದರೆ ಕಲೆ ಸಾಹಿತ್ಯ ಸಾಂಸ್ಕೃತಿಕ ಚಟುವಟಿಕೆ ಕಡೆ ಹೆಚ್ಚು ಗಮನ ಕೊಡಬೇಕಾಗಿದೆ ಎಂದು ಹೆಸರಾಂತ ಸಾಹಿತಿ ಸುಬ್ಬು ಹೊಲೆಯಾರ್ ಅಭಿಪ್ರಾಯಪಟ್ಟರು.ನಗರದ ಸಂಸ್ಕೃತ ಭವನದಲ್ಲಿ ಮಾಣಿಕ್ಯ ಪ್ರಕಾಶನ ಇವರ ಸಂಯುಕ್ತಾಶ್ರಯದಲ್ಲಿ ರಾಜ್ಯ ಮಟ್ಟದ ಒಂಬತ್ತನೇ ಕವಿಕಾವ್ಯ ಸಂಭ್ರಮ ಅನ್ನು ತಮಟೆ ಬಾರಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪ್ರಕಾಶನ ಕೇವಲ ಪುಸ್ತಕಕ್ಕೆ ಮಾತ್ರ ಸೀಮಿತವಾಗಬಾರದು, ಸಾಹಿತ್ಯ, ಸಂಸ್ಕೃತಿ ಹೀಗೆ ವಿವಿಧ ಕ್ಷೇತ್ರಗಳಿಗೂ ವಿಸ್ತರಿಸಬೇಕು, ಈ ನಿಟ್ಟಿನಲ್ಲಿ ಮಾಣಿಕ್ಯ ಪ್ರಕಾಶನ ಕೆಲಸ ಮಾಡುತ್ತಿದ್ದು ದತ್ತಿ ಪ್ರಶಸ್ತಿಯನ್ನು ಪಡೆಯುವ ಮೂಲಕ ಮುನ್ನಡೆಯುತ್ತಿದೆ. ಪ್ರಶಸ್ತಿಗಳನ್ನು ಪಡೆಯುವುದು ಇಂದಿನ ದಿನಗಳಲ್ಲಿ ಸವಾಲಿನ ಕೆಲಸವಾಗಿದೆ. ಈ ನಡುವೆ ಒಳ್ಳೆ ಕೃತಿಕಾರರನ್ನು ಆಯ್ಕೆ ಮಾಡಿ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ವೈಚಾರಿಕತೆ ಅಡಿಯಲ್ಲಿ ವಿಜ್ಞಾನ ಕಾಣಬೇಕಾಗಿದೆ ಎಂದರು. ಅಂತಿಮವಾಗಿ ನಮ್ಮೊಳಗಿನ ಪ್ರೀತಿ, ಕರುಣೆ ಬರಬೇಕು. ಕನ್ನಡದ ಪ್ರಜ್ಞೆ ವಿಶ್ವ ಪ್ರಜ್ಞೆ ಆಗಬೇಕು. ವ್ಯಕ್ತಿತ್ವವನ್ನ ಕಾಪಾಡಿಕೊಳ್ಳಬೇಕು. ಕಾವ್ಯ ಎಂದರೇ ಜನರ ಮಿಡಿಯುವ ಹೃದಯ ಆಗಿರಬೇಕು ಎಂದು ಹೇಳಿದರು.
ರಾಜ್ಯ ಮಟ್ಟದ ಒಂಬತ್ತನೇ ಕವಿಕಾವ್ಯ ಸಂಭ್ರಮದ ಸರ್ವಾಧ್ಯಕ್ಷರಾದ ಮುಂಬಯಿಯ ವಿಶ್ವೇಶ್ವರ ಎನ್. ಮೇಟಿ ಮಾತನಾಡಿ, ಸರ್ವ ಜನಾಂಗದ ಶಾಂತಿಯ ತೋಟ ಎಂಬ ಮಾತನ್ನು ಪ್ರತಿಯೊಬ್ಬರೂ ತಮ್ಮ ಅಂತರಾಳಕ್ಕೆ ಇಳಿಸಿಕೊಳ್ಳಬೇಕು. ಅಳವಡಿಸಿಕೊಳ್ಳಬೇಕು. ಇಲ್ಲವಾದರೆ ಮಹನೀಯರ ಮಾತುಗಳು ಕೇವಲ ಮಾತುಗಳಾಗಿಯೇ ಉಳಿಯುತ್ತವೆಯೇ ಹೊರತು ಕಾರ್ಯರೂಪಕ್ಕೆ ಬರುವುದು ಅಸಾಧ್ಯ. ಕನ್ನಡ ನಾಡಿನಲ್ಲಿ ಸಾಕಷ್ಟು ಸಂಖ್ಯೆಯ ಕವಿಗಳು ಕನ್ನಡದ ಮನಸ್ಸುಗಳನ್ನು ಗೆಲ್ಲುವ ಪ್ರಯತ್ನ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಕನ್ನಡ ನಾಡಿನಲ್ಲಿ ಕವಿ ಕಾವ್ಯಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿ ಎಂದರು.ಹಾಸನ ಜಿಲ್ಲೆಯಲ್ಲಿ ಕನ್ನಡದ ಮೊದಲ ಶಾಸನ ಹಲ್ಮಿಡಿ ಶಾಸನ ದೊರತಿರುವುದು ಹಾಸನ ಜಿಲ್ಲೆಯ ಹೆಮ್ಮೆಯ ವಿಚಾರ. ಜೊತೆಗೆ ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಎಲ್ಲಾ ಕ್ಷೇತ್ರಗಳಲ್ಲಿ ಅನೇಕ ಕೊಡುಗೆಗಳನ್ನು ನೀಡುವ ಮೂಲಕ ರಾಜ್ಯ, ಹಾಗೂ ದೇಶಕ್ಕೆ ಮಾದರಿಯಾಗಿದೆ ಎಂದು ಕಿವಿಮಾತು ಹೇಳಿದರು.
ವಚನಕಾರರು ತಮ್ಮ ವಚನಗಳ ಮೂಲಕವೇ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು. ಅವರನ್ನು ಬದುಕಿದ್ದಾಗ ಯಾರು ಸನ್ಮಾನಿಸಿ ಗೌರವಿಸಲಿಲ್ಲ, ಆದರೆ ಅವರ ಆದರ್ಶಗಳು ಇಂದಿಗೂ ಮಾದರಿ. ಕನ್ನಡದ ಮನಸ್ಸುಗಳು ಪ್ರಪಂಚದಾದ್ಯಂತ ವಿಸ್ತರಿಸಿವೆ ಇದು ಕನ್ನಡದ ಶಕ್ತಿ. ಮುಂದಿನ ದಿನಗಳಲ್ಲಿ ಕನ್ನಡದ ಶಕ್ತಿ ಇನ್ನಷ್ಟು ಹೆಚ್ಚಾಗಲಿ ಎಂದರು.ಸಂಘಟನೆಗಳು ತಮ್ಮದೇ ಆದ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಆದರೆ ಕನ್ನಡ ಸಾಹಿತ್ಯ ಪರಿಷತ್ ಇತ್ತೀಚಿನ ದಿನಗಳಲ್ಲಿ ರಾಜಕೀಯ ಬಣ್ಣ ಪಡೆದುಕೊಳ್ಳುತ್ತಿದ್ದು, ಕಾರ್ಯಕ್ರಮಗಳಲ್ಲಿ ಸಾಹಿತಿಗಳಿಗಿಂತ ರಾಜಕಾರಣಿಗಳು ವ್ಯಾಪಿಸಿರುವುದು ಬೇಸರದ ಸಂಗತಿ ಎಂದು ಹೇಳಿದರು.
ಜಿಲ್ಲೆಯ ಕೇಂದ್ರವಾಗಿ ಹತ್ತು ಹಲವಾರು ವೈಶಿಷ್ಟ್ಯಗಳಿಂದ ಕೂಡಿದ ಹಾಸನ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ಪುರಾತನ ಕಾಲದಿಂದಲೂ ನಾಡಿನ ಮೇಲೆ ಪ್ರಭಾವ ಬೀರುತ್ತ ಬಂದಿರುತ್ತದೆ. ಮೊಟ್ಟಮೊದಲ ಕನ್ನಡ ಲಿಪಿಯುಳ್ಳ ಶಿಲಾಶಾಸನ ನೀಡಿದ ಕೀರ್ತಿ ಈ ಜಿಲ್ಲೆಗೆ ಇದೆ. ಒಂದು ಕಾಲದಲ್ಲಿ ಸಿಂಹಾಸನಪುರವೆನಿಸಿತ್ತು. ಸಿಂಹಾಸನ ಎಂಬ ಪದದಲ್ಲಿಯ ಸಿಂ ಎಂಬುದು ಲೋಪವಾಗಿ ಹಾಸನ ಎಂದಷ್ಟೇ ಉಳಿದಿದೆ ಎಂದು ಹಾಸನದ ಹೆಸರಿನ ಮಹತ್ವ ತಿಳಿಸಿದರು.ಕನ್ನಡದ ಪ್ರಮುಖ ಕಾದಂಬರಿಕಾರರಾದ, ಶಿವರಾಮ ಕಾರಂತರು, ಎಸ್.ಎಲ್. ಭೈರಪ್ಪರು ಮರಾಠಿಯ ಜನಮನದಲ್ಲಿಯೂ ತುಂಬಿರುವರು. ಈ ನಿಟ್ಟಿನಲ್ಲಿ ಅವರ ಕಾದಂಬರಿಗಳನ್ನು ಕನ್ನಡದಿಂದ ಮರಾಠಿಗೆ ಅನುವಾದ ಕಾರ್ಯದಲ್ಲಿ ತೊಡಗಿರುವ ಉಮಾ ಕುಲಕರ್ಣಿ, ಮಿನಾ ವಾಂಗಿಕರ, ಮೊದಲಾದವರ ಸಾಧನೆ ಮೆಚ್ಚುವಂಥದ್ದು. "ಎಲ್ಲಾದರೂ ಇರು, ಎಂಥಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು " ಎನ್ನುವ ಕವಿವಾಣಿಯಂತೆ ಮಹಾರಾಷ್ಟ್ರದ ಕನ್ನಡಿಗರಾದ ನಾವುಗಳು ಪ್ರಾಮಾಣಿಕವಾಗಿ ಇತ್ತ ಜನ್ಮಭೂಮಿಗೂ ಮತ್ತು ಅತ್ತ ಕರ್ಮಭೂಮಿಗೂ ಭೇದಭಾವ ಮಾಡದೇ ಸ್ಪಂದಿಸುತ್ತ ಬಂದಿರುತ್ತೇವೆ ಎಂದು ಹೇಳಿದರು.ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್ ಪ್ರಾಸ್ತಾವಿಕ ಮಾತನಾಡಿ, ಕೆಲಸದಲ್ಲಿ ನಿಸ್ವಾರ್ಥವಾಗಿ ಮಾಡಲಾಗುತ್ತಿದೆ. ಸಾಕಷ್ಟು ಸಂಘಟನೆ ಸಮಾಜದಲ್ಲಿದೆ. ಅದರಲ್ಲಿ ಕೆಲವು ಸಂಘಟನೆಗಳು ಗಟ್ಟಿಯಾಗಿ ಕೆಲಸ ಮಾಡುತ್ತಾ ನೆಲೆಯಲ್ಲಿದೆ. ಯಾವುದೇ ಪ್ರಶಸ್ತಿ ಪಡೆಯಲು ಅದರ ಹಿಂದೆ ಅರ್ಜಿ ಹಾಕಿಕೊಂಡು ಹೋಗದೇ ತಾನಾಗೆ ಬಂದ ಪ್ರಶಸ್ತಿಯಲ್ಲಿ ಗಟ್ಟಿತನ ಎಂಬುದು ಇರುತ್ತದೆ ಎಂದು ಅಭಿಪ್ರಾಯಪಟ್ಟರು. ಸಾಹಿತ್ಯ ಸಂಘಟನೆಗಳು ಸಾಹಿತ್ಯಕ್ಕೆ ಮಾತ್ರ ಒಲವು ತೋರಬೇಕು ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಜನ್ನ ಕಾವ್ಯ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಹೊಯ್ಸಳ ಸಾಹಿತ್ಯ ಹಾಗೂ ಹೊಯ್ಸಳ ಸಾಂಸ್ಕೃತಿಕ ಪ್ರಶಸ್ತಿ ನಡೆಸಿಕೊಡಲಾಯಿತು. ಅಧಿಕಾರ ಹಸ್ತಾಂತರವನ್ನು ಕವಿಕಾವ್ಯ ಸಂಭ್ರಮ ನಿಕಟಪೂರ್ವ ಸರ್ವಾಧ್ಯಕ್ಷ ಡಾ. ಅಮರೇಶ್ ಪಾಟೀಲ್ ನಡೆಸಿಕೊಟ್ಟರು.ಇದೇ ವೇಳೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್. ಉಪ್ಪಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಗೌರವಾಧ್ಯಕ್ಷ ರವಿನಾಕಲಗೂಡು, ಹಿರಿಯ ಪತ್ರಕರ್ತ ಹಾಗೂ ಸಾಹಿತಿ ನಾಗರಾಜು ಹೆತ್ತೂರ್, ಮಾಣಿಕ್ಯ ಪ್ರಕಾಶಕರಾದ ದೀಪಾ ಉಪ್ಪಾರ್, ಸಾಹಿತಿ ಶೈಲಜಾ ಹಾಸನ್, ಪದ್ಮಾವತಿ ವೆಂಕಟೇಶ್, ಸುಮಾ, ಸಿ.ಎನ್. ನೀಲಾವತಿ ಇತರರು ಉಪಸ್ಥಿತರಿದ್ದರು.