ಸಾರಾಂಶ
ಕನ್ನಡಪ್ರಭ ವಾರ್ತೆ ಹಲಗೂರು
ಮನುಷ್ಯನಲ್ಲಿರುವ ಜಡತ್ವವನ್ನು ನೀಗಿಸು ಸಂಸ್ಕೃತನಾಗಿ ಮಾಡುವುದು ಕಲೆ, ಸಂಗೀತ , ಸಾಹಿತ್ಯ, ಸಂಸ್ಕೃತಿಯಿಂದ ಮಾತ್ರ ಸಾಧ್ಯ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್ ಗೌಡ ಹೇಳಿದರು.ಡಿ.ಹಲಸಹಳ್ಳಿಯ ಗವಿಮಠದಲ್ಲಿ ಕೃಷ್ಣ ರಾಯಚೂರ್ ರಚಿಸಿರುವ ಹಳಗನ್ನಡ ಕಾವ್ಯ ಕಮ್ಮಟ ಲಾಂಛನ ಬಿಡುಗಡೆ, ಷಡಕ್ಷರ ಪೀಠ ಧನಗೂರು, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಸಂಸ ಥಿಯೇಟರ್ ಬೆಂಗಳೂರು ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ನಡೆಯುತ್ತಿರುವ ಷಡಕ್ಷರ ಕವಿ -ಕಾವ್ಯ-ಪರಿಚಯ ಕುರಿತ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳ ಜ್ಞಾನವನ್ನು ಕೇವಲ ಪಠ್ಯಪುಸ್ತಕಗಳಿಗಷ್ಟೇ ಸೀಮಿತ ಮಾಡಿದ್ದೇವೆ. ಅವರಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿಯನ್ನು ಆವಾಹನೆ ಮಾಡುವ ಪ್ರಯತ್ನಬೇಕು. ಇದರ ಜೊತೆಗೆ ನಮ್ಮ ನಾಡಿನ ನುಡಿ ಆದ ಹಳಗನ್ನಡಕ್ಕೆ ಹಾಗೂ ಸಂಸ್ಕೃತಿಗೆ ಆದ್ಯತೆ ನೀಡಿ ಬೆಳೆಸಬೇಕು ಎಂದರು.ಗವಿಮಠದಲ್ಲಿ ಷಡಕ್ಷರ ದೇವ ಬರೆದಿರುವ ಶಬರ ಶಂಕರ ವಿಳಾಸಂ, ರಾಜಶೇಖರ ವಿಳಾಸಂ, ವೃಷಭೇಂದ್ರ ವಿಜಯಂ ಮುಂತಾದ ಕೃತಿಗಳನ್ನು ವಿದ್ಯಾರ್ಥಿಗಳು ಓದಿ ತಿಳಿದುಕೊಂಡು ಜಿಲ್ಲೆಯ ಹಿರಿಮೆ ಎತ್ತಿ ಹಿಡಿದು ಅವುಗಳನ್ನು ಬೆಳಕಿಗೆ ತರುವ ನಿಟ್ಟಿನಲ್ಲಿ ಎಲ್ಲರೂ ಮುಂದಾಗಬೇಕು ಎಂದರು.
ಈ ಹಿಂದೆ ರಾಜ ಮನೆತನಗಳು ಕಲೆ, ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಆದರೆ, ಈಗ ಸರ್ಕಾರ ಅಥವಾ ಮಠ ಮಾನ್ಯಗಳು ಪ್ರೋತ್ಸಾಹ ನೀಡಬೇಕು. ಮಠಮಾನ್ಯಗಳ ಕೆಲಸ ನಮ್ಮ ಹೃದಯವನ್ನು ಪರಿಷ್ಕರಿಸುವಂಥದ್ದು ಎಂದರು.ಸಾಹಿತ್ಯ ಕೃತಿಗಳನ್ನು ರಚಿಸಿದ ವ್ಯಕ್ತಿಗಳ ಬಗ್ಗೆ ಪರಿಚಯ ಮಾಡಲು ಸೂಕ್ತ ವೇದಿಕೆ ಸಿಗುವುದಿಲ್ಲ. ಅದೇ ಒಂದು ರಾಜಕೀಯ ಸಭೆ ಸಮಾರಂಭಕ್ಕೆ ಸಾಕಷ್ಟು ಜನರು ಸೇರುತ್ತಾರೆ. ಕವಿಗೋಷ್ಠಿ, ಸಾಹಿತ್ಯ ವಿಮರ್ಶೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮ ಗಳಿಗೆ ಜನರು ಸೇರುವುದಿಲ್ಲ ಎಂದು ವಿಷಾದಿಸಿದರು.
ನಿವೃತ್ತ ಮುಖ್ಯ ಶಿಕ್ಷಕರಾದ ಡಿ.ರಾಮ ಮಾತನಾಡಿ, ಗುಡ್ಡ ಗಾಡಿನ ಪ್ರದೇಶವಾಗಿದ್ದ ಈ ಸ್ಥಳದಲ್ಲಿ ಷಡಕ್ಷರ ದೇವ ಕಾವ್ಯಗಳನ್ನು ರಚಿಸಿ ಪುಣ್ಯಕ್ಷೇತ್ರವನ್ನಾಗಿ ಪರಿವರ್ತಿಸಿದ್ದಾರೆ. ಪೀಠಾಧ್ಯಕ್ಷರಾಗಿರುವ ಷಡಕ್ಷರ ಸ್ವಾಮೀಜಿಗಳು ಭಕ್ತಾಧಿಗಳ ಸಹಕಾರ ಪಡೆದು ದೊಡ್ಡ ಸಾಹಿತ್ಯ ಕ್ಷೇತ್ರವನ್ನಾಗಿ ಮಾಡಿದ್ದಾರೆ ಎಂದರು.ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಧನಗೂರು ಮಠದ ಮುಮ್ಮಡಿ ಷಡಕ್ಷರ ದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಧನಗೂರು ಒಂದು ಪವಿತ್ರ ಹಾಗೂ ಪುಣ್ಯಕ್ಷೇತ್ರ. ಗವಿಮಠದಲ್ಲಿ ಷಡಕ್ಷರ ದೇವಾ ಹಲವು ಕೃತಿಗಳನ್ನು ರಚಿಸಿರುವುದರಿಂದ ಧನಗೂರು ಹಾಗೂ ಗವಿಮಠ ಹೆಗ್ಗಳಕೆಗೆ ಪಾತ್ರವಾಗಿದೆ ಎಂದರು.
ಷಡಕ್ಷರ ಕವಿಯ ಪರಿಚಯ ಮತ್ತು ಅವರು ರಚಿಸಿದ ಸಾಹಿತ್ಯ ಕೃತಿಗಳ ಬಗ್ಗೆ ಸವಿಸ್ತಾರವಾಗಿ ಸಭೆಯಲ್ಲಿ ವಿವರಿಸಿ, ಪುಸ್ತಕ ಮಸ್ತಕ ರಕ್ಷಕ, ಪುಸ್ತಕಗಳನ್ನು ಓದುವುದರಿಂದ ಜ್ಞಾನ, ಬುದ್ಧಿ ಶಕ್ತಿ ವಿಸ್ತಾರವಾಗುತ್ತದೆ. ಆದರೆ, ಮೊಬೈಲ್ ಗಳಿಂದ ಬುದ್ಧಿಶಕ್ತಿ ಕುಂಠಿತವಾಗುತ್ತಿದೆ. ಮೊಬೈಲ್ ನಮ್ಮನ್ನು ತಲೆತಗ್ಗಿಸುವಂತೆ ಮಾಡುತ್ತದೆ. ಪುಸ್ತಕಗಳು ನಮ್ಮನ್ನು ತಲೆ ಎತ್ತುವಂತೆ ಮಾಡುತ್ತದೆ ಎಂದರು.ಇದೇ ಸಂದರ್ಭದಲ್ಲಿ ಕೃಷ್ಣ ರಾಯಚೂರು ಬರೆದಿರುವ ಅಳಗನ್ನಡ ಕಾವ್ಯ ಕಮ್ಮಟ ಲಾಂಛನವನ್ನು ವಿದ್ಯಾರ್ಥಿಗಳ ಮೂಲಕ ಬಿಡುಗಡೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಂಶುಪಾಲ ಡಾ.ಮ.ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಹಾಯಕ ನಿರ್ದೇಶಕ ಎನ್.ಆರ್.ವೇಣುಗೋಪಾಲ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಡಿ. ದೊಡ್ಡಲಿಂಗೇಗೌಡ ರಾಜಶೇಖರ ವಿಳಾಸಂ, ವಿಶ್ರಾಂತ ಪ್ರಾಧ್ಯಾಪಕ ಚಂದ್ರಶೇಖರ ನಾದೂರು ಶಬರ ಶಂಕರ ವಿಳಾಸ, ಭಾರತೀ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಮಮತಾನಾಗ್ ಅವರು ವೃಷಭೇಂದ್ರ ವಿಜಯಂ ಹಾಗೂ ಇಂಗ್ಲಿಷ್‌ನ 13 ಕವಿಗಳ ಸ್ವರಚನಾ ಕವಿತೆ ವಾಚಿಸಿದರು. ನಂತರ ಭಾಸನ ಕರ್ಣಭಾರ ನಾಟಕ ಪ್ರದರ್ಶನಗೊಂಡಿತು.ಕಾರ್ಯಕ್ರಮದಲ್ಲಿ ಡಿ.ಹಲಸಹಳ್ಳಿ ಗವಿಮಠದ ಷಡಕ್ಷರ ಸ್ವಾಮೀಜಿ, ಧನಗೂರು ಮಠದ ಮುಮ್ಮಡಿ ಷಡಕ್ಷರ ದೇಶಿ ಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಕೂಡ್ಲೂರು ವೆಂಕಟಪ್ಪ, ನಿವೃತ್ತ ಶಿಕ್ಷಕ ಡಿ. ರಾಮು, ಬಸವೇಶ್ವರ ಪ್ರೌಢಶಾಲೆ ಮುಖ್ಯ ಶಿಕ್ಷಕಿ ಶೈಲಜಾ, ಬೆಂಗಳೂರು ಸಂಸ ಥಿಯೇಟರ್‌ನ ಸಂಸ್ಥಾಪಕ ಗೌರವಾಧ್ಯಕ್ಷ ಎಂ.ಜಯರಾಮ, ಸುರೇಶ್ , ದಡಮಳ್ಳಿ ಉಮೇಶ, ಸೇರಿದಂತೆ ಇತರರು ಇದ್ದರು.