ಯಲ್ಲಾಪುರ: ಕಲೆ, ಸಂಗೀತ, ಸಾಹಿತ್ಯವು ಜಾತಿಯನ್ನು ಮೀರಿದೆ. ಎಲ್ಲರೂ ಒಂದೇ ಎಂಬ ಭಾವನೆ ಬೆಳೆಸಿಕೊಂಡಾಗ ನಮ್ಮನ್ನೆಲ್ಲ ಒಗ್ಗೂಡಿಸುತ್ತದೆ. ಎಲ್ಲರಿಗೂ ಸಮಾನತೆ ಎಂಬುವುದು ಅಂಬೇಡ್ಕರ್, ಗಾಂಧಿ ಕಂಡ ಕನಸು. ನಾಟಕವೂ ಕೂಡ ಜಾತಿಗೆ ಮೀರಿದ್ದು ಎಂದು ಹಿರಿಯ ರಂಗಕರ್ಮಿ, ಮಂಚಿಕೇರಿ ರಂಗ ಸಮೂಹದ ಅಧ್ಯಕ್ಷ ಆರ್.ಎನ್. ಭಟ್ಟ ದುಂಡಿ ಹೇಳಿದರು.

ದೇವರಕಲ್ಲಳ್ಳಿಯ ಬಯಲು ರಂಗ ಮಂದಿರದಲ್ಲಿ ಗುರುವಾರ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ದೇವರಕಲ್ಲಳ್ಳಿ ಸಿದ್ದಿ ಟ್ರಸ್ಟ್ ಸಹಯೋಗದಲ್ಲಿ ನಡೆದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭವನ್ನು ಸಿದ್ದಿಯರ ಸಾಂಪ್ರದಾಯಿಕ ವಾದನವಾಗಿರುವ ಡಮಾಮಿ ನುಡಿಸಿ, ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಭಾಷೆಯಂತೆಯೇ ಕೊಂಕಣಿ ಭಾಷೆಗೆ ಕೂಡ ಬಾಂಧವ್ಯ ಬೆಸೆಯುವ ಶಕ್ತಿಯಿದೆ. ನಮ್ಮ ಪ್ರದೇಶದಲ್ಲಿ ಅನೇಕರು ಕೊಂಕಣಿ ಭಾಷೆಯನ್ನು ಮನೆಯಲ್ಲಿ ಮಾತನಾಡುವ ರೂಢಿ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಜೋಕಿ೦ ಸ್ಟ್ಯಾನಿ ಅಲ್ವಾರೀಸ್ ಮಾತನಾಡಿ, ಸಿದ್ದಿ ಜನಾಂಗದವರು ಎಲ್ಲ ರಂಗದಲ್ಲೂ ಮುಂದಿದ್ದಾರೆ. ಹಾಗೆ ಕೊಂಕಣಿ ನಿಮ್ಮ ತಾಯಿ, ಕನ್ನಡ ನಿಮ್ಮ ಸಾಕು ತಾಯಿ; ಎರಡನ್ನು ಉಳಿಸಿ ಬೆಳೆಸಿ ಎಂದರು.

ಕನ್ನಡ ಕೊಂಕಣಿ ಲೇಖಕ ಶಿರಸಿಯ ವಾಸುದೇವ ವಿ. ಶಾನಭಾಗ್ ಮಾತನಾಡಿ, ೧೯೮೫ರಲ್ಲಿ ಸಿದ್ದಿ ಜನರ ಮೊದಲ ನಾಟಕ "ಕಪ್ಪು ಜನ ಕೆಂಪು ನೆರಳು " ನಾಟಕದಲ್ಲಿ ಅಭಿನಯಿಸಿದ್ದ ಅನುಭವ ಹಂಚಿಕೊಂಡರು.

ಜಿಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ ಮಾತನಾಡಿ, ಸಿದ್ದಿ ಟ್ರಸ್ಟ್‌ನ ಸಂಸ್ಥಾಪಕ ಜಿ. ಚನ್ನಕೇಶವ ಅವರನ್ನು ನೆನಪಿಸಿಕೊಳ್ಳುತ್ತ ಸಿದ್ದಿ ಜನಾಂಗವನ್ನು ಮುಖ್ಯವಾಹಿನಿಗೆ ಕರೆ ತರುವಲ್ಲಿ ಶ್ರಮಿಸಿದವರು ಎಂದರು.


ಸಿದ್ದಿ ಟ್ರಸ್ಟ್‌ನ ಅಧ್ಯಕ್ಷ ಗಿರೀಶ್ ಪಿ. ಸಿದ್ದಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಂಚಿಕೇರಿ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಅಧ್ಯಕ್ಷ ರಘುಪ್ರಸಾದ್ ಭಟ್ಟ ಹೊನ್ನಳ್ಳಿ, ಅಂತರರಾಷ್ಟ್ರೀಯ ಜಾನಪದ ಕಲಾವಿದ ಜೂಲಿಯಾನಾ ಸಿದ್ದಿ ಗಾಡಗೇರಾ, ಕರ್ನಾಟಕ ಕೊಂಕಣಿ ಅಕಾಡೆಮಿ ಸದಸ್ಯರಾದ ಸುನಿಲ್ ಸಿದ್ದಿ, ನವೀನ ಲೋಬೊ, ಶಿಬಿರದ ನಿರ್ದೇಶಕಿ ಡಾ. ಗೀತಾ ಸಿದ್ದಿ ಮತ್ತಿತರರು ಉಪಸ್ಥಿತರಿದ್ದರು.

ಜೂಲಿಯಾನಾ ಸಿದ್ದಿಯವರಿಗೆ ಸಿದ್ದಿ ಟ್ರಸ್ಟ್ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು. ತೂಗು ತೊಟ್ಟಿಲು ಶಿಬಿರದ ಮಕ್ಕಳಾದ ಪನ್ನಿಕಾ ಸಿದ್ದಿ, ದಿವ್ಯಾ ಸಿದ್ದಿ, ವಿನೀತಾ ಸಿದ್ದಿ, ಚಲನಾ ಸಿದ್ದಿ ಹಾಗೂ ದಿವ್ಯಾ ಸಿದ್ದಿ ವನದೇವತೆಯ ಕುರಿತು ಪ್ರಾರ್ಥಿಸಿದರು. ದಿವ್ಯಾ ಸಿದ್ದಿ ಸ್ವಾಗತಿಸಿದರು. ಪನ್ನಿಕಾ ಸಿದ್ದಿ ಕಾರ್ಯಕ್ರಮ ನಿರ್ವಹಿಸಿದರು. ಚಲನಾ ಸಿದ್ದಿ ವಂದಿಸಿದರು.

ಮೊದಲಿಗೆ ಮಕ್ಕಳಿಂದ ಡಮಾಮಿ, ಪುಗಡಿ ಹಾಗೂ ಜಕೈ ನೃತ್ಯ ಪ್ರದರ್ಶನ ನಡೆಯಿತು. ಸಂಜೆ ೭ ಗಂಟೆಗೆ ಕೋಟಗಾನಹಳ್ಳಿ ರಾಮಯ್ಯ ಅವರ ಹಕ್ಕಿ ಹಾಡು ನಾಟಕದ ಕೊಂಕಣಿ ರೂಪಾಂತರ "ಸವಣ್ಯಾಚಿ ಗಾಣಿ " ಕೊಂಕಣಿ ನಾಟಕವನ್ನು ಡಾ. ಗೀತಾ ಸಿದ್ದಿ ನಿರ್ದೇಶನದಲ್ಲಿ ಶಿಬಿರಾರ್ಥಿಗಳು ಅಭಿನಯಿಸಿದರು.