ಧಾರ್ಮಿಕ ಸಂಪ್ರದಾಯವಾಗಿ ಅಂಟಿಗೆ ಪಂಟಿಗೆ ಕಲೆ: ನಾಗೇಶ್‌ಗೌಡ

| Published : Nov 21 2025, 02:00 AM IST

ಧಾರ್ಮಿಕ ಸಂಪ್ರದಾಯವಾಗಿ ಅಂಟಿಗೆ ಪಂಟಿಗೆ ಕಲೆ: ನಾಗೇಶ್‌ಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದ ಸಂಪ್ರದಾಯಗಳಲ್ಲಿ ಅಂಟಿಗೆ ಪಂಟಿಗೆ ಕಲೆ ಹಾಗೂ ಹಾಡುಗಳು ಸಹ ಧಾರ್ಮಿಕ ಸಂಪ್ರದಾಯವಾಗಿ ಬಿಂಬಿಸಲ್ಪಟ್ಟಿವೆ ಎಂದು ನಿವೃತ್ತ ಉಪನ್ಯಾಸಕ ನಾಗೇಶ್‌ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಳೆಹೊನ್ನೂರು

ಜಾನಪದ ಸಂಪ್ರದಾಯಗಳಲ್ಲಿ ಅಂಟಿಗೆ ಪಂಟಿಗೆ ಕಲೆ ಹಾಗೂ ಹಾಡುಗಳು ಸಹ ಧಾರ್ಮಿಕ ಸಂಪ್ರದಾಯವಾಗಿ ಬಿಂಬಿಸಲ್ಪಟ್ಟಿವೆ ಎಂದು ನಿವೃತ್ತ ಉಪನ್ಯಾಸಕ ನಾಗೇಶ್‌ಗೌಡ ಹೇಳಿದರು.

ಸಂಗಮೇಶ್ವರ ಪೇಟೆಯ ಭಗವತಿಪುರದ ವಿಜಯ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಚಿಕ್ಕಮಗಳೂರು ಜಿಲ್ಲಾ ಸಂಸ್ಕಾರ ಭಾರತಿ ಸಂಸ್ಥೆ ಆಯೋಜಿಸಿದ್ದ ಅಂಟಿಗೆ ಪಂಟಿಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಲೆನಾಡು ಭಾಗದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮಾತ್ರ ಈ ಕಾರ್ಯಕ್ರಮವನ್ನು ಗ್ರಾಮೀಣ ಪ್ರದೇಶದಲ್ಲಿ ಸಂಪ್ರದಾಯಬದ್ಧವಾಗಿ ನಡೆಸುತ್ತಾರೆ. ಇದರಲ್ಲಿ ಹಾಡುವವರು ವೃತ್ತಿ ಗಾಯಕರಲ್ಲ. ಬಹುತೇಕ ಪರಿಣಿತ ಹಿರಿಯರು ರಾತ್ರಿ ಹೊತ್ತು ಹಾಡುತ್ತಾರೆ. ಯಾವುದೇ ವಾದ್ಯ ಬಳಕೆ ಇಲ್ಲದೆ ನಾಲ್ಕು ಜನರಿಂದ ಹಾಡಲ್ಪಡುವ ಹಾಡುಗಳಲ್ಲಿ ರಾಗ ವೈವಿಧ್ಯತೆಯಿಲ್ಲ. ಮುಮ್ಮೇಳ ಮತ್ತು ಹಿಮ್ಮೇಳದಲ್ಲಿ ಹಾಡುತ್ತಿರುವುದು ಈ ಕಲೆಯ ವಿಶೇಷವಾಗಿದೆ. ಬೇರೆ ಬೇರೆ ಪ್ರಾಂತ್ಯದಲ್ಲಿ ಅಂಟಿಗೆ ಪಂಟಿಗೆ ತಂಡದಲ್ಲಿ ವ್ಯತ್ಯಾಸವಿರಬಹುದು. ಆದರೆ ಒಂದೊಂದು ತಂಡ ಒಂದೇ ಬಗೆಯಲ್ಲಿ ಹಾಡುತ್ತ ಸಾಗುತ್ತದೆ ಎಂದರು.

ಈ ಕಲೆಯು ಕೇಳುಗರನ್ನು ತನ್ಮಯಗೊಳಿಸುವ ಮಾಂತ್ರಿಕ ಶಕ್ತಿಯನ್ನು ಹೊಂದಿದ್ದು, ಸಾಹಿತ್ಯಿಕವಾಗಿ ಜ್ಯೋತಿ ಮೆರವಣಿಗೆ ತುಂಬಾ ಸುಂದರವಾಗಿದೆ. ಒಂದು ನಿರ್ದಿಷ್ಟ ಕಾಲದಲ್ಲಿ ಮಲೆನಾಡಿನ ಜೀವನಶೈಲಿ ಈ ಹಾಡುಗಳಲ್ಲಿ ಇದೆ. ವಾಸ್ತವ ಬದುಕು ಕಲೆಯ ಉಬ್ಬುಗನ್ನಡಿಯಲ್ಲಿ ಹಿಗ್ಗಿಸಿ ತೋರಿಸಲ್ಪಟ್ಟಿದೆ. ಹಳ್ಳಿಗರ ಮನೆಗಳು ಇಲ್ಲಿ ಅರಮನೆಗಳಾಗುತ್ತವೆ. ಮುಗ್ಧ ಗಂಡ, ಹೆಂಡತಿಯರು ರಾಜ ರಾಣಿಯಾಗುತ್ತಾರೆ ಎಂದರು.

ದೀಪಾವಳಿ ಹಬ್ಬಕ್ಕೂ ಮುನ್ನ ದೇವಸ್ಥಾನದ ಆವರಣ, ನದಿ ತೀರ, ಹಾಲು ಮರದ ಬುಡದಲ್ಲಿ ಗ್ರಾಮಸ್ಥರು ಸೇರಿ ಪ್ರಾರ್ಥನೆ ಸಲ್ಲಿಸಿ ದೀಪವನ್ನು ಬೆಳಗುತ್ತಾರೆ.ಈ ದೀಪವನ್ನು ಜ್ಯೋತಿ ಪದದ ಮೂಲಕ ರಾತ್ರಿಯ ವೇಳೆ ಮನೆ ಮನೆಗೆ ತಿರುಗಿ ಜ್ಯೋತಿ ನೀಡುತ್ತಾರೆ. ಮಹಿಳೆಯರು ಪೂಜೆ ಸಲ್ಲಿಸಿ ಜ್ಯೋತಿಯನ್ನು ಬೆಳಗಿಸಿಕೊಂಡು ಮನೆ ಒಳಗೆ ಪ್ರವೇಶ ಮಾಡುತ್ತಾರೆ. ಆ ನಂತರದಲ್ಲಿ ಅದ್ಭುತವಾಗಿ ಮನೆಯ ಸ್ಮರಣೆ ಮಾಡುತ್ತಾರೆ. ಇದು ಒಂದು ಪ್ರಾಚೀನ ಕಲೆಯಾಗಿದ್ದು ಇದನ್ನು ಉಳಿಸಬೇಕಾದ ಅಗತ್ಯತೆ ಇದೆ ಎಂದರು.

ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಯಜ್ಞಪುರುಷ ಭಟ್, ಸಂಸ್ಕಾರ ಭಾರತೀಯ ಜಿಲ್ಲಾಧ್ಯಕ್ಷ ದಿನೇಶ್ ಪಟೇಲ್, ವಿಜಯ ದುರ್ಗಾಪರಮೇಶ್ವರಿ ದೇವಸ್ಥಾನದ ಮುಖ್ಯಸ್ಥ ಪ್ರಸಾದ್ ಗುರೂಜಿ, ಸಾರಿಗೆ ಅಧಿಕಾರಿ ಮುರುಗೇಶ್, ಮಂಜುನಾಥ ಭಟ್, ರೇಣುಕಾ, ಸಂಸ್ಕಾರ ಭಾರತೀಯ ಪ್ರಮುಖರಾದ ರ‍್ಧನ್, ವೀಣಾ, ನಯನ ಪ್ರಸಾದ್, ಕೃಪಾ, ಕೃತಿ ಮತ್ತಿತರರು ಹಾಜರಿದ್ದರು.