ಮಂಗಳೂರು ವಿವಿ ಕಾಲೇಜಿನಲ್ಲಿ ಯಕ್ಷಗಾನ ತಾಳಮದ್ದಳೆ ಸಪ್ತಾಹ - 2025 ಕಾರ್ಯಕ್ರಮ ಭಾನುವಾರ ಉದ್ಘಾಟನೆಗೊಂಡಿತು.
ಯಕ್ಷಾಂಗಣ ತಾಳಮದ್ದಳೆ ಸಪ್ತಾಹ ಉದ್ಘಾಟನೆ
ಮಂಗಳೂರು: ಅನೇಕ ಕಲಾಪ್ರಕಾರಗಳ ನಡುವೆ ಯಕ್ಷಗಾನ ಸರ್ವಾಂಗೀಣ ಕಲೆ ಹಾಗೂ ನಮ್ಮ ಸಂಸ್ಕೃತಿ ಪ್ರತಿನಿಧಿಸುವ ಕಲೆಯಾಗಿ ಗುರುತಿಸಿದೆ. ಕರಾವಳಿಯ ಭಾಷೆ ಸಂಸ್ಕೃತಿ, ಭಾವ ಯಕ್ಷಗಾನದಲ್ಲಿ ಪ್ರಕಟವಾಗುತ್ತವೆ. ಕಲಾವಿದರು ಕಲೆಯ ಆತ್ಮವಾದರೆ ಕಲಾಪೋಷಕರು ಕಲೆಯ ಹೃದಯವಿದ್ದಂತೆ ಎಂದು ಮಂಗಳೂರು ವಿ.ವಿ. ಕುಲಸಚಿವ ಕೆ.ರಾಜು ಮೊಗವೀರ ಹೇಳಿದ್ದಾರೆ.ಮಂಗಳೂರು ವಿವಿ ಕಾಲೇಜಿನಲ್ಲಿ ಯಕ್ಷಾಂಗಣ ಮಂಗಳೂರು, ಮಂಗಳೂರು ವಿ.ವಿ.ಯ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ.ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ, ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ವತಿಯಿಂದ ನಡೆಯಲಿರುವ ಯಕ್ಷಗಾನ ತಾಳಮದ್ದಳೆ ಸಪ್ತಾಹ - 2025 ಕಾರ್ಯಕ್ರಮವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಕ್ಷಗಾನ ಕಲಾವಿದರ ಪುರಾಣ ಜ್ಞಾನ, ಶುದ್ದ ಕನ್ನಡ ಮಾದರಿಯಾದುದು. ಕಲಾವಿದರ ವಿಶ್ಲೇಷಣಾ ಶಕ್ತಿ ಉನ್ನತಮಟ್ಟದಲ್ಲಿರುತ್ತದೆ. ಅವರ ಮೂಲಕ ಸಾಹಿತ್ಯ, ವೈಚಾರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಲು ಸಾಧ್ಯ ಎಂದು ಹೇಳಿದರು.ಮಂಗಳೂರು ವಿ.ವಿ.ಯ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಮಾತನಾಡಿ, ಸಾವಿರಾರು ಕಲಾವಿದರು ಈ ಯಕ್ಷಗಾನ ಕುಟುಂಬದಲ್ಲಿದ್ದಾರೆ. ಯಕ್ಷಗಾನ ಹಲವು ಶತಮಾನಗಳಿಂದ ಹಲವಾರು ಕಲಾವಿದರ ಪರಿಶ್ರಮದ ಮೂಲಕ ಬೆಳೆದು ಬಂದ ಕಲೆಯಾಗಿದೆ. ಈ ಕಲಾವಿದ ಕುಟುಂಬಕ್ಕೆ ಎಂದಿಗೂ ಧಕ್ಕೆಯಾಗುವ ಮಾತನ್ನಾಡದೆ ಗೌರವಿಸೋಣ ಎಂದು ಹೇಳಿದರು.ಸಮಾರಂಭದ ಅಧ್ಯಕ್ಷತೆಯನ್ನು ಎ.ಜೆ.ಸಂಸ್ಥೆಯ ಸಂಚಾಲಕ ಡಾ.ಎ.ಜೆ.ಶೆಟ್ಟಿ ವಹಿಸಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ತಾಳಮದ್ದಳೆಯ ಸಪ್ತಾಹ ಆಯೋಜಿಸುವ ಮೂಲಕ ಯಕ್ಷಾಂಗಣ ಸಂಸ್ಥೆಯು ಯಕ್ಷಗಾನದ ಸೇವೆ, ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ಎಂದರು.
ಕನ್ನಡ ಸಾಹಿತ್ಯ ಪರಿಷತ್ ನ ಮಾಜಿ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ,ಸ್ಮಾರ್ಟ್ ಸಿಟಿಯ ಜನರಲ್ ಮ್ಯಾನೇಜರ್ ಅರುಣ್ ಪ್ರಭಾ , ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ವಿ.ವಿ. ಕಾಲೇಜು ಪ್ರಾಂಶುಪಾಲ ಗಣಪತಿ ಗೌಡ ಮೊದಲಾದವರು ಉಪಸ್ಥಿತರಿದ್ದರು.ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿದರು. ತೋನ್ಸೆ ಪುಷ್ಕಳ್ ಕುಮಾರ್ ವಂದಿಸಿದರು.ಸಂಚಾಲಕ ರವೀಂದ್ರ ರೈ ಕಲ್ಲಿಮಾರ್ ನಿರೂಪಿಸಿದರು. ತುಳುಸಾಹಿತ್ಯ ಅಕಾಡೆಮಿಯ ಸಹಯೋಗದೊಂದಿಗೆ ದಿವೀತ್ ಪೆರಾಡಿ ರಚನೆಯ ‘ಮಿತ್ತ ಲೋಕದ ಪೆತ್ತ’ ಯಕ್ಷಗಾನ ತಾಳಮದ್ದಳೆ ನಡೆಯಿತು.ಕಲಾಪ್ರೇಮಿ, ಕಲಾಪೋಷಕ ಉದ್ಯಮಿ ರವೀಂದ್ರ ಶೇಟ್ ಅವರಿಗೆ ಯಕ್ಷಗಾನ ತಾಳಮದ್ದಳೆ ಸಪ್ತಾಹ ಕಾರ್ಯಕ್ರಮದಲ್ಲಿ ಯಕ್ಷಾಂಗಣ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.