ಅಗಲಿದ ಹಿರಿಯರನ್ನು ಕಲಾರಾಧನೆಯ ಮೂಲಕ ಸ್ಮರಿಸುವುದು ಮಾದರಿ ಕಾರ್ಯ.

ಬೆಲ್ತರಗದ್ದೆಯಲ್ಲಿ ಮಹಾಬಲೇಶ್ವರ ಗಾಂವ್ಕರ ಸ್ಮರಣಾರ್ಥ ಯಕ್ಷಗಾನ, ಸನ್ಮಾನ

ಕನ್ನಡಪ್ರಭ ವಾರ್ತೆ ಯಲ್ಲಾಪುರ

ಅಗಲಿದ ಹಿರಿಯರನ್ನು ಕಲಾರಾಧನೆಯ ಮೂಲಕ ಸ್ಮರಿಸುವುದು ಮಾದರಿ ಕಾರ್ಯ ಎಂದು ಆನಗೋಡಿನ ಸುದರ್ಶನ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಗಣಪತಿ ಮಾನಿಗದ್ದೆ ಹೇಳಿದರು.

ತಾಲೂಕಿನ ಆನಗೋಡ ಸಮೀಪದ ಬೆಲ್ತರಗದ್ದೆಯಲ್ಲಿ ಮಹಾಬಲೇಶ್ವರ ಗಾಂವ್ಕರ ಸ್ಮರಣಾರ್ಥ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಯಕ್ಷಗಾನ ಹಾಗೂ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಪ್ಪಟ ಕಲಾಭಿಮಾನಿಯಾಗಿದ್ದ ಮಹಾಬಲೇಶ್ವರ ಗಾಂವ್ಕರ, ಸಮಾಜದಲ್ಲಿ ಎಲ್ಲರೊಂದಿಗೆ ಬೆರೆಯುವ, ಸ್ನೇಹಪರ ವ್ಯಕ್ತಿತ್ವ ಹೊಂದಿದ್ದರು. ಅವರ ಸ್ಮರಣೆಗಾಗಿ ಕುಟುಂಬದವರು ಪ್ರತಿ ವರ್ಷ ಕಲಾರಾಧನೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಖ್ಯಾತ ಭಾಗವತ ರಾಮಕೃಷ್ಣ ಹೆಗಡೆ ಹಿಲ್ಲೂರು, ಹಿರಿಯ ಮದ್ದಲೆವಾದಕ ಪರಮೇಶ್ವರ ಭಂಡಾರಿ ಕರ್ಕಿ, ವೇಷಭೂಷಣ ತಯಾರಕ ಹಾಗೂ ಕಲಾವಿದ ಸಂಜಯ ಬೆಳೆಯೂರು, ಶಿಕ್ಷಕ ಸದಾನಂದ ದಬಗಾರ ಅವರನ್ನು ಸನ್ಮಾನಿಸಲಾಯಿತು.

ಕಲಾವಿದ ಶ್ರೀಧರ ಭಟ್ಟ ಕಾಸರಕೋಡ ಮಾತನಾಡಿದರು. ಸಂಘಟಕ ನಾಗರಾಜ ಗಾಂವ್ಕರ ಕಲಾವಿದರನ್ನು ಸನ್ಮಾನಿಸಿದರು. ಶ್ರೀಧರ ಭಟ್ಟ ಬೆಳಖಂಡ ಸನ್ಮಾನಪತ್ರ ವಾಚಿಸಿದರು. ಕಲಾವಿದ ಸತೀಶ ಯಲ್ಲಾಪುರ ನಿರ್ವಹಿಸಿ, ವಂದಿಸಿದರು.

ಗಣೇಶ ಹೆಗಡೆ ನೆರ್ಲೆಮನೆ ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಆನಂತರ ಪ್ರಸಿದ್ಧ ಕಲಾವಿದರಿಂದ ಪ್ರದರ್ಶನಗೊಂಡ "ರಾಜಾ ರುದ್ರಕೋಪ " ಯಕ್ಷಗಾನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಮದ್ದಲೆವಾದಕರಾಗಿ ಪರಮೇಶ್ವರ ಭಂಡಾರಿ ಕರ್ಕಿ, ಚಂಡೆವಾದಕರಾಗಿ ಶಿವಾನಂದ ಕೋಟ, ಗಣೇಶ ಗಾಂವ್ಕರ ಕನಕನಹಳ್ಳಿ ಭಾಗವಹಿಸಿದ್ದರು.

ರಾಜೇಶ ಭಂಡಾರಿ ಗುಣವಂತೆ (ರುದ್ರಕೋಪ), ಸಂಜಯ ಬೆಳೆಯೂರು (ರಕ್ತಜಂಗ), ಅಶೋಕ ಭಟ್ಟ ಸಿದ್ದಾಪುರ (ನಾರದ), ಶ್ರೀಧರ ಕಾಸರಕೋಡು (ಅಜ್ಜಿ), ವೆಂಕಟೇಶ ಬೊಗರಿಮಕ್ಕಿ (ರಕ್ತಕೇಶಿ), ಹೇರಂಬ ಭಟ್ಟ (ಚಂದ್ರಸೇನ), ನಾಗೇಶ ಕುಳಿಮನೆ (ಜಯಸೇನ), ಗುರು ಭಟ್ಟ ಜಂಬೆಸಾಲ (ದೂತ), ಅವಿನಾಶ ಕೊಪ್ಪ (ಸತ್ಯಶೀಲೆ ಹಾಗೂ ಸಖಿ) ಪಾತ್ರ ನಿರ್ವಹಿಸಿದರು.