ಸಾರಾಂಶ
ಪ್ರಕಾಶ್ ಎಂ.ಸುವರ್ಣ
ಕನ್ನಡಪ್ರಭ ವಾರ್ತೆ ಮೂಲ್ಕಿಮೂಲ್ಕಿ ತಾಲೂಕಿನಲ್ಲಿ ಮುಂಗಾರಿನಲ್ಲಿ ಹೆದ್ದಾರಿ ಪರಿಸರ ಹಾಗೂ ನದಿ ತಟಗಳಲ್ಲಿ ಕೃತಕ ನೆರೆ ಸಾಮಾನ್ಯವಾಗಿದೆ. ಮುಂಡಾ ಬೀಚ್ ಪರಿಸರದಲ್ಲಿ ಕಡಲು ಕೊರೆತವೂ ಹೆಚ್ಚುತ್ತಿದ್ದು, ಕಳೆದ ವರ್ಷ ವ್ಯಾಪಕ ಹಾನಿ ಸಂಭವಿಸಿದೆ.
ಕೇರಳವನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಮೂಲ್ಕಿಯಲ್ಲಿ ಹೆದ್ದಾರಿ ಚತುಷ್ಪಥಗೊಂಡ ಬಳಿಕ ಮಳೆಗಾಲದಲ್ಲಿ ಕೃತಕ ನೆರೆ ಮಾಮೂಲಿ ಎನಿಸಿದೆ. ಚತುಷ್ಪಥ ರಸ್ತೆಯ ಅವ್ಯೆಜ್ಞಾನಿಕ ಕಾಮಗಾರಿಯಿಂದಾಗಿ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಮೂಲ್ಕಿ ಪೇಟೆ, ಕಾರ್ನಾಡು ಕೊಕ್ಕರ್ ಕಲ್, ಹಳೆಯಂಗಡಿ ಜಂಕ್ಷನ್ ಸೇರಿದಂತೆ ಹೆಚ್ಚಿನ ಕಡೆಗಳಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯಲ್ಲಿ ಹರಿದು ನಿಲ್ಲುವುದರಿಂದ ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ.ಚತುಷ್ಫಥ ರಸ್ತೆ ನಿರ್ಮಾಣಗೊಂಡು ಹಲವಾರು ವರ್ಷ ಕಳೆದರೂ ಈ ವರೆಗೆ ಮೂಲ್ಕಿ ಪೇಟೆಯಲ್ಲಿ ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ. ಮೂಲ್ಕಿ ಬಸ್ ನಿಲ್ದಾಣದಲ್ಲಿ ಮಳೆ ನೀರು ಹರಿದು ಸುತ್ತಮುತ್ತಲಿನ ಅಂಗಡಿಗಳಿಗೆ ನುಗ್ಗುವುದು ಸಾಮಾನ್ಯ ದೃಶ್ಯವಾಗಿದೆ.
ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಮಳೆಗಾಲದಲ್ಲಿ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಚಾಲಕರ ನಿಯಂತ್ರಣ ತಪ್ಪಿ ಹಲವಾರು ಅಪಘಾತಗಳೂ ಸಂಭವಿಸಿದೆ. ಈ ಸಮಸ್ಯೆಗಳನ್ನು ಸಾರ್ವಜನಿಕರು ಪೊಲೀಸ್ ಇಲಾಖೆ ಹಾಗೂ ಮೂಲ್ಕಿ ನಗರ ಪಂಚಾಯಿತಿ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ.ನದಿ ‘ತೀರದ’ ಸಮಸ್ಯೆ:
ಮೂಲ್ಕಿ ತಾಲೂಕು ಪರಿಸರ ಸಮುದ್ರ ಹಾಗೂ ಶಾಂಭವಿ ಮತ್ತು ನಂದಿನಿ ನದಿಯಿಂದ ಸುತ್ತುವರಿದಿದ್ದು ಪ್ರತಿ ವರ್ಷ ನಂದಿನಿ ನದಿ ತಟದ ಪಂಜ, ಉಲ್ಯ, ಅತ್ತೂರು, ಕಟೀಲು ಪರಿಸರದ ಮಿತ್ತಬೈಲು, ಕಿಲೆಂಜೂರು, ಮೂಲ್ಕಿ ಪರಿಸರದ ಮಾನಂಪಾಡಿ, ಬಪ್ಪನಾಡು, ಬಡಗುಹಿತ್ಲು, ಚಿತ್ರಾಪು, ಕೊಳಚಿಕಂಬಳ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ನೆರೆ ಸಂಭವಿಸುವುದು ಸಾಮಾನ್ಯವಾಗಿದೆ.ಅಣೆಕಟ್ಟುಗಳ ಸಮರ್ಪಕ ನಿರ್ವಹಣೆ ಕೊರತೆಯಿಂದ ನದಿ ನೀರು ಉಕ್ಕೇರಿ ಕೃಷಿ ಭೂಮಿಯನ್ನು ಆವರಿಸುವುದರಿಂದ ಪ್ರತಿವರ್ಷ ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ಈವರೆಗೂ ಯಾವುದೇ ಶಾಶ್ವತ ಪರಿಹರವಾಗಿಲ್ಲ.
ಸಸಿಹಿತ್ಲು ಮುಂಡಾ ಬೀಚ್‌ನಲ್ಲಿ ಕಡಲ್ಕೊರೆತ ಹೆಚ್ಚುತ್ತಿದ್ದು ಕಳೆದ ಮಳೆಗಾಲದಲ್ಲಿ ಬೀಚ್ ತೀರದಲ್ಲಿದ್ದ ಅಂಗಡಿ, ಮರ ಮಟ್ಟುಗಳು ಸಮುದ್ರಪಾಲಾಗಿವೆ. ಮುಂಡಾ ಬೀಚ್ ಸಮೀಪ ಉಡುಪಿ ಜಿಲ್ಲೆಯ ಹೆಜಮಾಡಿಯಲ್ಲಿ ಸಣ್ಣ ಬಂದರು ನಿರ್ಮಾಣವಾಗುತ್ತಿದ್ದು ಸಮುದ್ರ ತೀರದಲ್ಲಿ ತಡೆಗೋಡೆ ನಿರ್ಮಾಣವಾಗಿದ್ದರಿಂದ ಈ ಬಾರಿ ಕೃತಕ ನೆರೆ ಸಂಭವಿಸುವ ಸಾಧ್ಯತೆಯಿದೆ.ರಾಜ್ಯ ಹೆದ್ದಾರಿ ಸಮಸ್ಯೆ:
ಮೂಲ್ಕಿಯಿಂದ ಕಿನ್ನಿಗೋಳಿ ಮೂಲಕ ಮೂಡುಬಿದಿರೆಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಮೂಲ್ಕಿಯ ಗಾಂಧಿ ಮ್ಯೆದಾನ ಬಳಿ, ಕಿನ್ನಿಗೋಳಿ ಪೇಟೆಯಲ್ಲಿ ಮಳೆಗಾಲದಲ್ಲಿ ಸೂಕ್ತ ಒಳ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮಳೆಗಾಲದಲ್ಲಿ ಕೃತಕ ನೆರೆ ಸಂಭವಿಸುತ್ತಿದೆ. ಮೂಲ್ಕಿ ಹಾಗೂ ಕಿನ್ನಿಗೋಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಕೃತಕ ನೆರೆಯಾಗುತ್ತಿದೆ.ಮೂಲ್ಕಿ ವ್ಯಾಪ್ತಿ ಮುನ್ನೆಚರಿಕೆ:
ಮೂಲ್ಕಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ಚರಂಡಿಯ ಹೂಳೆತ್ತುವ ಕಾರ್ಯ ನಡೆದಿದ್ದು ರಸ್ತೆಯ ಬದಿಯ ಗಿಡಗಂಟಿಗಳನ್ನು ತೆಗೆಯುವ ಕಾರ್ಯ ನಡೆಯುತ್ತಿದೆ. ನೆರೆ ಪೀಡಿತ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯಿಂದ ಕಾರ್ನಾಡ್ ಬೈಪಾಸ್ ಮೂಲಕ ಕಾರ್ನಾಡ್ ಪೇಟೆ ಸಂಪರ್ಕಿಸುವ ಲೋಕೋಪಯೋಗಿ ಇಲಾಖೆ ರಸ್ತೆ ತೀರಾ ಹದಗೆಟ್ಟಿದ್ದುಪ್ರತಿ ಮಳೆಗಾಲದಲ್ಲಿ ರಸ್ತೆ ಹೊಂಡಮಯವಾಗಿ ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗಿ ಪರಿಣಮಿಸಿದೆ.
ಈ ಬಾರಿ ರಸ್ತೆಯಲ್ಲಿ ಅತ್ಯಧಿಕ ಹೊಂಡಗಳು ಸೃಷ್ಟಿಯಾಗಿದ್ದು ಇದುವರೆಗೂ ಡಾಂಬರು, ತೇಪೆ ಕಾಮಗಾರಿ ನಡೆದಿಲ್ಲ. ಮೂಲ್ಕಿ ಪಂಚಾಯಿತಿ ವ್ಯಾಪ್ತಿಯ ಹೆಚ್ಚಿನ ಪ್ರದೇಶಗಳಲ್ಲಿ ಕೃತಕ ನೆರೆ ನಿರ್ಮಾಣವಾಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ.ಮೂಲ್ಕಿಯ ವಿಜಯ ಸನ್ನಿದಿ ಬಳಿ ರಾಷ್ಟ್ರೀಯ ಹೆದ್ದಾರಿಯ ಒಳ ರಸ್ತೆಗೆ ಚರಂಡಿ ನಿರ್ಮಾಣವಾಗದ ಕಾರಣ ವಿಜಯ ಸನ್ನಿಧಿ ಎದುರುಗಡೆ ಪ್ರತಿವರ್ಷ ಮಳೆ ನೀರು ನಿಂತು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಈ ಬಾರಿ ಅಬ್ಬರದ ಮಳೆ ಬಂದಲ್ಲಿ ಹೆಚ್ಚಿನ ಅನಾಹುತವಾಗುವ ಸಾಧ್ಯತೆಯಿದೆ.
---ಪರಿಹಾರ ಏನು?
-ಅವೈಜ್ಞಾನಿಕ ಹೆದ್ದಾರಿ ಕಾಮಗಾರಿ ಲೋಪಗಳನ್ನು ಸರಪಡಿಸುವುದು-ಒಳಚರಂಡಿ ಕಾಮಗಾರಿಗೆ ಆದ್ಯತೆ
-ಚರಂಡಿ ಹೂಳೆತ್ತುವ ಕಾಮಗಾರಿ-ಸರ್ವಿಸ್ ರಸ್ತೆ ನಿರ್ಮಾಣ ಪೂರ್ತಿಗೊಳಿಸುವುದು
-ಮುಂಡಾ ಬೀಚ್‌ನಲ್ಲಿ ಸಮುದ್ರ ಕೊರೆತಕ್ಕೆ ತಡೆ...............................ಮೂಲ್ಕಿ ವ್ಯಾಪ್ತಿಯಲ್ಲಿ ಮಳೆಗಾಲದ ಪೂರ್ವಭಾವಿಯಾಗಿ ಚರಂಡಿಯ ಹೂಳು ತೆಗೆಯುವ ಕಾರ್ಯ ನಡೆದಿದೆ. ರಸ್ತೆ ಬದಿಯ ಮರ,ಗಿಡ ಗಂಟಿಗಳನ್ನು ತೆಗೆಯುವ ಕಾರ್ಯ ನಡೆಯುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆ ನೀರು ಹರಿದು ಸಮಸ್ಯೆಯಾಗುತ್ತಿರುವ ಬಗ್ಗೆ ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗಿದೆ. ಕೃತಕ ನೆರೆ ಸಂಭವಿಸುವ ನದಿ ತೀರದ ಪ್ರದೇಶದಲ್ಲಿ ತಂಡವನ್ನು ರಚಿಸಿ ಸೂಕ್ತ ವ್ಯವಸ್ಥೆ ಮಾಡಲಾಗುವುದು .
-ಪಂಕಜಾ ಆಂಜನೇಯ, ಮೂಲ್ಕಿ ನ.ಪಂ. ಮುಖ್ಯಾಧಿಕಾರಿ............ರಾಷ್ಟ್ರೀಯ ಹೆದ್ದಾರಿಯ ಅವ್ಯೆಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಮೂಲ್ಕಿ ಪೇಟೆಯಲ್ಲಿ ಪ್ರತಿ ವರ್ಷ ರಸ್ತೆಯಲ್ಲಿ ಮಳೆ ನೀರು ಹರಿದು ಹೆಚ್ಚಿನ ಅಪಘಾತಗಳು ಸಂಭವಿಸುತ್ತಿವೆ. ಈ ಬಗ್ಗೆ ಕಳೆದ 10 ವರ್ಷದಿಂದ ಸಂಸದರು, ಹೆದ್ದಾರಿ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಮಳೆ ನೀರು ಮೂಲ್ಕಿ ಕೆಳ ಪೇಟೆಯಲ್ಲಿ ಅಂಗಡಿಗಳ ಒಳಗೆ ನುಗ್ಗಿ ಹೆಚ್ಚಿನ ನಷ್ಟ ಉಂಟಾಗುತ್ತಿದೆ.
-ಅಬ್ದುಲ್ ರಜಾಕ್, ಸಮಾಜ ಸೇವಕ.