ಸಾರಾಂಶ
ತೇಜಸ್ ಬನ್ನೂರು ೨೫ ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ರಕ್ಷಿಸಿ ಜಿಲ್ಲೆಯ ಬೇರೆ ಬೇರೆ ಅರಣ್ಯಕ್ಕೆ ಬಿಡುವ ಮೂಲಕ ತನ್ನ ಉರಗಪ್ರೇಮವನ್ನು ತೋರಿಸಿಕೊಟ್ಟಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಅನಾಥವಾಗಿದ್ದ ಹೆಬ್ಬಾವಿನ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಸುಮಾರು ೨೫ಕ್ಕೂ ಅಧಿಕ ಮರಿಗಳನ್ನು ಮಾಡಿ ಅವುಗಳನ್ನು ಸುರಕ್ಷಿತವಾಗಿ ರಕ್ಷಿತಾರಣ್ಯದೊಳಗೆ ಬಿಟ್ಟು ಬಿಡುವ ಮೂಲಕ ಯುವ ಉರಗ ಪ್ರೇಮಿ ಪುತ್ತೂರು ತಾಲೂಕಿನ ಸ್ನೇಕ್ ತೇಜಸ್ ಬನ್ನೂರು ಅವರು ಮಾನವೀಯತೆ ಮೆರೆದಿದ್ದಾರೆ. ತಾಯಿ ಹಾವುಗಳಿಲ್ಲದೆ ಅನಾಥವಾಗಿರುವ ಮೊಟ್ಟೆಗಳನ್ನು ಶ್ರೇಯಸ್ ಅರಣ್ಯ ಇಲಾಖೆಯ ಅನುಮತಿಯೊಂದಿಗೆ ತಮ್ಮ ಮನೆಗೆ ಕೊಂಡೊಯ್ದು ಅವುಗಳಿಗೆ ಕೃತಕ ಕಾವನ್ನು ನೀಡುವ ವ್ಯವಸ್ಥೆ ಮಾಡುತ್ತಾರೆ. ಇದೀಗ ಬಂಟ್ವಾಳ ತಾಲೂಕಿನ ಅನಂತಾಡಿ ಎಂಬಲ್ಲಿಂದ ಸಂಗ್ರಹಿಸಿದ ೧೨ ಮೊಟ್ಟೆ ಹಾಗೂ ಕನ್ಯಾನ ಎಂಬಲ್ಲಿಂದ ಸಂಗ್ರಹಿಸಿದ ೧೩ ಮೊಟ್ಟೆಗಳಿಗೆ ಕೃತಕ ಕಾವು ನೀಡಿ ಮರಿ ಮಾಡುವ ಮೂಲಕ ಜಿಲ್ಲೆಯ ವಿವಿಧ ಅರಣ್ಯ ಪ್ರದೇಶಗಳಲ್ಲಿ ಬಿಟ್ಟಿದ್ದಾರೆ.ತೇಜಸ್ ಬನ್ನೂರು ೨೫ ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ರಕ್ಷಿಸಿ ಜಿಲ್ಲೆಯ ಬೇರೆ ಬೇರೆ ಅರಣ್ಯಕ್ಕೆ ಬಿಡುವ ಮೂಲಕ ತನ್ನ ಉರಗಪ್ರೇಮವನ್ನು ತೋರಿಸಿಕೊಟ್ಟಿದ್ದಾರೆ.
ಅವರೇ ಹೇಳುವಂತೆ ಈ ತನಕ ಸುಮಾರು ೧೦೦ ಕ್ಕೂ ಮಿಕ್ಕಿದ ಹೆಬ್ಬಾವಿನ ಮರಿಗಳನ್ನು ಕಾಡಿಗೆ ಬಿಟ್ಟು ಹೆಬ್ಬಾವುಗಳ ಸಂತತಿಯನ್ನು ಸಂರಕ್ಷಣೆ ಮಾಡಿದ್ದಾರೆ. ಹೆಚ್ಚಾಗಿ ಮರದ ಪೊಟರೆಯೊಳಗೆ, ಬಿದ್ದ ತೆಂಗಿನ ಮರದ ಟೊಳ್ಳಾದ ಭಾಗದಲ್ಲಿ ಹೆಬ್ಬಾವುಗಳು ಮೊಟ್ಟಗಳನ್ನು ಇಡುತ್ತವೆ. ಸುಮಾರು ೬೦ ದಿನಗಳ ಕಾಲ ಹೆಬ್ಬಾವುಗಳು ಮರಿಗಳಿಗೆ ಕಾವು ನೀಡುತ್ತದೆ. ಹಾವುಗಳಲ್ಲಿ ಹೆಬ್ಬಾವು ಮತ್ತು ಕಾಳಿಂಗ ಸರ್ಪ ಮಾತ್ರ ತಮ್ಮ ಮೊಟ್ಟೆಗಳಿಗೆ ಕಾವು ನೀಡುವ ಮೂಲಕ ಮರಿ ಮಾಡುವ ಹಾವುಗಳು. ಮಾನವ ಅಥವಾ ಇತರ ಪ್ರಾಣಿಗಳ ತೊಂದರೆಯಾದಾಗ ಹೆಬ್ಬಾವು ಮತ್ತು ಕಾಳಿಂಗ ಸರ್ಪ ತಮ್ಮ ಮೊಟ್ಟೆಗಳನ್ನು ಬಿಟ್ಟು ಬೇರೆಡೆ ಸಾಗುತ್ತದೆ. ಹೀಗೆ ಸಾಗಿದ ಸಂದರ್ಭದಲ್ಲಿ ಮೊಟ್ಟೆಗಳು ಕಾವಿಲ್ಲದೆ ಅನಾಥವಾಗಿ ಹಾಳಾಗುವ ಸಾಧ್ಯತೆಗಳೂ ಹೆಚ್ಚಾಗಿರುತ್ತದೆ. ಅಂತಹ ಮೊಟ್ಟೆಗಳು ಕಂಡು ಬಂದಾಗ ತೇಜಸ್ ಅವರು ಅದನ್ನು ಸಂರಕ್ಷಣೆ ಮಾಡಿ ಕೃತಕ ಕಾವು ನೀಡುವ ಮೂಲಕ ಜೀವಸೃಷ್ಟಿಯನ್ನು ಮಾಡಿ ಪ್ರಕೃತಿಗೆ ಸೇರ್ಪಡೆ ಮಾಡುವ ಕಾಯಕ ಮಾಡುತ್ತಿದ್ದಾರೆ.