ಮನುಷ್ಯನಿಗಿರುವ ಭಾಷೆಯ ಸೊಗಡು, ಸಂವೇದನೆ, ಚಿಂತನೆ, ಜನರ ಉಸಿರಿನ ಏಳಿತವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ, ಹೃದಯ ಕೃತಕ ಬುದ್ಧಿಮತ್ತೆಗೆ ಇರುವುದಿಲ್ಲ ಎಂದು ಹಿರಿಯ ಲೇಖಕ ಜಿ. ಪಿ.ಬಸವರಾಜ ಹೇಳಿದರು.

ಬಳ್ಳಾರಿ: ಕೃತಕ ಬುದ್ಧಿಮತ್ತೆಯು ನಮ್ಮ ಬದುಕನ್ನು ವೇಗವಾಗಿ ಪ್ರವೇಶಿಸುತ್ತಿದೆ ನಿಜ. ಆದರೆ, ಮನುಷ್ಯನಿಗಿರುವ ಭಾಷೆಯ ಸೊಗಡು, ಸಂವೇದನೆ, ಚಿಂತನೆ, ಜನರ ಉಸಿರಿನ ಏಳಿತವನ್ನು ಅರ್ಥ ಮಾಡಿಕೊಳ್ಳುವ ಶಕ್ತಿ, ಹೃದಯ ಅದಕ್ಕಿರುವುದಿಲ್ಲ ಎಂದು ಹಿರಿಯ ಲೇಖಕ ಜಿ. ಪಿ.ಬಸವರಾಜ ನುಡಿದರು.

ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ (ಸ್ವಾಯತ್ತ) ಕಾಲೇಜಿನ ಸಭಾಂಗಣದಲ್ಲಿ ಸಂಗಂ ಟ್ರಸ್ಟ್ ಹಾಗೂ ಕನ್ನಡ ಸ್ನಾತಕ ಹಾಗೂ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಿಂದ ಆಯೋಜಿಸಿದ್ದ ಅಂತರ ವಿಭಾಗೀಯ ಉಪನ್ಯಾಸ ಸರಣಿಯಲ್ಲಿ ‘ನವ ಮಾಧ್ಯಮಗಳು ಮತ್ತು ಹೊಸ ತಲೆಮಾರು‘ ವಿಷಯದ ಕುರಿತು ಅವರು ಮಾತನಾಡಿದರು.

ಕೃತಕ ಬುದ್ಧಿಮತ್ತೆ ಒಂದು ಯಂತ್ರ ಮಾತ್ರ. ಅದು ಮಾಹಿತಿಯನ್ನು ಸಂಗ್ರಹಿಸಿ ವಿಶ್ಲೇಷಿಸಬಹುದು. ಪ್ರಶ್ನೆಗಳಿಗೆ ಉತ್ತರ ನೀಡಬಹುದು. ವೇಗವಾಗಿ ಕಾರ್ಯನಿರ್ವಹಿಸಬಹುದು. ಆದರೆ, ಮನುಷ್ಯನಿಗಿರುವ ಸಂವೇದನೆ, ಕರುಣೆ, ಹೃದಯದ ಮಿಡಿತ ಹಾಗೂ ಬದುಕಿನ ಅನುಭವಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಅದಕ್ಕಿಲ್ಲ. ಭಾಷೆಯ ಸೊಗಡು, ಮಾತಿನ ಆಳ, ಜನರ ನೋವು-ನಲಿವು, ಉಸಿರಿನ ಏರಿಳಿತವನ್ನು ಅರಿತು ಪ್ರತಿಕ್ರಿಯಿಸುವ ಶಕ್ತಿ ಮನುಷ್ಯನಿಗೆ ಮಾತ್ರ ಸೀಮಿತವಾಗಿದೆ ಎಂದರು.

ಇಂದಿನ ಡಿಜಿಟಲ್ ಯುಗದಲ್ಲಿ ನವ ಮಾಧ್ಯಮಗಳು ಹೊಸ ತಲೆಮಾರಿನ ಬದುಕಿನ ಅವಿಭಾಜ್ಯ ಅಂಗಗಳಾಗಿ ರೂಪುಗೊಂಡಿವೆ. ಮೊಬೈಲ್ ಫೋನ್, ಸಾಮಾಜಿಕ ಜಾಲತಾಣಗಳು, ಯೂಟ್ಯೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್, ವಾಟ್ಸಾಪ್ ಸೇರಿದಂತೆ ಅನೇಕ ಡಿಜಿಟಲ್ ವೇದಿಕೆಗಳು ಯುವಜನರ ಆಲೋಚನೆ, ಅಭ್ಯಾಸ ಮತ್ತು ಜೀವನಶೈಲಿಯ ಮೇಲೆ ಮಹತ್ತರ ಪ್ರಭಾವ ಬೀರುತ್ತಿವೆ. ಮಾಹಿತಿಯ ವಿನಿಮಯದಿಂದ ಹಿಡಿದು ಮನರಂಜನೆ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳ ವರೆಗೆ ನವ ಮಾಧ್ಯಮಗಳು ಹೊಸ ಜಗತ್ತಿನ ಬಾಗಿಲು ತೆರೆದಿವೆ. ಹಿಂದಿನ ದಿನಗಳಲ್ಲಿ ಪತ್ರಿಕೆ, ರೇಡಿಯೋ ಮತ್ತು ದೂರದರ್ಶನ ಪ್ರಮುಖ ಮಾಹಿತಿಯ ಮೂಲಗಳಾಗಿದ್ದವು. ಆದರೆ ಈಗ ಡಿಜಿಟಲ್ ಮಾಧ್ಯಮಗಳು ಕ್ಷಣಾರ್ಧದಲ್ಲಿ ಮಾಹಿತಿ ತಲುಪಿಸುವ ಶಕ್ತಿಯನ್ನು ಹೊಂದಿವೆ. ಯುವಜನರು ಸುದ್ದಿಗಳನ್ನು ಓದುವ ವಿಧಾನವೂ ಬದಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕವೇ ದೇಶ-ವಿದೇಶಗಳ ಬೆಳವಣಿಗೆಗಳನ್ನು ತಿಳಿದುಕೊಳ್ಳುತ್ತಿದ್ದಾರೆ. ಇದರಿಂದ ಮಾಹಿತಿ ಪಡೆಯುವ ವೇಗ ಹೆಚ್ಚಿದರೂ, ನಕಲಿ ಸುದ್ದಿಗಳ ಹರಡುವಿಕೆಯೂ ಹೆಚ್ಚುತ್ತಿರುವುದು ಚಿಂತೆಗೆ ಕಾರಣವಾಗಿದೆ.

ಇನ್ನೊಂದೆಡೆ, ನವ ಮಾಧ್ಯಮಗಳ ಅತಿಯಾದ ಬಳಕೆ ಹೊಸ ತಲೆಮಾರಿನ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂಬ ಆತಂಕವೂ ಇದೆ. ಯುವಜನರಲ್ಲಿ ಮೊಬೈಲ್ ವ್ಯಸನ ಹೆಚ್ಚಾಗುತ್ತಿರುವುದರಿಂದ ಮಾನಸಿಕ ಒತ್ತಡ, ಏಕಾಂಗಿತನ ಹಾಗೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಓದು ಮತ್ತು ಕುಟುಂಬ ಸಂಬಂಧಗಳ ಮೇಲೆ ಸಹ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ಪ್ರಾಸ್ತಾವಿಕ ಮಾತುಗಳನ್ನಾಡಿದ ಲೇಖಕ ಡಾ. ಶಿವಲಿಂಗಪ್ಪ ಹಂದಿಹಾಳು, ಯುವ ಸಮುದಾಯ ಬದುಕಿನ ಒತ್ತಡ, ತಲ್ಲಣ, ತಳಮಳಗಳನ್ನು ಅಕ್ಷರರೂಪಕ್ಕೆ ಇಳಿಸಲು ಮುಂದಾಗಬೇಕು. ಓದು, ಬರವಣಿಗೆಯ ಬಗೆಗೆ ಆಸಕ್ತಿ ವಹಿಸಿ ಬದುಕನ್ನು ಶ್ರೀಮಂತವಾಗಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂಗಮ ಟ್ರಸ್ಟ್‌ನ ಅಧ್ಯಕ್ಷ ಡಾ. ವೈ.ಸಿ. ಯೋಗಾನಂದ ರೆಡ್ಡಿ, ಹೊಸ ತಲೆಮಾರಿಗೆ ಸಾಹಿತ್ಯ ಸಂಸ್ಕೃತಿ ಬಗೆಗೆ ಅಭಿರುಚಿ ಮೂಡಿಸುತ್ತಲೇ ಹೊಸ ವಿಚಾರಗಳನ್ನು ದಾಟಿಸುವ ಆಲೋಚನೆ ನಮ್ಮ ಟ್ರಸ್ಟಿಗೆ ಇದೆ. ವಿದ್ಯಾರ್ಥಿಗಳು ಸೃಜನಶೀಲ ಪುಸ್ತಕಗಳನ್ನು ಓದುವ, ಸಮಾಜಮುಖಿಯಾದ ಹೊಸ ಆಲೋಚನೆಯಲ್ಲಿ ತೊಡಗಿ, ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಪ್ರಾಂಶುಪಾಲ ಡಾ. ಪ್ರಹ್ಲಾದ್ ಚೌದ್ರಿ, ಪ್ರಾಧ್ಯಾಪಕ ಡಾ. ದಸ್ತಗೀರಸಾಬ್ ದಿನ್ನಿ, ಕೆ. ಬಸವರಾಜ, ಹುಚ್ಚೂಸಾಬ್ ಸಂಡೂರು ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲೇಖಕರಾದ ವೀರೇಂದ್ರ ರಾವಿಹಾಳು, ಡಾ. ನಾಗರಾಜ ಬಸರಕೋಡು, ಸಹಾಯಕ ಪ್ರಾಧ್ಯಾಪಕ ಬಿ. ರಾಮಸ್ವಾಮಿ, ಪ್ರವೀಣಕುಮಾರ್ ಎಂ.ಎನ್., ಲಿಂಗಪ್ಪ, ಮಮತಾ, ಅತಿಥಿ ಉಪನ್ಯಾಸಕರಾದ ಆರ್. ಶ್ರೀನಿವಾಸ್, ಸುಜಾತಾ, ತಿಪ್ಪೇರುದ್ರ, ಕುಮಾರ್ ಅವರು ಭಾಗವಹಿಸಿದ್ದರು.