ಎಲ್ಲ ಕ್ಷೇತ್ರಗಳಿಗೆ ಪೂರಕ ಕೃತಕ ಬುದ್ಧಿಮತ್ತೆ: ಕಿರಣ ಜಾಧವ

| Published : Mar 07 2025, 12:45 AM IST

ಸಾರಾಂಶ

ಧಾರವಾಡದ ಕರ್ನಾಟಕ ಕಲಾ‌ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗವು ಗುರುವಾರ ಥೈಲ್ಯಾಂಡಿನ ನಾರ್ಥ ಚಾಂಗ್ಮಯಿ ಯುನಿವರ್ಸಿಟಿಯ ಸಹಯೋಗದಲ್ಲಿ ವಿಮಾನಯಾನ, ವಸತಿ ಉದ್ಯಮ ಮತ್ತು ಪ್ರವಾಸೋದ್ಯಮ ಬದಲಾವಣೆಯಲ್ಲಿ ಕೃತಕ ಬುದ್ಧಿಮತ್ತೆಯ ಹೊಸ ಆಯಾಮಗಳು ವಿಷಯದ ಕುರಿತು ವಿಚಾರ ಸಂಕಿರಣ ಆಯೋಜಿಸಿತ್ತು.

ಧಾರವಾಡ: ಕೃತಕ ಬುದ್ಧಿಮತ್ತೆಯ ಅಪ್ಲಿಕೇಶನ್‌ಗಳನ್ನು ವಿಮಾನಯಾನ,‌ ಪ್ರವಾಸೋದ್ಯಮ ‌ಮತ್ತು ಮಾಧ್ಯಮ, ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಬಳಕೆ ಮಾಡಲಾಗುತ್ತಿದ್ದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಉದ್ಯಮ ಸೇರಿದಂತೆ ಎಲ್ಲ ಕ್ಷೇತ್ರಗಳಿಗೆ ಪೂರಕವಾಗಿ ಸಹಾಯಕವಾಗಿದೆ ಎಂದು ಥೈಲ್ಯಾಂಡಿನ ನಾರ್ಥ ಚಾಂಗ್ಮಯಿ ಯುನಿವರ್ಸಿಟಿಯ ಸ್ಕೂಲ್ ಆಫ್ ಆರ್ಟಿಫಿಸಿಯಲ್ ಇಂಟಲಿಜನ್ಸ್ ವಿಭಾಗದ ನಿರ್ದೇಶಕ ಕಿರಣ ಜಾಧವ ಹೇಳಿದರು.

ಕರ್ನಾಟಕ ಕಲಾ‌ ಕಾಲೇಜಿನ ಸ್ನಾತಕ ಮತ್ತು ಸ್ನಾತಕೋತ್ತರ ಪ್ರವಾಸೋದ್ಯಮ ಅಧ್ಯಯನ ವಿಭಾಗವು ಗುರುವಾರ ಥೈಲ್ಯಾಂಡಿನ ನಾರ್ಥ ಚಾಂಗ್ಮಯಿ ಯುನಿವರ್ಸಿಟಿಯ ಸಹಯೋಗದಲ್ಲಿ ''''''''ವಿಮಾನಯಾನ, ವಸತಿ ಉದ್ಯಮ ಮತ್ತು ಪ್ರವಾಸೋದ್ಯಮ ಬದಲಾವಣೆಯಲ್ಲಿ ಕೃತಕ ಬುದ್ಧಿಮತ್ತೆಯ ಹೊಸ ಆಯಾಮಗಳು ವಿಷಯದ ಕುರಿತು ಆಯೋಜಿಸಿದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಇಂದು ಡೇಟಾ ಸೈನ್ಸ್ ಪ್ರಸ್ತುತ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ. ಡೇಟಾ ವಿಶ್ಲೇಷಣೆ ಪ್ರಸ್ತುತ ಬಹಳ ಜನಪ್ರಿಯ ಪರಿಕಲ್ಪನೆ ಆಗಿದೆ. ಡೇಟಾ ಸೈನ್ಸ್ ಪ್ರಸ್ತುತ ಉದ್ಯಮ ಕ್ಷೇತ್ರದಲ್ಲಿ ಬಳಕೆ ಮಾಡಲಾಗುತ್ತಿದ್ದು, ತ್ವರಿತವಾಗಿ ನಿರ್ಧಾರ ಕೈಗೊಳ್ಳಲು ಡೇಟಾ ಸೈನ್ಸ್ ಬಹಳ ಪ್ರಯೋಜನಕಾರಿ ಆಗಿದೆ ಎಂದರು.

ಬ್ಯಾಂಕಿಂಗ್, ವಾಣಿಜ್ಯ ವ್ಯವಹಾರ, ಆರ್ಥಿಕ, ಸ್ಟಾಕ್‌ ಮಾರುಕಟ್ಟೆ, ಆರೋಗ್ಯ ಕ್ಷೇತ್ರಗಳಲ್ಲಿ ಹೆಚ್ಚು ಡೇಟಾ ಸೈನ್ಸ್‌ ಮತ್ತು ಕೃತಕ ಬುದ್ಧಿಮತ್ತೆ ಉಪಯುಕ್ತವಾಗಿದೆ ಎಂದು ವಿಶ್ಲೇಷಿಸಿದರು. ಭವಿಷ್ಯದಲ್ಲಿ ಡೇಟಾ ಸೈನ್ಸ್, ಡಿಜಿಟಲ್ ಮತ್ತು ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಲ್ಲ ಉದ್ದಿಮೆ ಕ್ಷೇತ್ರದಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದ ಅವರು, ವಿದ್ಯಾರ್ಥಿಗಳು ಕೃತಕ ಬುದ್ಧಿಮತ್ತೆ ಸಂಬಂಧಿಸಿದ ವೃತ್ತಪರ ಕೋರ್ಸುಗಳನ್ನು ಆಯ್ಕೆ ಮಾಡಿಕೊಳ್ಳಿ. ಇಂದು ಪ್ರವಾಸೋದ್ಯಮ, ವಿಮಾನಯಾನ, ವಾಣಿಜ್ಯ, ಬಿಬಿಎ. ಎಂಬಿಎ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳ ಹೆಚ್ಚು ಬೇಡಿಕೆ ಇದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಲಾ ಕಾಲೇಜಿನ ಐಕ್ಯೂಎಸಿ ವಿಭಾಗದ ಸಂಯೋಜಕ ಡಾ. ಐ‌.ಸಿ. ಮುಳಗುಂದ, ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಹೆಚ್ಚು ಬಳಕೆಯಲ್ಲಿರುವ ತಂತ್ರಜ್ಞಾನ. ಕೃತಕ ಬುದ್ಧಿಮತ್ತೆಯನ್ನು ಅಪರಾಧ, ಸಾರಿಗೆ. ಪೊಲೀಸ್, ಮಾಧ್ಯಮ, ಶಿಕ್ಷಣ ಕ್ಷೇತ್ರದಲ್ಲಿ ಬಳಕೆಯಾಗುತ್ತಿದ್ದು, ಮಷಿನ್ ಲರ್ನಿಂಗ್, ಧ್ವನಿ ಗುರುತಿಸುವಿಕೆ, ಅನುವಾದಕ್ಕೂ ಬಳಸಲಾಗುತ್ತಿದೆ. ಯಾವುದೇ ರೀತಿಯ ತಂತ್ರಜ್ಞಾನ ಬಂದರೂ ಮಾನವ ಸಂಪನ್ಮೂಲ ಹೆಚ್ಚಿನ ಶಕ್ತಿಯಾಗಿದೆ ಎಂದರು.

ಕರ್ನಾಟಕ ಕಾಲೇಜಿನ ಪ್ರವಾಸೋದ್ಯಮ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಜಗದೀಶ್ ಪ್ರಾಸ್ತಾವಿಕ ಮಾತನಾಡಿದರು. ಕವಿವಿ ವಿಶ್ರಾಂತ ಕುಲಸಚಿವ ಪ್ರೊ. ಎಸ್. ರಾಜಶೇಖರ, ಶಾಂತಿಸೇನ್ ಪಾಸ್ತೆ, ವಿನಾಯಕ ಶೇಟ್, ಡಾ. ಇಂದ್ರಾಣಿ ಕಟ್ಟಿ, ಪ್ರೊ. ರೋಜಟ್ ದದ್ದಾಪೂರಿ, ಡಾ. ಸುಷ್ಮಾ, ಪ್ರೊ. ಸಂದೀಪ. ಡಾ. ರಾಣಿ ಇದ್ದರು.