ತಂತ್ರಜ್ಞಾನದೊಂದಿಗೆ ಶಿಕ್ಷಣವು ಗಣನೀಯವಾಗಿ ಬೆಳವಣಿಗೆ ಸಾಧಿಸಿದ್ದು, ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸಿದೆ. ಶಿಕ್ಷಣದಲ್ಲಿ ತಂತ್ರಜ್ಞಾನದ ಕೇಂದ್ರೀಯ ಪಾತ್ರದ ಮಹತ್ವ ಹೆಚ್ಚಾಗಿದೆ. ಎಐ ಶಿಕ್ಷಣ ಹಾಗೂ ಸಂಶೋಧನೆ ಎರಡನ್ನೂ ಬೆಂಬಲಿಸಬಹುದು.

ಕನ್ನಡಪ್ರಭ ವಾರ್ತೆ ಮೈಸೂರು

ಕೃತಕ ಬುದ್ಧಿಮತ್ತೆಯು (ಎಐ) ಶಿಕ್ಷಣದಲ್ಲಿ ಕ್ರಾಂತಿಯನ್ನು ಸಾಧಿಸಿದೆ ಎಂದು ಎಸ್ ಜೆಸಿಇ ಗಣಕ ವಿಜ್ಞಾನ ಮತ್ತು ಎಂಜಿನಿಯರ್ ವಿಭಾಗದ ಪ್ರಾಧ್ಯಾಪಕಿ ಡಾ.ಎಂ.ಎ.ಅನುಸೂಯ ತಿಳಿಸಿದರು.

ನಗರದ ಸರಸ್ವತಿಪುರಂ ಜೆಎಸ್‌ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಾವೀನ್ಯತಾ ಮಂಡಳಿ ಹಾಗೂ ಐಕ್ಯೂಎಸಿ ಸಂಯುಕ್ತವಾಗಿ ಶನಿವಾರ ಆಯೋಜಿಸಿದ್ದ ಸ್ಮಾರ್ಟ್ ಟೀಚಿಂಗ್: ತರಗತಿಯಲ್ಲಿ ಎಐ ಉಪಕರಣಗಳ ಸಂಯೋಜನೆ ಕುರಿತು ಒಂದು ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ತಂತ್ರಜ್ಞಾನದೊಂದಿಗೆ ಶಿಕ್ಷಣವು ಗಣನೀಯವಾಗಿ ಬೆಳವಣಿಗೆ ಸಾಧಿಸಿದ್ದು, ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸಿದೆ. ಶಿಕ್ಷಣದಲ್ಲಿ ತಂತ್ರಜ್ಞಾನದ ಕೇಂದ್ರೀಯ ಪಾತ್ರದ ಮಹತ್ವ ಹೆಚ್ಚಾಗಿದೆ. ಎಐ ಶಿಕ್ಷಣ ಹಾಗೂ ಸಂಶೋಧನೆ ಎರಡನ್ನೂ ಬೆಂಬಲಿಸಬಹುದು. ದೈನಂದಿನ ಶೈಕ್ಷಣಿಕ ಕಾರ್ಯಗಳಲ್ಲಿ ವಿವಿಧ ಪ್ರಾಯೋಗಿಕ ಎಐ ಉಪಕರಣಗಳನ್ನು ಬಳಸಬಹುದು. ಶಿಕ್ಷಣವನ್ನು ಹೆಚ್ಚು ಆಕರ್ಷಕ ಮತ್ತು ಪರಿಣಾಮಕಾರಿಯಾಗಿಸಲು ಎಐಯನ್ನು ಜವಾಬ್ದಾರಿಯುತ ಮತ್ತು ನೈತಿಕವಾಗಿ ಬಳಸಬೇಕು ಎಂದರು.

ಎಸ್‌ ಜೆಸಿಇ ಮಾಹಿತಿ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಎಚ್.ವೈ.ವಾಣಿ ಮಾತನಾಡಿ, ತರಗತಿಗಳಲ್ಲಿ ತಂತ್ರಜ್ಞಾನವನ್ನು ಸೇರಿಸಿಕೊಳ್ಳುವುದು ಮಹತ್ವವಾಗಿದೆ. ಎಐ ಶಿಕ್ಷಣ ಕಲಿಕಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಇದನ್ನು ಸರಿಯಾದ ರೀತಿಯಲ್ಲಿ ಬಳಸಬೇಕು ಎಂದರು.

ನಂತರ ಆರ್ಟಿಎಸ್ ವೈ ಟೆಕ್ನಾಲಜೀಸ್‌ ಸಂಸ್ಥಾಪಕ, ಸಿಇಒ ಭುವನ್ ಎಸ್. ಬಿರಾದರ್ ಮತ್ತು ಆಪರೇಷನ್ಸ್ ಆಫೀಸರ್ ಯುಕ್ತಾ ಪೂರ್ಣ ದೀಪಿಕಾ ಅವರು ಎಐ ಉಪಕರಣಗಳನ್ನು ಹೇಗೆ ಬಳಸಬೇಕು ಎಂಬುದನ್ನು ವಿದ್ಯಾರ್ಥಿನಿಯರಿಗೆ ಪ್ರದರ್ಶಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ. ರೇಚಣ್ಣ, ಐಕ್ಯೂಎಸಿ ಸಂಚಾಲಕ ಎಚ್.ಜಿ. ಪ್ರದೀಪ್, ಸಂಸ್ಥೆಯ ನಾವೀನ್ಯತಾ ಮಂಡಳಿ ಸಂಚಾಲಕರಾದ ಡಾ. ಡುಕನ್ಯ ಇದ್ದರು. ದಿಶಾ ಪ್ರಾರ್ಥಿಸಿದರು. ಸ್ನಾತಕೋತ್ತರ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಎಸ್. ಶಿಲ್ಪಾ ಸ್ವಾಗತಿಸಿದರು. ಆಂಗ್ಲ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಂ.ಬಿ. ಲಲಿತಾಂಬ ವಂದಿಸಿದರು. ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಚ್.ಯು.ಪ್ರೀತಿ ನಿರೂಪಿಸಿದರು.ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಮೈಸೂರು

ಗಣರಾಜ್ಯೋತ್ಸವ ದಿನದಂದು ಜಿಲ್ಲೆಯ ಸರ್ಕಾರಿ ಕಚೇರಿಯಲ್ಲಿ, ಶಾಲಾ ಕಾಲೇಜುಗಳಲ್ಲಿ ಹಾಗೂ ಖಾಸಗಿ ಬ್ಯಾಂಕ್ ಗಳಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರಕ್ಕೆ ಪೂಜೆ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಯುವ ಭಾರತ ಸಂಘಟನೆಯ ಸಂಚಾಲಕ ಜೋಗಿ ಮಂಜು ಆಗ್ರಹಿಸಿದ್ದಾರೆ.

ಸಂಗೊಳ್ಳಿ ರಾಯಣ್ಣ ಅವರು ಹೋರಾಟದಲ್ಲಿ ಭಾಗಿಯಾಗಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಹಾಗೂ ದೇಶಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದು, ವೀರಮರಣವನ್ನಪ್ಪಿದ ದೇಶಭಕ್ತರಾಗಿದ್ದಾರೆ. ಅವರ ತ್ಯಾಗದ ಕುರಿತು ಮುಂದಿನ ಪೀಳಿಗೆಗೆ ತಿಳಿಸಿಕೊಡುವ ನಿಟ್ಟಿನಲ್ಲಿ ಮತ್ತು ಅವರ ತ್ಯಾಗ ಬಲಿದಾನ ನೆನಪಿಸಿಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಹೀಗಾಗಿ, ಸಂಗೊಳ್ಳಿ ರಾಯಣ್ಣರವರ ಭಾವಚಿತ್ರ ಗೌರವ ನಮನ ಸಲ್ಲಿಸುವಂತೆ ಕಳೆದ 4 ವರ್ಷಗಳ ಹಿಂದೆಯೇ ಆದೇಶವಾಗಿದ್ದು, ಇದನ್ನು ಅನುಪಾಲನೆ ಮಾಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದ್ದಾರೆ.