ಕನ್ನಡಪ್ರಭ ವಾರ್ತೆ ಬೆಳಗಾವಿ ಆಧುನಿಕ ತಂತ್ರಜ್ಞಾನ ಅಂದರೆ ಎ.ಐ ರಂಗಭೂಮಿಗೆ ಮಾರಕವಾಗಿದೆ. ಆದಷ್ಟು ಕಲಾಕ್ಷೇತ್ರದಿಂದ ಅದನ್ನು ದೂರವಿಟ್ಟು ಈ ಕಲೆಯನ್ನು ಉಳಿಸಿಕೊಳ್ಳುವ ಪ್ರತಿಜ್ಞೆಯನ್ನು ಅಂತಾರಾಷ್ಟ್ರೀಯ ವಿಶ್ವ ರಂಗಭೂಮಿಯ ದಿನದಂದು ಎಲ್ಲ ಕಲಾವಿದರು ಮಾಡೋಣ. ಇಲ್ಲದಿದ್ದರೆ ನಾಟಕವನ್ನೂ ಎ.ಐ ತಾನೇ ಮಾಡಬಹುದಾಂತಹ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ರಂಗಸಂಪದದ ಸಂಸ್ಥಾಪಕ ಶ್ರೀಪತಿ ಮಂಜನಬೈಲು ಕಳವಳ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಆಧುನಿಕ ತಂತ್ರಜ್ಞಾನ ಅಂದರೆ ಎ.ಐ ರಂಗಭೂಮಿಗೆ ಮಾರಕವಾಗಿದೆ. ಆದಷ್ಟು ಕಲಾಕ್ಷೇತ್ರದಿಂದ ಅದನ್ನು ದೂರವಿಟ್ಟು ಈ ಕಲೆಯನ್ನು ಉಳಿಸಿಕೊಳ್ಳುವ ಪ್ರತಿಜ್ಞೆಯನ್ನು ಅಂತಾರಾಷ್ಟ್ರೀಯ ವಿಶ್ವ ರಂಗಭೂಮಿಯ ದಿನದಂದು ಎಲ್ಲ ಕಲಾವಿದರು ಮಾಡೋಣ. ಇಲ್ಲದಿದ್ದರೆ ನಾಟಕವನ್ನೂ ಎ.ಐ ತಾನೇ ಮಾಡಬಹುದಾಂತಹ ಭಯದ ವಾತಾವರಣ ನಿರ್ಮಾಣವಾಗಿದೆ ಎಂದು ರಂಗಸಂಪದದ ಸಂಸ್ಥಾಪಕ ಶ್ರೀಪತಿ ಮಂಜನಬೈಲು ಕಳವಳ ವ್ಯಕ್ತಪಡಿಸಿದರು.ಬೆಳಗಾವಿಯ ರಂಗಸಂಪದ ತಂಡವು ನಗರದ ಕೋನವಾಳ ಗಲ್ಲಿಯ ಲೋಕಮಾನ್ಯ ರಂಗಮಂದಿರದಲ್ಲಿ ಆಯೋಜಿಸಿದ ವಿಶ್ವ ರಂಗಭೂಮಿ ದಿನಾಚರಣೆ, ರಂಗಸಖ- 2026 ಪ್ರಶಸ್ತಿ ಪ್ರದಾನ, ವಿಶೇಷ ಗೌರವ ಸನ್ಮಾನ ಮತ್ತು ಮೂರು ದಿನದ ಚೈತ್ರ ನಾಟಕೋತ್ಸವದ ಉದ್ಘಾಟನೆ ಮತ್ತು ಕಾಜಾಣ ತಂಡದಿಂದ ಪಂಚಗವ್ಯ ಏಕಪಾತ್ರಾಭಿನಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಅಭಿಮಾನದ ಸಂಗತಿಯೆಂದರೆ ವೃತ್ತಿರಂಗಭೂಮಿ ಜನ್ಮ ತಳೆದದ್ದು ನಮ್ಮ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಲಸಗಿಯಲ್ಲಿ. ಹಲಸಗಿ ನಾಟಕ ಮಂಡಳಿ ಎಂಬ ಹೆಸರಿನಲ್ಲಿ ಪ್ರಾರಂಭಗೊಂಡಿತು. ವೆಂಕಣ್ಣಾಚಾರ್ಯ ಮತ್ತು ಪಾಂಗ್ರೀಶಾಚಾರ್ಯ ಇದರ ಸ್ಥಾಪಕರಾಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ.ಸರಜೂ ಕಾಟ್ಕರ್ ಮಾತನಾಡಿ, ಪಂಚಗವ್ಯ ಏಕಪಾತ್ರಾಭಿನಯದ ಬಾಲಕಲಾವಿದ ಗೋಕುಲ ಸಹೃದಯನ ಅಭಿನಯ ಅದ್ಭುತವಾಗಿದೆ ಎಂದರು.ಪ್ರಹ್ಲಾದ, ದ್ರುವ, ನಚಿಕೇತ, ಅಷ್ಟಾವಕ್ರ, ಮತ್ತು ಬಾಲಶಂಕರಾಚಾರ್ಯ ಪೌರಾಣಿಕ ಪಾತ್ರಗಳಲ್ಲಿ ಕಾಣಿಸಿಕೊಂಡ ಬಾಲಕಲಾವಿದ ಗೋಕುಲ ಸಹೃದಯ ತುಂಬ ನೈಜವಾಗಿ ಅಭಿನಯಸಿದರು. ವಿಶೇಷವಾಗಿ ಬಾಲಶಂಕರಾಚಾರ್ಯ ಮತ್ತು ಅಷ್ಟಾವಕ್ರನ ಪಾತ್ರಗಳು ಪ್ರೇಕ್ಷಕರ ಮನ ಗೆದ್ದವು. ರಚನೆ, ನಿರ್ದೇಶನ, ಸಂಗೀತ ಡಾ.ಎಸ್.ಎಲ್.ಎನ್.ಸ್ವಾಮಿಯವರದಾಗಿತ್ತು. ಭಾರತೀಯ ಜೀವ ವಿಮಾ ನಿಗಮದ ಮಾರುಕಟ್ಟೆ ವ್ಯವಸ್ಥಾಪಕ ಹರಿನಾಥ ಪ್ರಶಸ್ತಿ ಪ್ರದಾನ ಮಾಡಿದರು.
ನಟ, ನಿರ್ದೇಶಕ ವಿನಯ ಕುಲಕರ್ಣಿ ರಂಗಸಖ ಪ್ರಶಸ್ತಿ ಸ್ವೀಕರಿಸಿದರು. ದೇವಪ್ಪ ನಾಯಕ ಮತ್ತು ರಾಜೇಂದ್ರ ಸೈಬಣ್ಣವರಗೆ ವಿಶೇಷ ಗೌರವ ಸನ್ಮಾನ ಮಾಡಲಾಯಿತು. ನಾಟಕೋತ್ಸವದ ಪ್ರಾಯೋಜಕತ್ವವನ್ನು ಭಾರತೀಯ ಜೀವ ವಿಮಾ ನಿಗಮ ಬೆಳಗಾವಿ ಘಟಕ ವಹಿಸಿಕೊಂಡಿತ್ತು. ಡಾ.ಅರವಿಂದ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಸಾದ ಕಾರಜೋಳ ಸ್ವಾಗತಿಸಿದರು. ಪೂಜಾ ಕಾರಜೋಳ ಸಂದೇಶ ವಾಚನ ಮಾಡಿದರು. ಪದ್ಮಾ ಕುಲಕರ್ಣಿ ಪ್ರಶಸ್ತಿ ಪತ್ರ ವಾಚಿಸಿದರು. ಅಶೋಕ ಕುಲಕರ್ಣಿ ವಂದಿಸಿದರು. ವೀಣಾ ಹೆಗಡೆ ನಿರೂಪಿಸಿದರು.