ಕೃತಕ ಬುದ್ಧಿಮತ್ತೆಯು ವೈದ್ಯರಿಗೆ ಸಹಕಾರಿ

| Published : Nov 21 2025, 01:00 AM IST

ಕೃತಕ ಬುದ್ಧಿಮತ್ತೆಯು ವೈದ್ಯರಿಗೆ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃತಕ ಬುದ್ಧಿಮತ್ತೆಯು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನು ತರುವುದರ ಮೂಲಕ ರೋಗಿಯಲ್ಲಿರುವ ಕಾಯಿಲೆಯನ್ನು ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲು ವೈದ್ಯರಿಗೆ ಸಹಕಾರಿಯಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಪತಿ, ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಕೃತಕ ಬುದ್ಧಿಮತ್ತೆಯು ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನು ತರುವುದರ ಮೂಲಕ ರೋಗಿಯಲ್ಲಿರುವ ಕಾಯಿಲೆಯನ್ನು ಗುರುತಿಸಿ ಅದಕ್ಕೆ ಸೂಕ್ತ ಚಿಕಿತ್ಸೆಯನ್ನು ನೀಡಲು ವೈದ್ಯರಿಗೆ ಸಹಕಾರಿಯಾಗಿದೆ ಎಂದು ಸಾಹೇ ವಿಶ್ವವಿದ್ಯಾಲಯದ ಕುಲಪತಿ, ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು. ನಗರದ ಹೊರವಲಯ ಅಗಲಕೋಟೆಯಲ್ಲಿರುವ ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಎಚ್. ಎಂ ಗಂಗಾಧರಯ್ಯ ಸಭಾಂಗಣದಲ್ಲಿ ಆಯೋಜಿದ್ದಂತಹ ಮೂರು ದಿನಗಳ ಎಸ್‌ಎಸ್‌ಎಂಸಿ ಕಾನ್ – 2025 ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರ ಸಾಕಷ್ಟು ರೀತಿಯಲ್ಲಿ ಬದಲಾವಣೆಯನ್ನು ಕಂಡಿದೆ. ಕೃತಕ ಬುದ್ದಿ ಮತ್ತೆ ವೈದ್ಯಕೀಯ ಕೇತ್ರಕ್ಕೆ ಕಾಲಿಟ್ಟಮೇಲಂತೂ ಆರೋಗ್ಯ ಸೇವೆ ಸುಧಾರಿಸಿದೆ. ಇಂದು ಭಾರತ ಸುಮಾರು 2 ಲಕ್ಷಕ್ಕೂ ಅಧಿಕ ಮಂದಿ ವೈದ್ಯರನ್ನು ನೀಡುತ್ತಿದೆ ಈ ವೈದ್ಯರೆಲ್ಲರೂ ಕೇವಲ ಭಾರತದಲ್ಲಿ ಮಾತ್ರ ಸೇವೆಯನ್ನು ನೀಡದೆ ಪ್ರಪಂಚದಾದ್ಯಂತ ತಮ್ಮ ಸೇವೆಯನ್ನು ನೀಡುತ್ತಾ ಹೆಸರುವಾಸಿಯಾಗಿದ್ದಾರೆ. ಹಾಗಾಗಿ ಇಡೀ ವಿಶ್ವದಾದ್ಯಂತ ಭಾರತದ ವೈದ್ಯರಿಗೆ ಸಾಕಷ್ಟು ಬೇಡಿಕೆ ಇದೆ. ಭಾರತದ ವೈದ್ಯರು ನೀಡುವ ವೈದ್ಯಕೀಯ ಸೇವೆ ಬೇರಿನ್ಯಾವುದೇ ದೇಶದ ವೈದ್ಯರೂ ನೀಡುವುದಿಲ್ಲ ಹಾಗಾಗಿ ಭಾರತದ ವೈದ್ಯರಿಗೆ ಸಾಕಷ್ಟು ಮಹತ್ವವಿದೆ. ಜನಸಾಮಾನ್ಯರ ಕೈಗೆಟಕುವ ಹಾಗೆ ಆರೋಗ್ಯ ಸೇವೆಯನ್ನು ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಅದರಂತೆ ನಮ್ಮ ಶ್ರೀ ಸಿದ್ಧಾರ್ಥ ವೈದ್ಯಕೀಯ ವಿದ್ಯಾಲಯದಲ್ಲಿ ನೀಡುತ್ತಿದ್ದೇವೆ ಎಂದು ಹೇಳಿದರು. ವೈದ್ಯಕೀಯ ಕೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು, ಪ್ರಯೋಗಗಳು ಅಗತ್ಯವಿದೆ ಹಾಗಾಗಿ ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು ಸಂಶೋಧನೆಯನ್ನು ಪ್ರಯೋಗಗಳನ್ನು ಮಾಡುವುದರಿಂದ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು ಹಾಗೂ ಸಾಕಷ್ಟು ವಿಷಯಗಳನ್ನು ಅರಿತುಕೊಳ್ಳಬಹುದು. ಇದರಿಂದ ನಿಮ್ಮ ಜ್ಞಾನಮಟ್ಟ ಸುಧಾರಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಮುಖ್ಯ ಅಥಿತಿಯಾಗಿ ಆಗಮಿಸಿದ್ದ ಡಾ. ಶಿವಲಿಂಗಯ್ಯ ಮಾತನಾಡಿ, ಗ್ರಾಮೀಣ ಭಾಗದ ಜನರಿಗೆ ಶ್ರೀ ಸಿದ್ಧಾರ್ಥ ವೈದ್ಯಕೀಯ ಆಸ್ಪತ್ರೆ ಉತ್ತಮವಾದ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಇಂದು ಆರೋಗ್ಯ ಸೇವಾವಲಯದಲ್ಲಿ ಸಾಕಷ್ಟು ಬದಲಾವಣೆಗಳಾಗಿ ಅನೇಕ ಸಂಶೋಧನೆಗಳು ಆವಿಷ್ಕಾರಗಳಾಗಿದೆ. ಇದರಿಂದ ದೀರ್ಘಕಾಲದ ಕಾಯಿಲೆಗಳನ್ನು ಗುಣಪಡಿಸಬಹುದಾಗಿದೆ. ಅದರಲ್ಲೂ ವೈದ್ಯಕೀಯ ಕೇತ್ರದಲ್ಲಾಗಿರುವ ತಂತ್ರಜ್ಞಾನದ ಬದಲಾವಣೆಯಿಂದ ಸಾಕಷ್ಟು ಚಿಕಿತ್ಸೆಯನ್ನು ನೀಡಲು ಅನುಕೂಲಮಾಡಿಕೊಟ್ಟಿದೆ. ಕೋವಿಡ್ 19 ನಮ್ಮ ವೈದ್ಯಕೀಯ ಕ್ಷೇತ್ರದಲ್ಲಿರುವ ದೌರ್ಬಲ್ಯಗಳನ್ನು ತೋರಿಸಿಕೊಟ್ಟಿದೆ. ಹಾಗೂ ಆರೋಗ್ಯದಲ್ಲಿ ಮೂಲ ಸೌಲಭ್ಯಗಳನ್ನು ಹೊಂದಲು ಅನುಕೂಲಮಾಡಿಕೊಟ್ಟಿತು. ಜೊತೆಗೆ ಸಾಕಷ್ಟು ಸಂಶೋಧನೆಗಳನ್ನು ದಾರಿ ಮಾಡಿಕೊಟ್ಟಿದೆ. ಆರೋಗ್ಯ ಸೇವೆಯನ್ನು ನೀಡುವವರಿಗೆ ಸಾಕಷ್ಟು ಜವಾಬ್ದಾರಿಗಳಿವೆ ಅದನ್ನು ಅವರು ಸರಿಯಾಗಿ ನಿಭಾಯಿಸಬೇಕು ಎಂದು ಹೇಳಿದರು. ಇನ್ನು ಈ ಸಮ್ಮೇಳನದಲ್ಲಿ ಸಾಹೇ ವಿಶ್ವ ವಿದ್ಯಾನಿಲಯದ ಉಪಕುಲಪತಿ ಡಾ. ಕೆ.ಬಿ ಲಿಂಗೇಗೌಡ, ಕುಲಸಚಿವರಾದ ಡಾ. ಅಶೋಕ್ ಮೆಹ್ತ, ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನ ಉಪ ಪ್ರಾಂಶುಪಾಲ ಡಾ. ಪ್ರಭಾಕರ್, ವೈದ್ಯಕೀಯ ಅಧೀಕ್ಷಕ ಡಾ.ವೆಂಕಟೇಶ್, ಹಾಗೂ ಡಾ.ರಾಜೇಶ್ವರಿ, ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಟ್ರಸ್ಟಿಗಳಾದ ಡಾ. ಆನಂದ್ ಹಾಗೂ ಪರಿಕ್ಷಾಂಗ ನಿಯಂತ್ರಕರಾದ ಡಾ. ಗುರುಶಂಕರ್ ಹಾಗೂ ಕಾರ್ಯಕ್ರಮದ ಸಂಯೋಜಕರಾದ ಡಾ. ಸವಿತಾರಾಣಿ ಸೇರಿದಂತೆ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.