ಕನ್ನಡಪ್ರಭ ವಾರ್ತೆ ತುಮಕೂರು
ಇಂದಿನ ಕೃತಕ ಬುದ್ಧಿಮತ್ತೆ ಮಾನವಕುಲಕ್ಕೆ ಭಸ್ಮಾಸುರನ ವರದಂತೆ ಸಿಕ್ಕಿರುವ ಪ್ರಬಲ ಶಕ್ತಿಯಾಗಿದೆ. ಭಸ್ಮಾಸುರನಿಗೆ ಅಪಾರ ಬುದ್ಧಿವಂತಿಕೆ ಮತ್ತು ಶಿಸ್ತು ಇತ್ತು. ಆದರೆ ನೈತಿಕತೆ ಮತ್ತು ವಿವೇಕವಿಲ್ಲದ ಕಾರಣ ಆ ಶಕ್ತಿ ಅವನ ವಿನಾಶಕ್ಕೇ ಕಾರಣವಾಯಿತು ಎಂದು ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಿರ್ದೇಶಕರಾದ ಪ್ರೊ. ದೇಬಬ್ರತ ದಾಸ್ ಅಭಿಪ್ರಾಯಪಟ್ಟರು.ಬುಧವಾರ ನಡೆದ ತುಮಕೂರು ವಿಶ್ವವಿದ್ಯಾನಿಲಯದ 19ನೇ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ ಘಟಿಕೋತ್ಸವ ಭಾಷಣ ಮಾಡಿದರು.
ನೈತಿಕ ಹೃದಯವಿಲ್ಲದಿದ್ದರೆ ಈ ಶಕ್ತಿ ಸಮಾಜದ ವ್ಯವಸ್ಥೆ ಮತ್ತು ಖಾಸಗಿತನವನ್ನು ನಾಶಪಡಿಸಬಹುದು. ಕೇವಲ ಬುದ್ಧಿವಂತಿಕೆಯು ಅಲ್ಗಾರಿದಮ್ ಅನ್ನು ಹೇಗೆ ನಿರ್ಮಿಸಬೇಕೆಂದು ಹೇಳಿಕೊಟ್ಟರೆ, ಮೌಲ್ಯಗಳು ಅದನ್ನು ಬಳಸಬೇಕೇ ಅಥವಾ ಬೇಡವೇ ಎಂದು ನಿರ್ಧರಿಸುತ್ತವೆ. ಎಐ ತಂತ್ರಜ್ಞಾನದ ಅರಿವಿರುವ ಪರಿಣತರು ಭವಿಷ್ಯದಲ್ಲಿ ತಂತ್ರಜ್ಞಾನ ತಿಳಿಯದವರ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ. ಎಐ ತಂತ್ರಜ್ಞಾನಕ್ಕೆ ಮಾನವ ಸಹಜವಾದ ಸಹಾನುಭೂತಿ, ಸಂದರ್ಭೋಚಿತ ನಿರ್ಧಾರ ಸಾಮರ್ಥ್ಯ, ಆಳವಾದ ಅಂತಃಪ್ರಜ್ಞೆ ಮತ್ತು ಸೃಜನಶೀಲತೆಯನ್ನು ನಕಲು ಮಾಡಲು ಸಾಧ್ಯವಿಲ್ಲ. ಕಲಿಯುವುದು, ಕಲಿತದ್ದನ್ನು ಬಿಡುವುದು ಮತ್ತು ಮರುಕಳಿಸುವುದು ಇಂದಿನ ಅಗತ್ಯವಾಗಿದೆ ಎಂದರು.ಭಾರತ ಇಂದು ಕೇವಲ ತಂತ್ರಜ್ಞಾನ ಬಳಸುವ ದೇಶವಾಗಿ ಉಳಿದಿಲ್ಲ, ಬದಲಿಗೆ ಜಗತ್ತಿಗೇ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ ನಿರ್ಮಿಸಿಕೊಡುತ್ತಿದೆ. ಐಐಐಟಿ-ಬೆಂಗಳೂರು ಮುನ್ನಡೆಸುತ್ತಿರುವ ಮಾಡ್ಯುಲರ್ ಓಪನ್ ಸೋರ್ಸ್ ಐಡೆಂಟಿಟಿ ಪ್ಲಾಟ್‌ಫಾರ್ಮ್ ಉತ್ಪನ್ನವು ಇಂದು ಜಗತ್ತಿನ ೨೯ ದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರಿಂದಾಗಿ ತುಮಕೂರಿನಲ್ಲಿ ಕುಳಿತಿರುವ ವಿದ್ಯಾರ್ಥಿಗೂ ಸ್ಯಾನ್ ಫ್ರಾನ್ಸಿಸ್ಕೋ ಅಥವಾ ಟೋಕಿಯೋದಲ್ಲಿರುವ ವ್ಯಕ್ತಿಯಷ್ಟೇ ಸಮಾನ ಜಾಗತಿಕ ಅವಕಾಶಗಳು ಸಿಗುತ್ತಿವೆ ಎಂದರು.
12ನೇ ಶತಮಾನದ ಶರಣರ ಕಾಯಕವೇ ಕೈಲಾಸ ತತ್ವವನ್ನು ನೆನಪಿಸಿದ ಅವರು, ಪ್ರಾಮಾಣಿಕ ಮತ್ತು ಸಮರ್ಪಿತ ಕೆಲಸವೇ ದೈವತ್ವ ಎಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ವಾಣಿಜ್ಯ, ವಿಜ್ಞಾನ ಹಾಗೂ ತಂತ್ರಜ್ಞಾನದ ಜ್ಞಾನವನ್ನು ಸ್ಥಳೀಯ ಕೃಷಿ ವಲಯ, ಗ್ರಾಮೀಣ ಆರೋಗ್ಯ, ನೀರು ಸಂರಕ್ಷಣೆ ಮತ್ತು ಸಣ್ಣ ಕೈಗಾರಿಕೆಗಳ ಸುಧಾರಣೆಗೆ ಬಳಸಿಕೊಳ್ಳಬೇಕು. ತಂತ್ರಜ್ಞಾನವು ಕೇವಲ ಇಂಜಿನ್ ಆಗಿದ್ದರೆ, ನಮ್ಮ ಚಾರಿತ್ರ್ಯ ಮತ್ತು ಮೌಲ್ಯಗಳೇ ಅದರ ಸ್ಟಿಯರಿಂಗ್ ವೀಲ್ ಎಂದರು.
ಇದಕ್ಕೂ ಮುಂಚಿತವಾಗಿ ‘ತುಮಕೂರು ಇನ್ನೋವೇಶನ್ ಇನ್‌ಕ್ಯುಬೇಶನ್ ಅಂಡ್ ಆಂತ್ರಪ್ರಿನ್ಯುರ್‌ಶಿಪ್ ಕೌನ್ಸಿಲ್’ ಹಾಗೂ ‘ಗೋ ಗ್ರೀನ್ - ಬೈಸಿಕಲ್ ಇನೀಶಿಯೇಟಿವ್’ಗಳನ್ನು ಅತಿಥಿಗಳು ಉದ್ಘಾಟಿಸಿದರು.
ಮೂವರಿಗೆ ಗೌರವ ಡಾಕ್ಟರೇಟ್ ಘಟಿಕೋತ್ಸವದಲ್ಲಿ ಸ್ವಾತಂತ್ರ್ಯ ಹೋರಾಟಗಾ ಟಿ. ಆರ್. ರೇವಣ್ಣ, ಚಾರ್ಟರ್ಡ್ ಅಕೌಂಟೆಂಟ್ ಮತ್ತು ವಕೀಲ ಕೆ. ಆರ್. ಪ್ರದೀಪ್, ಚಿಂತಕ ದ್ವಾರನಕುಂಟೆ ಪಾತಣ್ಣ ಅವರಿಗೆ ತುಮಕೂರು ವಿವಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಜೊತೆಗೆ ಒಬ್ಬ ಅಭ್ಯರ್ಥಿಗೆ ಡಿ.ಲಿಟ್ ಪದವಿ, 59 ಅಭ್ಯರ್ಥಿಗಳು ಪಿಎಚ್.ಡಿ. ಪದವಿ, 2,058 ಅಭ್ಯರ್ಥಿಗಳು ಸ್ನಾತಕೋತ್ತರ ಹಾಗೂ 8,781 ಅಭ್ಯರ್ಥಿಗಳು (ಒಟ್ಟು 10,839 ಅಭ್ಯರ್ಥಿಗಳು) ಸ್ನಾತಕ ಪದವಿ ಪಡೆದರು.