- ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿರುವ ಸಿಎಂ, ಸಚಿವರು: ಆರೋಪ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ರಾಜ್ಯದಲ್ಲಿ ಯೂರಿಯಾ, ಡಿ.ಎ.ಪಿ. ರಸಗೊಬ್ಬರದ ಕೃತಕ ಅಭಾವವನ್ನು ಸೃಷ್ಠಿ ಮಾಡುತ್ತಿರುವ ರಾಜ್ಯ ಸರ್ಕಾರ, ತನ್ನ ಆಡಳಿತ ವೈಫಲ್ಯಗಳನ್ನು ಮರೆಮಾಚಲು ಅನಗತ್ಯವಾಗಿ ಕೇಂದ್ರ ಸರ್ಕಾರವನ್ನು ದೂರುತ್ತಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.ಸೋಮವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕುಗಳಲ್ಲಿ ವರ್ತಕರು ಯೂರಿಯಾ ಮತ್ತಿತರೆ ರಸಗೊಬ್ಬರ ಹಾಗೂ ಬಿತ್ತನೆ ಬೀಜಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ರೈತರು ಅಧಿಕೃತ ಬಿಲ್ ಕೇಳಿದರೂ ಕೊಡುತ್ತಿಲ್ಲ. ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಈ ಮಧ್ಯೆ ಮುಖ್ಯಮಂತ್ರಿ, ಸಚಿವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದರು.
ಮುಂಗಾರು ಹಂಗಾಮು ಆರಂಭಕ್ಕೆ ಮುಂಚಿತವಾಗಿಯೇ ರಾಜ್ಯಕ್ಕೆ ಎಷ್ಟು ಪ್ರಮಾಣದ ರಸಗೊಬ್ಬರ, ಬಿತ್ತನೆಬೀಜ ಅಗತ್ಯವಿದೆ ಎನ್ನುವ ಸ್ಪಷ್ಟ ಮಾಹಿತಿ ಸರ್ಕಾರ ಅಧಿಕಾರಿಗಳಿಂದ ಪಡೆದು ಕೇಂದ್ರಕ್ಕೆ ಬೇಡಿಕೆ ಸಲ್ಲಿಸಬೇಕು. ಆದರೆ, ರಾಜ್ಯ ಸರ್ಕಾರ ಈ ಕೆಲಸ ಮಾಡಿದಂತೆ ಕಾಣುತ್ತಿಲ್ಲ. ಇರಾನ್, ಇಸ್ರೇಲ್ ಯುದ್ಧ ಪ್ರತಿಕೂಲ ಪರಿಸ್ಥಿತಿಯಲ್ಲೂ ದೇಶದಲ್ಲಿ ಪೆಟ್ರೋಲ್, ಡೀಸೆಲ್, ರಸಗೊಬ್ಬರಗಳಿಗೆ ಕೊರತೆ ಆಗದಂತೆ ಪ್ರಧಾನಿ ನರೇಂದ್ರ ಮೋದಿ ನೋಡಿಕೊಳ್ಳುತ್ತಿದ್ದಾರೆ. ರಸಗೊಬ್ಬರ, ಬಿತ್ತನೆ ಬೀಜಗಳನ್ನು ನಿಗದಿತ ದರಗಳಿಗಿಂತ ಹೆಚ್ಚಿನ ದರಗಳಿಗೆ ಮಾರಾಟ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಎನ್‌ಪಿಎಸ್ ರದ್ದು ಮಾಡಬೇಕು:
ಸರ್ಕಾರಿ ನೌಕರರಿಗೆ ಹೊಸ ಪೆನ್ಷನ್ ಪದ್ಧತಿ (ಎನ್.ಪಿ.ಎಸ್.) ಯೋಜನೆಯನ್ನು ಸರ್ಕಾರ ಕೂಡಲೇ ಕೈಬಿಟ್ಟು ಹಿಂದಿನ ಒ.ಪಿ.ಎಸ್. (ಹಳೆ ಪೆನ್ಷನ್ ಪದ್ಧತಿ) ಪದ್ಧತಿಯನ್ನೇ ಎಲ್ಲರಿಗೂ ಜಾರಿ ಮಾಡಬೇಕು. ನೌಕರರಲ್ಲಿಯೇ ತಾರತಮ್ಯ ನೀತಿ ಮಾಡಬಾರದು ಎಂದು ಸರ್ಕಾರಕ್ಕೆ ಒತ್ತಾಯಪಡಿಸಿದರು.ವಿಷ್ಟು ಸಹಸ್ರನಾಮ ಯಾಗ:
ದೇಶದ ಪ್ರಧಾನಿ ನರೇಂದ್ರ ಮೋದಿಯವರ 12 ವರ್ಷಗಳ ಅತ್ಯಂತ ಸಾರ್ಥಕ ಅಡಳಿತದ ಕಾರಣ ಅವರ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಹೊನ್ನಾಳಿಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಜೂನ್ 16ರಂದು ಬೆಳಗ್ಗೆ 11 ಗಂಟೆಗೆ ವಿಷ್ಣು ಸಹಸ್ರನಾಮ ಯಾಗ ನಡೆಯಲಿದೆ. ಭಕ್ತರು, ಕಾರ್ಯಕರ್ತರು ಭಾಗವಹಿಸುವಂತೆ ಮನವಿ ಮಾಡಿದರು.ಮಂಡಲ ಅಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ದೊಡ್ಡೇರಿ ಡಿ.ಜಿ. ರಾಜಪ್ಪ, ನೆಲಹೊನ್ನೆ ಮಂಜುನಾಥ, ಎಂ.ಎಸ್. ಫಾಲಾಕ್ಷಪ್ಪ ಬೀರಪ್ಪ, ರಂಗಪ್ಪ, ಮಹೇಶ್ ಹುಡೇದ್ ಮತ್ತಿತರರು ಇದ್ದರು.
- - -(ಟಾಪ್ ಕೋಟ್)
ಅಧಿಕಾರಿಗಳು ಮತದಾರರ ಪಟ್ಟಿ ವಿಶೇಷ ಪರಿಷ್ಕಕರಣೆ ಕೆಲಸ ಮಾಡುತ್ತಿದ್ದು, ಈ ಕಾರ್ಯವನ್ನು ದೇಶದ ಹಿತದಷ್ಠಿಯಿಂದ ಪ್ರಾಮಾಣಿಕವಾಗಿ ಮಾಡಬೇಕಾಗಿದೆ. ಎಸ್.ಐ.ಆರ್. ಪ್ರಕ್ರಿಯೆಯಿಂದ ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಕನಿಷ್ಠ 10ರಿಂದ 15 ಸಾವಿರ ನಕಲಿ ಮತದಾರರು ಕೈಬಿಡುವ ಸಂದರ್ಭಗಳಿವೆ. ಇದರಿಂದ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರಕ್ಕೆ ಭಯ ಶುರುವಾಗಿದೆ.- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮುಖಂಡ.
- - --15ಎಚ್.ಎಲ್.ಐ1:
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.