ಸಾಹಿತಿ ಎಸ್. ಎನ್. ಸೇತುರಾಮ್ ಗೆ ಶಾರದಾ ಕೃಷ್ಣ ಪುರಸ್ಕಾರ ಪ್ರದಾನ
ಉಡುಪಿ: ಜನರು ರಂಗಭೂಮಿಯಿಂದ ವಿಮುಖರಾಗುವುದಕ್ಕೆ ರಂಗಭೂಮಿಯೇ ಕಾರಣ ಹೊರತು ಅದು ಜನರ ತಪ್ಪಲ್ಲ ಎಂದು ಖ್ಯಾತ ರಂಗನಟ, ನಿರ್ದೇಶಕ, ಸಾಹಿತಿ ಎಸ್. ಎನ್. ಸೇತುರಾಮ್ ಹೇಳಿದರು.
ಅವರು ಶನಿವಾರ ಸಂಸ್ಕೃತಿ ವಿಳ್ವ ಪ್ರತಿಷ್ಠಾನದ ಆಶ್ರಯದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಿತ ಶಾರದಾ ಕೃಷ್ಣ ಪುರಸ್ಕಾರ - 2026ನ್ನು ಸ್ವೀಕರಿಸಿ ಮಾತನಾಡಿದರು.ರಾವಣನನ್ನು ಹೀರೋ ಮಾಡಿ, ರಾಮನನ್ನು ವಿಲನ್ ಮಾಡಿ ನಾಟಕ ಆಡುವ ಪ್ರಯೋಗಗಳು ನಡೆಯುತ್ತಿವೆ. ಜನರು ರಾಮನನ್ನು ಆದರ್ಶ ಎಂದು ನಂಬುತ್ತಾರೆ. ಆತನನ್ನು ವಿಲನ್ ಮಾಡಿದರೇ ಆತ ಆದರ್ಶ ಹೇಗಾಗುತ್ತಾನೆ, ಜನರು ಅಂತಹ ನಾಟಕಗಳನ್ನು ಯಾಕೆ ನೋಡುವುದಕ್ಕೆ ಬರುತ್ತಾರೆ ? ಎಂದವರು ಪ್ರಶ್ನಿಸಿದರು.
ನಂಬಿಕೆಗಳ ಮೇಲೆ ಜೀವನ ನಡೆಯುತ್ತಿರುವಾಗ, ಅಂತಹ ನಂಬಿಕೆಗಳ ಮೇಲೆಯೇ ತಮ್ಮ ಧೋರಣೆಯನ್ನು ಹೇರುವುದು ಎಷ್ಟು ಸರಿ ? ದೇವರೂ ಒಂದು ನಂಬಿಕೆ, ನಮ್ಮ ಸಂವಿಧಾನವೂ, ನಾವು ಬಳಸುವ ನೋಟುಗಳೂ ನಂಬಿಕೆಯೇ ಆಗಿವೆ. ವಿಚಾರವಾದ ಅಂತ ಬದುಕಿನ ಅವಶ್ಯಕ ನಂಬಿಕೆಗಳನ್ನೇ ಒಡೆದು ಹಾಕುತ್ತೇವೆ ಎಂದು ಬದುಕು ಎಲ್ಲಿರುತ್ತದೆ ಎಂದವರು ಪ್ರಶ್ನಿಸಿದರು.ಯಕ್ಷಗಾನ ಮತ್ತು ತಾಳಮದ್ದಲೆಯಂತಹ ಕಲೆಗಳನ್ನೂ ಕೆಲವರು ಟೀಕಿಸುತಿದ್ದಾರೆ, ಕಟೀಲು, ಮಂದಾರ್ತಿ ಮೇಳಗಳ ಯಕ್ಷಗಾನಗಳು 25 - 30 ವರ್ಷಗಳ ಕಾಲ ಬುಕಿಂಗ್ ಆಗಿವೆ ಎಂದರೇ ಆ ಕಲೆ ಮೇಲೆ ಜನರಿಗಿರುವ ನಂಬಿಕೆ ಮತ್ತು ಆ ಕಲೆಯ ಯೋಗ್ಯತೆ ಟೀಕಿಸುವವರಿಗೆ ಇದೆಯೇ ಎಂದು ಅವರು ಪ್ರಶ್ನಿಸಿದರು.
ಕೆಲವೊಮ್ಮೆ ಅಭಿಮಾನಿಗಳು ಕಲಾವಿದನಿಗೆ ಅಳತೆ ಮೀರಿದ ಪೇಟ ತೋಡಿಸುತ್ತಾರೆ, ಅದನ್ನು ಮನೆಗೆ ತೆಗೆದುಕೊಂಡು ಹೋಗಿ ಶೋಕೇಸ್ ನಲ್ಲಿಟ್ಟು ಬಿಡಬೇಕು, ಅದನ್ನು ಬಿಟ್ಟು ನಿತ್ಯ ಅದನ್ನೇ ತಲೆಗೆ ಹಾಕಿ ಓಡಾಡಿದರೇ ಕಣ್ಣೂ ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ ಎಂದವರು ಮಾರ್ಮಿಕವಾಗಿ ನುಡಿದರು. ಕಾರ್ಯಕ್ರಮವನ್ನು ಡಾ. ಶಿವರಾಮ ಕಾರಂತ ಟ್ರಸ್ಟ್ ನ ಅಧ್ಯಕ್ಷ ಡಾ. ಗಣನಾಥ ಎಕ್ಕಾರ್ ಉದ್ಘಾಟಿಸಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಿರಿಯರು ಬರುತ್ತಿಲ್ಲ ಎನ್ನುವ ದೂರಿದೆ, ಮಕ್ಕಳನ್ನು ಶಿಕ್ಷಣ, ವೃತ್ತಿಗೆ ತಯಾರು ಮಾಡುವಂತೆ ಸಂಸ್ಕೃತಿಗೂ ಸಿದ್ದಗೊಳಿಸಬೇಕಾಗಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ವಿಜಯನಾಥ ಹೆಗಡೆ ಬೆಂಗಳೂರು ಅಭಿನಂದನಾ ಮಾತುಗಳನ್ನಾಡಿದರು. ವೇದಿಕೆಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ.ಶಂಕರ್, ವಿಶ್ವಸ್ಥ ವಿಘ್ನೇಶ್ವರ ಅಡಿಗ, ಐಎಂಎ ಪೂರ್ವಧ್ಯಕ್ಷೆ ಡಾ. ರಾಜಲಕ್ಷ್ಮಿ, ಶ್ರೀ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ನ ವಿಶ್ವಸ್ಥ ವಾಸುದೇವ ಅಡಿಗ, ಪ್ರಶಸ್ತಿ ಸಂಚಾಲಕ ರಾಘವೇಂದ್ರ ಪ್ರಭು ಕರ್ವಾಲು ವೇದಿಕೆಯಲ್ಲಿದ್ದರು
ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಭಟ್ ಪಣಿಯಾಗಿ ಸ್ವಾಗತಿಸಿದರು, ಸಂಚಾಲಕ ರವಿರಾಜ್ ಎಚ್. ಪಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು, ಡಾ ಭಾರ್ಗವಿ ಐತಾಳ್ ಕಾರ್ಯಕ್ರಮ ನಿರೂಪಿಸಿದರು.