ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು ಕಲಾವಿದರು ಈ ನಾಡಿನ ಸಂಪತ್ತು ಸಾಂಸ್ಕೃತಿಕ ಹರಿಕಾರರು. ಇಂತಹ ಕಲಾವಿದರನ್ನು ಸರ್ಕಾರಗಳು ಕಡೆಗಣಿಸುತ್ತಲೇ ಬಂದಿವೆ. ನ್ಯಾಯಯುತವಾಗಿ ದೊರೆಯುವ ಸೌಲಭ್ಯಗಳು ಕಲಾವಿದರಿಗೆ ದೊರೆಯುತ್ತಿಲ್ಲ, ಕಲಾವಿದರು ಸಂಘಟಿತರಾಗಿ ತಮ್ಮ ಹಕ್ಕು ಪಡೆಯಲು ಹೋರಾಟ ಸಂಘಟಿಸಬೇಕು ಎಂದು ಕರ್ನಾಟಕ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟ ಅಧ್ಯಕ್ಷ ವೀರೇಶ್ ಪ್ರಸಾದ್ ಹೇಳಿದರು. ಬುಧವಾರ ನಗರದ ಕನ್ನಡ ಭವನದಲ್ಲಿ ಸಾಂಸ್ಕೃತಿಕ ಸಂಘಟನೆಗಳ ರಾಜ್ಯ ಮಹಾ ಒಕ್ಕೂಟದ ಜಿಲ್ಲಾ ಘಟಕ ಉದ್ಘಾಟನೆ ಹಾಗೂ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕೊರೊನಾ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡುತ್ತಿದ್ದ ಅನುದಾನದ ಪ್ರಮಾಣವನ್ನು ಸರ್ಕಾರ ಕಡಿತಗೊಳಿಸಿದೆ. ಇದರಿಂದ ಕಲಾವಿದರಿಗೆ, ಕಲಾ ಕಾರ್ಯಕ್ರಮಗಳಿಗೆ ದೊರೆಯಬೇಕಾಗಿದ್ದ ಸೌಕರ್ಯಗಳು ಸ್ಥಗಿತಗೊಂಡಿವೆ, ಕಲೆಯನ್ನೇ ಬದುಕಾಗಿಸಿಕೊಂಡ ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡುತ್ತಿರುವ ಅನುದಾನವನ್ನು ಸರ್ಕಾರ ೪ ಸಾವಿರ ಕೋಟಿ ರೂ.ಗಳಿಗೆ ಹೆಚ್ಚಿಸಬೇಕು, ಕಲಾವಿದರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಒಂದು ಸಾವಿರ ಕೋಟಿ ರೂ. ಮೀಸಲಿಡಬೇಕು. ಪ್ರತಿ ವರ್ಷ ಪ್ರತಿ ಜಿಲ್ಲೆಗೆ ಕಲಾಚಟುವಟಿಕೆಗಳಿಗಾಗಿ ೩ ಕೋಟಿ ರೂ. ಅನುದಾನ ನಿಗದಿ ಮಾಡಬೇಕು. ಕಲಾವಿದರ ಮಾಸಾಶನವನ್ನು ೫ ಸಾವಿರ ರೂ.ಗಳಿಗೆ ಹೆಚ್ಚಿಸಬೇಕು. ಕಲಾವಿದರನ್ನು ವಸತಿ ಯೋಜನೆಯಡಿ ವಿಶೇಷ ಘಟಕಕ್ಕೆ ಸೇರಿಸಿ ವಸತಿ, ನಿವೇಶನ ನೀಡಬೇಕು. ರಾಜ್ಯಾದ್ಯಂತ ಕಲವಿದರನ್ನು ಒಗ್ಗೂಡಿಸಿ ದೊಡ್ಡ ಹೋರಾಟ ಸಂಘಟಿಸಿ ಸರ್ಕಾರದಿಂದ ಹಕ್ಕು ಪಡೆಯುವ ಕೆಲಸ ಮಾಡಬೇಕು ಎಂದು ವೀರೇಶ್ ಪ್ರಸಾದ್ ಕರೆ ನೀಡಿದರು.ಕಾರ್ಯಕ್ರಮ ಉದ್ಘಾಟಿಸಿದ ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರಳಿಧರ ಹಾಲಪ್ಪ ಮಾತನಾಡಿ, ಹೋರಾಟದ ಮೂಲಕವೇ ಕಲಾವಿದರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು, ಅದಕ್ಕಾಗಿ ಸಂಘಟಿತರಾಗಬೇಕು. ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ.ಪರಮೇಶ್ವರರನ್ನು ಎಲ್ಲಾ ಕಲಾವಿದರು ಭೇಟಿ ಮಾಡಿ ಸಮಸ್ಯೆ ಮನವರಿಕೆ ಮಾಡಿಕೊಡೋಣ. ಸಚಿವರನೇತೃತ್ವದಲ್ಲಿ ಸರ್ಕಾರಕ್ಕೆ ನಿಯೋಗ ತೆರಳೋಣ ಎಂದು ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನ ಕಡಿತವಾಗಿಲ್ಲ, ಆ ಹಣವು ವಿವಿಧ ಇಲಾಖೆ, ನಿಗಮ, ಮಂಡಳಿಗಳಿಗೆ ಹಂಚಿಕೆಯಾಗಿದೆ. ಕಲಾವಿದರು ಸಂಬಂಧಿಸಿದ ಇಲಾಖೆ, ನಿಗಮಗಳಲ್ಲಿ ಪೂರಕ ಸೌಲಭ್ಯ ಪಡೆಯಲು ಅವಕಾಶವಿದೆ ಎಂದು ಹೇಳಿದರು.ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಗೌಡ, ಹಿರಿಯ ಕಲಾವಿದ ಡಾ.ಲಕ್ಷ್ಮಣದಾಸ್, ಕಲಾವಿದರ ಒಕ್ಕೂಟದ ಜಿಲ್ಲಾಧ್ಯಕ್ಷ ಪಂಚನಹಳ್ಳಿ ಜಯಕುಮಾರ್, ಗೌರವಾಧ್ಯಕ್ಷ ನರಸಿಂಹದಾಸ್, ಕಾರ್ಯಾಧ್ಯಕ್ಷ ಚಿಕ್ಕಹನುಮಂತಯ್ಯ, ಉಪಾಧ್ಯಕ್ಷರಾದ ಲಕ್ಷ್ಮಿ, ಪಿ.ಆರ್.ಶ್ರೀಕಂಠಯ್ಯ, ಪ್ರಧಾನ ಕಾರ್ಯದರ್ಶಿ ಐನಾಪುರ ಬಸವರಾಜು, ಸಂಘಟನಾ ಕಾರ್ಯದರ್ಶಿ ಈಶ್ವರ ದಳ, ಮಾಧ್ಯಮ ಕಾರ್ಯದರ್ಶಿ ಎಂ.ಆರ್.ಪ್ರವೀಣ್, ಸಹಕಾರ್ಯದರ್ಶಿ ಎನ್.ಲೋಕೇಶ್, ಖಜಾಂಚಿ ಜಿ.ರಾಮಯ್ಯ, ಉಸ್ತುವಾರಿ ಕನ್ನಡ ಪ್ರಕಾಶ್, ಹಿರಿಯ ಕಲಾವಿದರಾದ ಕೆ.ಪಿ.ಅಶ್ವತ್ಥನಾರಾಯಣ, ಎಂ.ವಿ.ನಾಗಣ್ಣ, ಕೆಂಪಣ್ಣ, ಡಾ.ಹಿರೇಮಠ್, ವಿಕ್ರಂ ಜೈಹಿಂದ್ ಮೊದಲಾದವರು ಭಾಗವಹಿಸಿದ್ದರು. ಈ ವೇಳೆ ಜಿಲ್ಲೆಯ ಹಲವಾರು ಕಲಾವಿದರಿಗೆ ಅವರ ಕಲಾ ಸೇವೆ ಪ್ರಶಂಸಿಸಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
;Resize=(128,128))
;Resize=(128,128))
;Resize=(128,128))