ಸಾರಾಂಶ
ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಅವರು ಪರಿಷತ್‌ನಲ್ಲಿ ಆಯೋಜಿಸಿರುವ ‘ಸೆಕ್ರೆಡ್ ಆರ್ಟ್ ಸ್ಪೇಸ್’ ಕಲಾ ಪ್ರದರ್ಶನದಲ್ಲಿನ ಕಲಾಕೃತಿಗಳನ್ನು ವೀಕ್ಷಿಸಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಚಿತ್ರಕಲೆ ವಿಶ್ವವ್ಯಾಪಿಯಾಗಿದ್ದು ಕಲಾವಿದರಿಗೆ ಯಾವುದೇ ಗಡಿ ಇಲ್ಲ. ಕಲೆಗೆ ಕರ್ನಾಟಕ ಚಿತ್ರಕಲಾ ಪರಿಷತ್ ಅಗತ್ಯ ಪ್ರೋತ್ಸಾಹ ನೀಡಲಿದೆ ಎಂದು ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಭರವಸೆ ನೀಡಿದರು.ಕೇಂದ್ರ ಸರ್ಕಾರವು ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಭಾರತ ಮತ್ತು ಪೋಲೆಂಡ್ ದೇಶದ ಸಂಸ್ಕೃತಿ ಪ್ರತಿಬಿಂಬಿಸುವ ಕಲಾಕೃತಿಗಳ 10 ದಿನಗಳ ಪ್ರದರ್ಶನ ‘ಸೆಕ್ರೆಡ್ ಆರ್ಟ್ ಸ್ಪೇಸ್’ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ಪ್ರಸಕ್ತ ಸಾಲಿನಿಂದ ಪೋಲೆಂಡ್ ಮತ್ತು ಭಾರತದ ಸಂಸ್ಕೃತಿ ಬಿಂಬಿಸುವ ಕಲಾ ಪ್ರದರ್ಶನವನ್ನು ಆಯೋಜಿಸಿದ್ದು ಬೆಂಗಳೂರಿಗೇ ಆತಿಥ್ಯ ಸಿಕ್ಕಿರುವುದು ಸಂತೋಷ ತಂದಿದೆ. ಪೋಲೆಂಡ್ ಮತ್ತು ಭಾರತದ 80 ಕಲಾವಿದರು ಈ ಕಲಾಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.ನಗರದ ಪೋಲೆಂಡ್ ಕಾನ್ಸುಲ್ ರಘು ರಾಜಪ್ಪ, ದೆಹಲಿಯ ಪೊಲಿಷ್ ಇನ್ಸ್‌ಟಿಟ್ಯೂಟ್ ನಿರ್ದೇಶಕಿ ಮಲ್ಗಾರ್ಜಿಯಾ ವೆಜ್‌ಸಿಸ್, ಪೋಲೆಂಡ್ ಕಲಾವಿದೆ.ಪ್ರೊ.ಆ್ಯನಾ, ಪರಿಷತ್ ಪ್ರಧಾನ ಕಾರ್ಯದರ್ಶಿ ಶಶಿಧರ ರಾವ್ ಮತ್ತಿತರರು ಹಾಜರಿದ್ದರು.