ತಬಲಾ ಕಲಾವಿದರು ಬಳಸುವ ಪೌಡರ ಸಿಲಿಕಾನ್ ರಹಿತವಾಗಿರಲಿ, ತಾವು ಅಭ್ಯಾಸಕ್ಕೆ ಕೂರುವ ವಿಧಾನ ಕ್ರಮಬದ್ಧವಾಗಿಟ್ಟುಕೊಂಡು, ಸಾಕಷ್ಟು ಯೋಗಾಭ್ಯಾಸ ಮಾಡುವ ಮೂಲಕ ತಮ್ಮ ಆರೋಗ್ಯದ ಜಾಗೃತಿವಹಿಸಬೇಕು.
ಧಾರವಾಡ:
ಮನುಷ್ಯನಿಗೆ ಸಂಗೀತ ಕಲಿಕೆ ಹಾಗೂ ಆಲಿಸುವಿಕೆ ಉತ್ತಮ ಔಷಧಿಯಂತೆ ಕಾರ್ಯನಿರ್ವಹಿಸುತ್ತದೆ ಎಂದು ಮಕ್ಕಳ ವೈದ್ಯ ಡಾ. ರಾಜನ್ ದೇಶಪಾಂಡೆ ಹೇಳಿದರು.ಚಿಲಿಪಿಲಿ ಸಂಗೀತ ಸಾಂಸ್ಕೃತಿಕ ಕಲಾ ಅಕಾಡೆಮಿಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಡಾ. ದ.ರಾ. ಬೇಂದ್ರೆ ಭವನದಲ್ಲಿ ಪಂ. ರವಿ ಕೂಡ್ಲಿಗಿಯವರ 11ನೇ ಪುಣ್ಯಸ್ಮರಣೆಯಲ್ಲಿ ಹಮ್ಮಿಕೊಂಡಿದ್ದ ಸಂಗೀತೋತ್ಸವ ಹಾಗೂ ‘ಪಂ. ರವಿ ಕೂಡ್ಲಿಗಿ ಪ್ರಶಸ್ತಿ’ ಪ್ರದಾನ ಉದ್ಘಾಟಿಸಿದ ಅವರು, ತಬಲಾ ಕಲಾವಿದರು ಬಳಸುವ ಪೌಡರ ಸಿಲಿಕಾನ್ ರಹಿತವಾಗಿರಲಿ, ತಾವು ಅಭ್ಯಾಸಕ್ಕೆ ಕೂರುವ ವಿಧಾನ ಕ್ರಮಬದ್ಧವಾಗಿಟ್ಟುಕೊಂಡು, ಸಾಕಷ್ಟು ಯೋಗಾಭ್ಯಾಸ ಮಾಡುವ ಮೂಲಕ ತಮ್ಮ ಆರೋಗ್ಯದ ಜಾಗೃತಿವಹಿಸಬೇಕು ಎಂದರು.
ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ನಾಡಿಗೆ ಕೀರ್ತಿ ತಂದ ಶ್ರೇಷ್ಠ ಕಲಾವಿದ ಪಂ. ರವಿ ಕೂಡ್ಲಿಗಿ ಅವರನ್ನು ಸಮಾಜ ಸದಾ ಸ್ಮರಿಸಿಕೊಳ್ಳಬೇಕು. ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಹಿರಿಯ ತಬಲಾ ವಿದ್ವಾಂಸರಾದ ಡಾ. ರಾಚಯ್ಯ ಹಿರೇಮಠ ಅವರಿಗೆ ನೀಡಿರುವುದು ಶ್ಲಾಘನೀಯ ಎಂದು ಹೇಳಿದರು.ಶಿಕ್ಷಣ ತಜ್ಞ ಮಲ್ಲಿಕಾರ್ಜುನ ಚಿಕ್ಕಮಠ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಮಹೇಶಗೌಡ ಸುಬೇದಾರ, ಶಂಕರ ಹಲಗತ್ತಿ ಮಾತನಾಡಿದರು. ಹಿರಿಯ ವಯೋಲಿನ್ ವಿದ್ವಾಂಸ ಪಂ. ಬಿ.ಎಸ್. ಮಠ, ಡಾ. ಜ್ಯೋತಿಲಕ್ಷ್ಮಿ ಕೂಡ್ಲಿಗಿ ಇದ್ದರು. ಸಂಗೀತ ವಿಷಯದಲ್ಲಿ ಪಿಎಚ್. ಡಿ ಪದವಿ ಪೂರೈಸಿದ ಡಾ. ಕೃಷ್ಣ ಸುತಾರ, ಡಾ. ಕವಿತಾ ಜಂಗಮಶಟ್ಟಿ, ಡಾ. ಅರ್ಚನಾ ಪತ್ತಾರ ಹಾಗೂ ರೂಪಾ ಕಡಗಾವಿ ಅವರನ್ನು ಸನ್ಮಾನಿಸಲಾಯಿತು.
ಡಾ. ಬಸವರಾಜ ಕಲೇಗಾರ ನಿರೂಪಿಸಿದರು. ಪ್ರಕಾಶ ಬಾಳಿಕಾಯಿ ಸ್ವಾಗತಿಸಿದರು. ಸ್ವರ ಸಂವಾದಿನಿ ಸಂಗೀತ ಶಾಲೆಯ ಮಕ್ಕಳು ಪ್ರಾರ್ಥಿಸಿದರು. ಡಾ. ಎ.ಎಲ್. ದೇಸಾಯಿ ವಂದಿಸಿದರು. ಸಂಗೀತೋತ್ಸವದಲ್ಲಿ ರವಿಕುಮಾರ ಆಳಂದ ಗಾಯನಕ್ಕೆ ಭೀಮಾಶಂಕರ ಬಿದನೂರು ತಬಲಾ, ಡಾ. ಪರಶುರಾಮ ಕಟ್ಟಿಸಂಗಾವಿ ಹಾರ್ಮೋನಿಯಂ ಸಹಕಾರ ನೀಡಿದರು. ನಂತರ ಪ್ರಶಸ್ತಿ ಪುರಸ್ಕೃತ ಡಾ. ರಾಚಯ್ಯ ಹಿರೇಮಠ ಅವರಿಂದ ತಬಲಾ ಸೋಲೋ ಜರುಗಿತು. ವಯೋಲಿನ್ ಲೇಹರಾವನ್ನು ಡಾ. ಗುರುಬಸವ ಮಹಾಮನೆ ಸಾಥ್ ಸಂಗತ ನೀಡಿದರು.