ವಾರದೊಳಗೆ ಪುತ್ತಿಲ ಬಿಜೆಪಿ ಸೇರ್ಪಡೆ ಘೋಷಣೆ ಸಂಭವ

| Published : Feb 09 2024, 01:46 AM IST / Updated: Feb 09 2024, 04:49 PM IST

News

ಸಾರಾಂಶ

ರಾಜ್ಯ ನಾಯಕರ ಸಮ್ಮುಖ ಬೆಂಗಳೂರಿನಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಸೇರ್ಪಡೆಗೆ ವೇದಿಕೆ ಸಜ್ಜಾಗುತ್ತಿದೆ. ಯಾವ ಜವಾಬ್ದಾರಿ ನೀಡುತ್ತಾರೆ ಎಂಬುದು ಖಚಿತವಾಗಿಲ್ಲವಾದರೂ ಬಹುತೇಕ ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಪುತ್ತೂರಿನ ಹಿಂದು ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಸೇರ್ಪಡೆಗೆ ವಿಧಿಸಿದ ಮೂರು ದಿನಗಳ ಗಡುವು ಗುರುವಾರಕ್ಕೆ ಮುಕ್ತಾಯವಾಗಿದೆ. ಮೂರು ದಿನಗಳಲ್ಲಿ ಸ್ಥಾನಮಾನ ನೀಡಿ ಬಿಜೆಪಿಗೆ ಸೇರ್ಪಡೆಗೊ‍ಳಿಸುವಂತೆ ಪುತ್ತೂರಿನಲ್ಲಿ ಸೋಮವಾರ ನಡೆದ ಪುತ್ತಿಲ ಪರಿವಾರದ ಸಮಾಲೋಚನಾ ಸಭೆಯಲ್ಲಿ ಗಡುವು ನೀಡಲಾಗಿತ್ತು. 

ಇದೇ ವೇಳೆ ಗುರುವಾರ ಮಂಗಳೂರಿನಲ್ಲಿ ಜಿಲ್ಲಾ ಬಿಜೆಪಿ ಮುಖಂಡರ ಮಹತ್ವದ ಸಭೆ ನಡೆದಿದ್ದು, ಅರುಣ್‌ ಕುಮಾರ್‌ ಪುತ್ತಿಲರನ್ನು ಪಕ್ಷಕ್ಕೆ ಸೇರ್ಪಡೆ ಮಾಡುವ ಹಾಗೂ ಜವಾಬ್ದಾರಿ ನೀಡುವ ಹೊಣೆಯನ್ನು ರಾಜ್ಯ ನಾಯಕರ ವಿವೇಚನೆಗೆ ಬಿಡಲಾಗಿದೆ. ಎಲ್ಲವೂ ಸರಿಹೋದರೆ ಒಂದು ವಾರದೊಳಗೆ ಪುತ್ತಿಲ ಬಿಜೆಪಿ ಸೇರ್ಪಡೆ ಘೋಷಣೆಯಾಗುವ ನಿರೀಕ್ಷೆ ಇದೆ.

ಪುತ್ತಿಲ ಪರಿವಾರದ ಸಮಾಲೋಚನಾ ಸಭೆಯಲ್ಲಿ ವಿಧಿಸಿದ ಗಡುವಿಗೆ ಬಿಜೆಪಿ ಹಾಗೂ ಸಂಘಪರಿವಾರ ಮುಖಂಡರು ಅಸಮಾಧಾನ ವ್ಯಕ್ತವಾಗಿತ್ತು. ಇದಕ್ಕೂ ಮೊದಲು ಪುತ್ತೂರಿನ ಬಿಜೆಪಿ ಮುಖಂಡರು ಬಹಿರಂಗ ಹೇಳಿಕೆ ನೀಡಿರುವುದಕ್ಕೂ ಬಿಜೆಪಿ ನಾಯಕರು ಸ್ಪಷ್ಟೀಕರಣ ಕೇಳಿದ್ದರು. 

ಪುತ್ತಿಲ ಪರಿವಾರ ಸಮಾಲೋಚನಾ ಸಭೆಯಲ್ಲಿ ಪುತ್ತೂರು ಮಂಡಲ ಬಿಜೆಪಿ ಅಧ್ಯಕ್ಷ ಸ್ಥಾನವನ್ನು ಪುತ್ತಿಲ ಬೇಡಿಕೆ ಇರಿಸಿದ್ದು, ಇದನ್ನು ಈಡೇರಿಸಿದರೆ ಬೇಷರತ್‌ವಾಗಿ ಬಿಜೆಪಿ ಸೇರ್ಪಡೆ ಬಗ್ಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಹೇಳಲಾಗಿದೆ. 

ಈ ಬಗ್ಗೆ ಪುತ್ತೂರು ಬಿಜೆಪಿಯ ಕೆಲವು ಮುಖಂಡರ ಅಸಮಾಧಾನವನ್ನು ಸರಿಪಡಿಸುವ ಕೆಲಸವನ್ನು ಜಿಲ್ಲಾ ಮಟ್ಟದ ಮುಖಂಡರು ಮಾಡಿದ್ದಾರೆ ಎಂದು ಹೇಳಲಾಗಿದೆ.

ವಾರದಲ್ಲಿ ಘೋಷಣೆ?: ಪುತ್ತಿಲ ಅವರನ್ನು ಪಕ್ಷಕ್ಕೆ ಬರಮಾಡಿ ಬಳಿಕ ಸ್ಥಾನಮಾನ ಘೋಷಿಸುವ ಸಂಭವ ಇದೆ. ಇಲ್ಲವೇ ಪಕ್ಷಕ್ಕೆ ಬರಮಾಡಿಕೊಂಡೇ ಸ್ಥಾನಮಾನ ಘೋಷಿಸಿದರೂ ಅಚ್ಚರಿ ಇಲ್ಲ.

ರಾಜ್ಯ ನಾಯಕರ ಸಮ್ಮುಖ ಬೆಂಗಳೂರಿನಲ್ಲಿ ಅರುಣ್‌ ಕುಮಾರ್‌ ಪುತ್ತಿಲ ಬಿಜೆಪಿ ಸೇರ್ಪಡೆಗೆ ವೇದಿಕೆ ಸಜ್ಜಾಗುತ್ತಿದೆ. ಯಾವ ಜವಾಬ್ದಾರಿ ನೀಡುತ್ತಾರೆ ಎಂಬುದು ಖಚಿತವಾಗಿಲ್ಲವಾದರೂ ಬಹುತೇಕ ಪುತ್ತೂರು ಮಂಡಲ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಹೆಚ್ಚಾಗಿದೆ. 

ತಪ್ಪಿದಲ್ಲಿ ಜಿಲ್ಲಾ ಮಟ್ಟದ ಇಲ್ಲವೇ ರಾಜ್ಯ ಮಟ್ಟದ ಹುದ್ದೆಯನ್ನು ನೀಡಿದರೂ ಅಚ್ಚರಿ ಇಲ್ಲ ಎನ್ನುತ್ತವೆ ಮೂಲ.ಮಂಗಳೂರಿನಲ್ಲಿ ಗುರುವಾರ ನಡೆದ ಸಭೆಯಲ್ಲಿ ಬಿಜೆಪಿ ಮುಖಂಡರಲ್ಲದೆ, ಪುತ್ತಿಲ ಪರಿವಾರದ ಪ್ರಮುಖರೂ ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.