ಟಿಬೇಟಿಯನ್ ಕಾಲನಿಗೆ ಅರುಣಾಚಲ ಪ್ರದೇಶ ಸಿಎಂ

| Published : Nov 16 2023, 01:16 AM IST

ಸಾರಾಂಶ

ಪೆಮಾ ಖಂಡು ಅವರು ಮುಂಡಗೋಡ ಮಾರ್ಗವಾಗಿ ಟೆಬೇಟಿಯನ್ ಕಾಲನಿಗೆ ತೆರಳುತ್ತಿದ್ದ ಹಿನ್ನಲೆ ಭದ್ರತೆ ದೃಷ್ಟಿಯಿಂದಾಗಿ ಭಾರಿ ದನ ಬೆದರಿಸುವ ಸ್ಪರ್ಧೆಯನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು.

ಮುಂಡಗೋಡ:

ಇಲ್ಲಿಯ ಟಿಬೇಟಿಯನ್ ಕಾಲನಿಗೆ ಆಗಮಿಸಿದ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಅವರನ್ನು ಇಲ್ಲಿಯ ಹಿರಿಯ ಬೌದ್ಧ ಸನ್ಯಾಸಿಗಳು ಹಾಗೂ ಟಿಬೇಟಿಯನ್ನರು ಸಂಪ್ರದಾಯ ಬದ್ಧವಾಗಿ ಅದ್ಧೂರಿಯಾಗಿ ಸ್ವಾಗತಿಸಿದರು.

ಇದಕ್ಕೂ ಮೊದಲು ತಾಲೂಕಿನ ಗಡಿ ಭಾಗ ವಡಗಟ್ಟಾದಲ್ಲಿ ಜಿಲ್ಲಾಡಳಿತದ ವತಿಯಿಂದ ಹೂಗುಚ್ಛ ನೀಡಿ ಅವರನ್ನು ಬರಮಾಡಿಕೊಳ್ಳಲಾಯಿತು. ಬಳಿಕ ಮುಂಡಗೋಡ ಮಾರ್ಗವಾಗಿ ಬಿಗಿ ಪೊಲೀಸ್‌ ಭದ್ರತೆಯೊಂದಿಗೆ ಟಿಬೇಟಿಯನ್ ಕಾಲನಿಗೆ ಅವರನ್ನು ಕರೆದೊಯ್ಯಲಾಯಿತು. ಟಿಬೇಟಿಯನ್ ಕಾಲನಿಯ ನಂ ೧ ಜಾಂಗ್ತ್ಸೆ ಮೊನೆಸ್ಟ್ರಿ(ಬೌದ್ಧ ಮಠಕ್ಕೆ) ಬಂದಿಳಿದ ಮುಖ್ಯಮಂತ್ರಿ ಪೆಮಾ ಖಂಡು ಬೌದ್ಧ ಮೂರ್ತಿಗಳಿಗೆ ನಮಸ್ಕರಿಸಿ ಪೂಜೆ ಸಲ್ಲಿಸಿದರು.

ಈ ವೇಳೆ ಟಿಬೇಟಿಯನ್ ಕಾಲನಿ ಚೇರಮನ್ ಡೋಲ್ಮಾ, ಶಿರಸಿ ಸಹಾಯಕ ಆಯುಕ್ತ ದೇವರಾಜ, ಮುಂಡಗೋಡ ತಹಸೀಲ್ದಾರ್‌ ಶಂಕರ ಗೌಡಿ, ಸಿಪಿಐ ಬರಮಪ್ಪ ಲೋಕಾಪುರ, ಟಿಬೇಟಿಯನ್ ಹಿರಿಯ ಸನ್ಯಾಸಿಗಳು ಉಪಸ್ಥಿತರಿದ್ದರು.

ಬಿಗಿ ಪೊಲೀಸ ಬಂದೋಬಸ್ತ್:ಇಬ್ಬರು ಡಿಎಸ್‌ಪಿ, ೮ ಜನ ಸಿಪಿಐ ೧೪ ಜನ ಪಿಎಸ್ಐ, ೨೭ ಜನ ಎಎಸ್ಐ, ೧೪೭ ಪೊಲೀಸ್‌ ಪೇದೆ, ೧೨ ಮಹಿಳಾ ಸಿಬ್ಬಂದಿ, ೧ ಕೆಎಸ್‌ಆರ್‌ಪಿ ಹಾಗೂ ೨ ಡಿಆರ್‌ಪಿ ತುಕಡಿಗಳನ್ನು ಬಂದೋಬಸ್ತ್ ಗೆ ನಿಯೋಜಿಸಲಾಗಿದೆ.ದನ ಬೆದರಿಸುವ ಸ್ಪರ್ಧೆ ಸ್ಥಗಿತ:ಪೆಮಾ ಖಂಡು ಅವರು ಮುಂಡಗೋಡ ಮಾರ್ಗವಾಗಿ ಟೆಬೇಟಿಯನ್ ಕಾಲನಿಗೆ ತೆರಳುತ್ತಿದ್ದ ಹಿನ್ನಲೆ ಭದ್ರತೆ ದೃಷ್ಟಿಯಿಂದಾಗಿ ಮುಂಡಗೋಡ ಪಟ್ಟಣದ ಹಳೂರ ಬಡಾವಣೆಯಲ್ಲಿ ನಡೆಯುತ್ತಿದ್ದ ಭಾರಿ ದನ ಬೆದರಿಸುವ ಸ್ಪರ್ಧೆಯನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಇದರಿಂದ ದನ ಬೆದರಿಸುವ ಸ್ಪರ್ಧೆ ವೀಕ್ಷಿಸಲು ಆಗಮಿಸಿದ್ದ ಜನರು ಸುಮಾರು ೨ ಗಂಟೆ ಕಾಯಬೇಕಾಯಿತು.