ಬಳ್ಳಾರಿ: ಇಲ್ಲಿನ ಬ್ಯಾಂಕ್ ಕಾಲನಿಯ ಅರುಣೋದಯ ಸುಗಂಧಿನಿ ಸ್ಕೂಲ್ ಆಫ್ ಎಜ್ಯುಕೇಷನ್ ಸಂಸ್ಥೆಯ ವಾರ್ಷಿಕೋತ್ಸವ ಸಮಾರಂಭ ಶಾಲೆ ಆವರಣದಲ್ಲಿ ಭಾನುವಾರ ಸಂಜೆ ನೂರಾರು ವಿದ್ಯಾರ್ಥಿಗಳು ಹಾಗೂ ಪೋಷಕರ ಸಂಭ್ರಮದ ನಡುವೆ ಅರ್ಥಪೂರ್ಣವಾಗಿ ಜರುಗಿತು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿಸಿದ್ದ ವೇಗದ ರುಬಿಕ್ಸ್ ಕ್ಯೂಬ್ ಪರಿಣತ ಹಾಗೂ ಗಿನ್ನಿಸ್ ದಾಖಲೆ ಮಾಡಿರುವ ಬೆಂಗಳೂರಿನ ವಿವೇಕ್ ಪ್ರಸಾದ್ ಮಾಡ ಅವರು ಗಣಿತದ ತಾರ್ಕಿಕ ಅರ್ಥೈಸುವಿಕೆಯ ಮಹತ್ವವನ್ನು ಪೋಷಕರಿಗೆ ವಿವರಿಸಿದರು. ಪ್ರಾಥಮಿಕ ಶಿಕ್ಷಣದ ಮಹತ್ವ ಹಾಗೂ ಪೋಷಕರ ಜವಾಬ್ದಾರಿಗಳು ಕುರಿತು ಇದೇ ವೇಳೆ ಮನವರಿಕೆ ಮಾಡಿದರು. ಬಳಿಕ ಎರಡು ನಿಮಿಷಗಳಲ್ಲಿ ಗಣಿತದ ಪಾಠಗಳನ್ನು ಹೇಗೆ ಸುಲಭವಾಗಿ ಕಲಿಸಬಹುದು ಎಂಬುದನ್ನು ಪ್ರಾಯೋಗಿಕವಾಗಿ ತೋರಿಸಿ, ಮಕ್ಕಳಿಗೆ ಒತ್ತಡವಿಲ್ಲದೆ ಮೂಲಭೂತ ಗಣಿತ ಕೌಶಲ್ಯಗಳನ್ನು ಬೆಳೆಸುವ ಹೊಸ ವಿಧಾನವನ್ನು ಪರಿಚಯಿಸಿದರು.ಬೆಂಗಳೂರಿನ ಅಥರ್ವ ಟೆಕ್ನೋಹಬ್‌ನ ಫೌಂಡರ್ ಅನಿತಾ ಮಿಕ್ಕಿಲಿನೇನಿ ಅವರು ಇಂಟರ್ನೆಟ್ ಬಳಕೆಯ ಸುರಕ್ಷತೆ, ಡಿಜಿಟಲ್ ಸುರಕ್ಷತೆ ಹಾಗೂ ಅಸಭ್ಯ ಜಾಲತಾಣಗಳಿಂದ ಮಕ್ಕಳನ್ನು ರಕ್ಷಿಸುವ ಬಗ್ಗೆ ಪೋಷಕರಿಗೆ ಮಾರ್ಗದರ್ಶನ ಮಾಡಿದರು.
ಕಾಂಗ್ರೆಸ್ ಯುವ ಮುಖಂಡ ವಿಷ್ಣುಬೋಯಪಾಟಿ ಅವರು ರಾಜ್ಯ ಭಾಷೆಯಾದ ಕನ್ನಡವನ್ನು ಪ್ರಾರಂಭಿಕ ಹಂತದಿಂದಲೇ ಪರಿಣಾಮಕಾರಿಯಾಗಿ ಕಲಿಸಬೇಕಾದ ಅಗತ್ಯತೆ ಕುರಿತು ಒತ್ತಿಹೇಳಿದರು. ಮಕ್ಕಳಿಗೆ ವೈದ್ಯರು, ಎಂಜಿನಿಯರ್‌ಗಳು ಅಥವಾ ಐಟಿ ವೃತ್ತಿಯಷ್ಟೇ ಅಲ್ಲದೆ, ಸರ್ಕಾರಿ ಸೇವೆಗಳು, ಆಡಳಿತಾತ್ಮಕ ಹುದ್ದೆಗಳು ಸೇರಿದಂತೆ ಗೌರವಾನ್ವಿತ ಸಾರ್ವಜನಿಕ ಕ್ಷೇತ್ರಗಳಲ್ಲಿ ಉತ್ತಮ ಭವಿಷ್ಯ ನಿರ್ಮಿಸಬಹುದು ಎಂದು ಹೇಳಿದರು.ಬಾಲ್ಯದಿಂದಲೇ ಮಕ್ಕಳಿಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸುವುದರಿಂದಾಗುವ ಪ್ರಯೋಜನಗಳ ಕುರಿತು ಸಮಾರಂಭದ ಅತಿಥಿಯಾಗಿ ಭಾಗವಹಿಸಿದ್ದ ಶ್ರೀನಿವಾಸಲು ನಾಯ್ಡು ಅವರು ತಿಳಿಸಿದರಲ್ಲದೆ, ಮಕ್ಕಳಲ್ಲಿ ಜೀವನ ಕೌಶಲ್ಯಗಳು ಹಾಗೂ ಬಹುಮಟ್ಟದ ಬುದ್ಧಿಮತ್ತೆ ಬೆಳವಣಿಗೆಗೆ ಪೋಷಕರು ಸಹಕರಿಸುವಂತಾಗಬೇಕು ಎಂದರು. ''''ಕನ್ನಡಪ್ರಭ'''' ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳು ಮಾತನಾಡಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಆರ್. ರವೀಂದ್ರ ಉಪಸ್ಥಿತರಿದ್ದರು.
ಪ್ರಾಸ್ತಾವಿಕ ಮಾತನಾಡಿದ ಅರುಣೋದಯ ಸುಗಂಧಿನಿ ಶಾಲೆಯ ಮುಖ್ಯಸ್ಥೆ ಹಾಗೂ ಸುಗಂಧಿನಿ ಪಬ್ಲಿಕೇಷನ್ಸ್ ಪ್ರೈ.ಲಿ.ನ ಸಂಸ್ಥಾಪಕಿ ಸುಗಂಧಿನಿ ನಾಯ್ಡು ಅವರು 2026–27ನೇ ಶೈಕ್ಷಣಿಕ ವರ್ಷದಿಂದ ಮೂರನೇ ತರಗತಿ ವರೆಗೆ ಪ್ರಾಥಮಿಕ ಶಾಲೆಯ ವಿಸ್ತರಣೆ ಮಾಡುವುದಾಗಿ ಘೋಷಿಸಿದರು. ಡಾ. ಸುಭಾಷಿಣಿ ಅವರು ಶಾಲೆಗೆ ನೀಡಿರುವ ಮೂಲಸೌಕರ್ಯ ಮತ್ತು ಸುಂದರ ವಾತಾವರಣದ ಬೆಂಬಲವನ್ನು ಸುಗಂಧಿನಿ ನಾಯ್ಡು ಅವರು ವಿಶೇಷವಾಗಿ ಸ್ಮರಿಸಿದರು. ''''ಕನ್ನಡಪ್ರಭ'''' ಹಾಗೂ ''''ಏಷ್ಯಾನೆಟ್ ಸುವರ್ಣ ನ್ಯೂಸ್'''' ಸಂಸ್ಥೆಗಳು ನಮ್ಮ ಶಾಲೆಯ ಶೈಕ್ಷಣಿಕ ಸೇವೆ ಹಾಗೂ ನಮ್ಮ ಪ್ರಕಾಶನದ ಶೈಕ್ಷಣಿಕ ಕೈಂಕರ್ಯವನ್ನು ಗುರುತಿಸಿ ಅಂತಾರಾಷ್ಟ್ರೀಯ ಮಟ್ಟದ ಗೌರವ ನೀಡಿ ಗೌರವಿಸಿರುವುದು ನನಗೆ ಹೆಚ್ಚಿನ ಪ್ರೇರಣೆ ತಂದಿದೆ ಎಂದು ಹೇಳಿದರು. ಶಾಲೆಯ ಶಿಕ್ಷಕರು, ಪೋಷಕರು ಹಾಗೂ ಬೋಧಕೇತರ ಸಿಬ್ಬಂದಿ ಪಾಲ್ಗೊಂಡಿದ್ದರು. ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.