ಸಾರಾಂಶ
ರಾಮನಗರ: ಮನುಷ್ಯನ ಕಣ್ಣಲ್ಲಿ ನೀರು ಬರಿಸುವಂತೆ ಮಾಡುವುದು ಮೃಗತ್ವ, ಮನುಷ್ಯನ ಕಣ್ಣಲ್ಲಿ ನೀರೇ ಬರಿಸದಿರುವುದು ದೈವತ್ವ, ಮತ್ತೊಬ್ಬರಲ್ಲಿ ಬಂದ ಕಣ್ಣೀರನ್ನು ಒರೆಸುವುದು ಮಾನವತ್ವ. ಆರ್ಯ ವೈಶ್ಯ ಸಮಾಜ ಮಾನತ್ವ ಗುಣಗಳನ್ನು ರೂಢಿಸಿಕೊಂಡು ಸಮಾಜ ಸೇವೆ ಮಾಡುತ್ತಿದೆ ಎಂದು ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಹೇಳಿದರು.
ವಾಸವಿ ಜಯಂತಿ ಅಂಗವಾಗಿ ನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ ನೆರೆದಿದ್ದ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮನುಷ್ಯರು ಮತ್ತು ಮಾನವತ್ವ ಬೇರೆಬೇರೆ. ಆರ್ಯ ವೈಶ್ಯರು ಕೇವಲ ಮನಷ್ಯರಲ್ಲ, ಮಾನವತ್ವ ಇರುವ ಸಮಾಜ ಎಂದರು.ಒಬ್ಬರು ಎಲ್ಲರಿಗೂ ಸಹಾಯ ಮಾಡುವುದು ಸಾಧ್ಯವಿಲ್ಲ. ಆದರೆ ಒಬ್ಬೊಬ್ಬರು ಇನ್ನೊಬ್ಬರಿಗೆ ಸಹಾಯ ಮಾಡಲು ಸಾಧ್ಯವಿದೆ. ಪ್ರತಿಫಲ ಅಪೇಕ್ಷಿಸದೆ ಮಾಡುವುದೇ ನಿಜವಾದ ಸಮಾಜ ಸೇವೆ ಎಂದು ಕರೆ ನೀಡಿದರು.
ಜೀವನದಲ್ಲಿ ಗಳಿಸುತ್ತೇವೆ. ಆದರೆ, ಇಹಲೋಕ ತ್ಯಜಿಸಿದಾಗ ಗಳಿಕೆಯನ್ನು ಇಟ್ಟು ಹೋಗಬೇಕು, ಇಲ್ಲವೇ ಕೊಟ್ಟು ಹೋಗಬೇಕು. ನಮ್ಮೊಡನೆ ತೆಗೆದುಕೊಂಡು ಹೋಗಲು ಸಾಧ್ಯವಿಲ್ಲ. ಇಂತಹ ಭ್ರಮೆ ಯಾರಿಗೂ ಬೇಡ ಎಂದು ಸಮಾಜ ಸೇವೆಗೆ ಎಲ್ಲರೂ ತೊಡಗಿಸಿಕೊಳ್ಳಬೇಕು. ದೇವರಲ್ಲಿ ನಂಬಿಕೆ ಇಡಬೇಕು, ಭಕ್ತಿ ಮತ್ತು ಭಯವೂ ಇರಬೇಕು. ದೇವರಲ್ಲಿ ಭಕ್ತಿ ಮತ್ತು ಭಯ ನಮಗೆ ಒಳ್ಳೆಯ ಕೆಲಸಗಳನ್ನು ಮಾಡಲು ಪ್ರೇರಣೆ ನೀಡುತ್ತವೆ ಎಂದು ಹೇಳಿದರು.ಮೊಬೈಲ್ ಫೋನುಗಳಿಂದ ಜೀವನದ ಮೇಲಾಗುತ್ತಿರುವ ಪರಿಣಾಮಗಳ ಬಗ್ಗೆ ಮಾತನಾಡಿದ ಡಾ.ಸಿ.ಎನ್.ಮಂಜುನಾಥ್, ದೇಶಕ್ಕೆ ಸ್ವಾತಂತ್ರ್ಯ ಲಭಿಸುವ ಮುನ್ನ ಮೊಬೈಲ್ ಫೋನುಗಳು ಅಸ್ತಿತ್ವದಲ್ಲಿ ಇರುತ್ತಿದ್ದರೆ ಬಹುಶಃ ಸ್ವಾತಂತ್ರ್ಯವೇ ಸಿಗುತ್ತಿರಲಿಲ್ಲವೇನೋ ಎಂದು ಹಾಸ್ಯದ ದಾಟಿಯಲ್ಲಿ ಮಾತನಾಡಿದರಾದರು, ಮೊಬೈಲ್ ಫೋನುಗಳಿಂದಾಗುತ್ತಿರುವ ಸಮಸ್ಯೆಗಳ ಬಗ್ಗೆ ಸೂಕ್ಷ್ಮವಾಗಿ ಎಚ್ಚರಿಸಿದರು.
ಜನರ ಹೃದಯಗಳನ್ನು ಗೆಲ್ಲಿರಿ, ಧ್ವೇಷ, ಅಸೂಯೆ, ಅನುಮಾನ, ಅಹಂಕಾರ ತ್ಯಜಿಸಿ, ಪ್ರೀತಿಯನ್ನು ಮತ್ತು ವಿಶ್ವಾಸವನ್ನು ಸಮಾಜಕ್ಕೆ ಹಂಚುವುದರ ಮೂಲಕ ಜೀವನದಲ್ಲಿ ಸಾರ್ಥಕತೆ ಕಾಣಿ ಎಂದು ಮಂಜುನಾಥ್ ಕರೆ ನೀಡಿದರು.ನಗರಸಭಾ ಸದಸ್ಯ ಕೆ.ಶೇಷಾದ್ರಿ (ಶಶಿ) ಮತ್ತಿತರರು ಹಾಜರಿದ್ದರು.
ಬಾಕ್ಸ್........ವಾಸವಿ ಜಯಂತಿ ಸಂಪನ್ನ
ರಾಮನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ಶನಿವಾರ ವಾಸವಿ ಜಯಂತಿ ಆಚರಣೆ ಸಂಪನ್ನವಾಯಿತು. ಕಳೆದ ನಾಲ್ಕು ದಿನಗಳಿಂದ ದೇವಾಲಯದಲ್ಲಿ ಇಡೀ ದಿನ ಧಾರ್ಮಿಕ ಕೈಂಕರ್ಯಗಳು ನೆರೆವೇರಿದವು. ವಿಶೇಷ ಅಲಂಕಾರಗಳು ಭಕ್ತರ ಗಮನ ಸೆಳೆಯಿತು. ಈ ಬಾರಿಯ ವಿಶೇಷ ಆಕರ್ಷಣೆಯಾಗಿ ರೇಷ್ಮೆ ನೂಲುಗಳಿಂದಲೇ ನಿರ್ಮಾಣವಾಗಿದ್ದ 13 ಅಡಿ ಎತ್ತರದ ವಾಸವಿ ಮಾತೆಯ ಪ್ರತಿರೂಪ ಮತ್ತು ಅಯೋಧ್ಯೆಯ ಬಾಲರಾಮನ ತದ್ರೂಪು ಪ್ರದರ್ಶನ ಭಕ್ತಾದಿಗಳ ಗಮನ ಸೆಳೆದವು. ಆರ್ಯ ವೈಶ್ಯ ಸಭಾ, ವಾಸವಿ ವಿದ್ಯಾನಿಕೇತನ ಟ್ರಸ್ಟ್, ವಾಸವಿ ಯೂತ್ಸ್ ಫೋರಂ, ವಾಸವಿ ಮಹಿಳಾ ಮಂಡಳಿ ಮತ್ತು ವಾಸವಿ ಭಜನಾ ಮಂಡಳಿಯ ಸದಸ್ಯರು ವಾಸವಿ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಿದ್ದರು.ಬಾಕ್ಸ್............
ಪ್ರಜ್ವಲ್ ಪ್ರಕರಣಕ್ಕೆ ಡಾ. ಮಂಜುನಾಥ್ ಬೇಸರರಾಮನಗರ: ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಪ್ರಕರಣದ ಸಂಬಂಧ ಜಯದೇವ ಹೃದ್ರೋಗ ಸಂಸ್ಥೆಯ ನಿವೃತ್ತ ನಿರ್ದೇಶಕ ಡಾ.ಸಿ.ಎನ್.ಮಂಜುನಾಥ್ ಬೇಸರ ಹೊರ ಹಾಕಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸಮಾಜದ ಆರೋಗ್ಯ ಕಾಪಾಡಿಕೊಳ್ಳಬೇಕು. ಕೇವಲ ದೈಹಿಕ ಆರೋಗ್ಯ ಕಾಪಾಡಿಕೊಂಡರೆ ಸಾಲದು. ಇದು ಪ್ರತಿಯೊಬ್ಬ ಪ್ರಜೆ, ಜನಪ್ರತಿನಿಧಿಗಳ ಜವಾಬ್ದಾರಿ. ಮುಂದಿನ ಪೀಳಿಗೆಗೆ ಆದರ್ಶವಾಗಿರಬೇಕು. ಅದು ನನ್ನ ಭಾವನೆ ಎಂದು ಹೇಳಿದರು.
18ಕೆಆರ್ ಎಂಎನ್ 6.ಜೆಪಿಜಿರಾಮನಗರದ ಎಂ.ಜಿ.ರಸ್ತೆಯಲ್ಲಿರುವ ಶ್ರೀ ಕನ್ಯಕಾಪರಮೇಶ್ವರಿ ಅಮ್ಮನವರ ದೇವಾಲಯದಲ್ಲಿ ವಾಸವಿ ಜಯಂತಿ ಅಂಗವಾಗಿ ನಡೆದ ಪೂಜಾ ಕಾರ್ಯದಲ್ಲಿ ಡಾ.ಸಿ.ಎನ್ .ಮಂಜುನಾಥ್ ಮತ್ತಿತರರು ಪಾಲ್ಗೊಂಡಿದ್ದರು.