ಸರಳ ವಿವಾಹವಾಗಿ ಮಂಡ್ಯದ ಸ್ವಾಭಿಮಾನ, ಗೌರವಕ್ಕೆ ಹೆಸರು ತಂದು ಕೊಟ್ಟಿದ್ದಾರೆ: ದೇವನೂರು ಮಹದೇವ

| Published : Mar 14 2024, 02:06 AM IST

ಸರಳ ವಿವಾಹವಾಗಿ ಮಂಡ್ಯದ ಸ್ವಾಭಿಮಾನ, ಗೌರವಕ್ಕೆ ಹೆಸರು ತಂದು ಕೊಟ್ಟಿದ್ದಾರೆ: ದೇವನೂರು ಮಹದೇವ
Share this Article
  • FB
  • TW
  • Linkdin
  • Email

ಸಾರಾಂಶ

ಸಮಾಜದಲ್ಲಿ ನಡೆಯುತ್ತಿರುವ ರೈತ ಆತ್ಮಹತ್ಯೆಗಳಲ್ಲಿ ಶೇ.62ರಷ್ಟು ಮಕ್ಕಳ ಮದುವೆಗಳಿಗೆ ಮಾಡಿದ ಸಾಲವನ್ನು ಕೃಷಿಯ ಲಾಭದಿಂದ ತೀರಿಸಲು ಸಾಧ್ಯವಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಡಂಬರದ ಮದುವೆಯಿಂದಾಗಿ ಸಾವಿರಾರು ಕುಟುಂಬಗಳು ಕತ್ತಲಿಗೆ ಮುಳುಗುತ್ತಿವೆ. ಹಾಗಾಗಿ ಸರಳ ಮದುವೆ ಕಡೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಇದರಿಂದ ಹೆಣ್ಣುಭ್ರೂಹತ್ಯೆಗಳು ನಿಲ್ಲುತ್ತವೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಸರಳ ವಿವಾಹವಾಗುವ ಮೂಲಕ ನೂತನ ವಧು- ವರರು ಮಂಡ್ಯದ ಸ್ವಾಭಿಮಾನ ಹಾಗೂ ಗೌರವಕ್ಕೆ ಹೆಸರು ತಂದು ಕೊಟ್ಟಿದ್ದಾರೆ ಎಂದು ಹಿರಿಯ ಸಾಹಿತಿ ದೇವನೂರು ಮಹದೇವ ಹೇಳಿದರು.

ತಾಲೂಕಿನ ಬೇಬಿಬೆಟ್ಟದಲ್ಲಿ ನಡೆದ ಭಾರೀ ದನಗಳ ಜಾತ್ರೆ ಅಂಗವಾಗಿ ನಡೆದ ಉಚಿತ ಸರಳ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ವಧು- ವರರಿಗೆ ಆಶೀರ್ವದಿಸಿ, ಸರಳ ವಿವಾಹವಾಗುವ ಮೂಲಕ ಮಂಡ್ಯಕ್ಕೆ ಒಳ್ಳೆಯ ಹೆಸರು ತಂದು ಕೊಟ್ಟ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ. ಸರಳ ವಿವಾಹದಲ್ಲಿ ಮದುವೆಯಾದ ವಧು-ವರರು ತಮಗೆ ಹುಟ್ಟುವ ಮಕ್ಕಳಿಗೆ ಪುಟ್ಟಣ್ಣಯ್ಯ, ಪುಟ್ಟಣ್ಣಮ್ಮ ಎಂದು ಹೆಸರಿಡಿ ಎಂದು ಮನವಿ ಮಾಡಿದರು.

ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಸರಳ ವಿವಾಹ ಮಹೋತ್ಸವದಲ್ಲಿ ಭಾಗವಹಿಸಲು ಸಹಕಾರ ನೀಡಿದ ವಧು-ವರರ ತಂದೆ-ತಾಯಿಗಳಿಗೆ ಧನ್ಯವಾದ ಅರ್ಪಿಸುತ್ತೇನೆ. ನನ್ನ ತಂದೆ ಕೆ.ಎಸ್.ಪುಟ್ಟಣ್ಣಯ್ಯ ಅವರು ಸರಳ ವಿವಾಹಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರು ಎಂದರು.

ರೈತನಾಯಕಿ ನಂದಿನಿ ಜಯರಾಂ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ರೈತ ಆತ್ಮಹತ್ಯೆಗಳಲ್ಲಿ ಶೇ.62ರಷ್ಟು ಮಕ್ಕಳ ಮದುವೆಗಳಿಗೆ ಮಾಡಿದ ಸಾಲವನ್ನು ಕೃಷಿಯ ಲಾಭದಿಂದ ತೀರಿಸಲು ಸಾಧ್ಯವಾಗದೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆಡಂಬರದ ಮದುವೆಯಿಂದಾಗಿ ಸಾವಿರಾರು ಕುಟುಂಬಗಳು ಕತ್ತಲಿಗೆ ಮುಳುಗುತ್ತಿವೆ. ಹಾಗಾಗಿ ಸರಳ ಮದುವೆ ಕಡೆಗೆ ಹೆಚ್ಚಿನ ಆಧ್ಯತೆ ನೀಡಬೇಕು. ಇದರಿಂದ ಹೆಣ್ಣುಭ್ರೂಹತ್ಯೆಗಳು ನಿಲ್ಲುತ್ತವೆ ಎಂದರು.

ಘಳಿಗೆ, ಶಾಸ್ತ್ರ ನೋಡಿ ಮದುವೆ ಆಗದಿದ್ದರೆ ಸಂಸ್ಕಾರದ ಚನ್ನಾಗಿರೋದಿಲ್ಲ ಎಂಬ ಮೂಢನಂಬಿಕೆ ಬಿಡಬೇಕು. ಘಳಿಗೆ, ಶಾಸ್ತ್ರ ಏನು ನೋಡದೆ ಅಮಾವಾಸ್ಯೆ, ಆಷಾಢ, ರಾಹುಕಾಲ, ಸ್ಮಶಾನದಲ್ಲಿ ಮದುವೆ ಆಗಿರು ಸಾಕಷ್ಟು ಮಂದಿ ನಮ್ಮೊಡನಿದ್ದಾರೆ. ಅವರು ಸಂಸ್ಕಾರವನ್ನು ಸುಖ, ನೆಮ್ಮದಿ ನಡೆಸುತ್ತಿದ್ದಾರೆ. ಸಂಸ್ಕಾರದಲ್ಲಿ ಕಷ್ಟ ಬೆಟ್ಟದಷ್ಟು ಸುಖ ಮುಷ್ಠಿಯಷ್ಟು ಎಂಬಂತೆ ಕೆಲಸ ಮಾಡಬೇಕು, ತ್ಯಾಗ, ಪ್ರೀತಿಯಿಂದ ಸಂಸ್ಕಾರ ಕಾಲಚಕ್ರವನ್ನು ಮುನ್ನಡೆಸಬೇಕು ಎಂದರು.

ಶ್ರೀರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ ಮಾತನಾಡಿ, ಬೇಬಿಬೆಟ್ಟದ ಸರಳ ವಿವಾಹ ಮಹೋತ್ಸವದಲ್ಲಿ ಸಾವಿರಾರು ಮಂದಿ ವದು-ವರರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಸಹ ತಮ್ಮ ಮಗಳು ಹಾಗೂ ಅಣ್ಣನ ಮಗನನ್ನು ಇದೇ ಸರಳ ವಿವಾಹದಲ್ಲಿ ಮದುವೆ ಮಾಡಿಕೊಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಬಣ್ಣಿಸಿದರು.

ಸುನೀತ ಪುಟ್ಟಣ್ಣಯ್ಯ ಮಾತನಾಡಿ, ಸರಳ ಮದುವೆ ನಶಿಸಿ ಹೋಗುತ್ತಿವೆ. ಆಡಂಬರದ ಮದುವೆ ಕಡೆ ಮುಂದಾಗುತ್ತಿದ್ದಾರೆ. ಕೆ.ಎಸ್.ಪುಟ್ಟಣ್ಣಯ್ಯ ಅವರು ಸರಳ ವಿವಾಹಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಆದರೀಗ ಸರಳ ವಿವಾಹ ಬೇಬಿಬೆಟ್ಟರೆ ಉಳಿದೆಡೆ ಕಣ್ಮರೆಯಾಗಿಬಿಡುತ್ತಿವೆ ಎಂದು ವಿಷಾಧಿಸಿದರು.

ಸಮಾರಂಭದಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಜೋಗಿಗೌಡ, ಪಿ.ನಾಗರಾಜು, ಕೆ.ಟಿ.ಗೋವಿಂದೇಗೌಡ, ಸ್ಮಿತಪುಟ್ಟಣ್ಣಯ್ಯ, ಯುವಮುಖಂಡ ಎಸ್‌ಎಸ್‌ಎಸ್ ಸತೀಶ್ ಶಿಂಡಭೋಗನಹಳ್ಳಿ, ಮಂಜುನಾಥ್, ಕೆ.ಎಸ್.ದಯಾನಂದ್, ಡಾ.ಬೋರೇಗೌಡಚಿಕ್ಕಮರಳಿ, ಆರ್.ಎ.ನಾಗಣ್ಣ, ಎಚ್.ಎಲ್.ಪ್ರಕಾಶ್, ತಹಸೀಲ್ದಾರ್ ಶ್ರೇಯಸ್, ಇಓ ಲೋಕೇಶ್ ಮೂರ್ತಿ ಸೇರಿದಂತೆ ಹಲವರು ಹಾಜರಿದ್ದರು.