ಸಾರಾಂಶ
ರಾಣಿಬೆನ್ನೂರು: ತಾಲೂಕಿನ ಸುಕ್ಷೇತ್ರ ದೇವರಗುಡ್ಡದ ಶ್ರೀ ಮಾಲತೇಶಸ್ವಾಮಿ ಸನ್ನಿಧಿಯಲ್ಲಿ ಶುಕ್ರವಾರ ಮಹಾನವಮಿಯಂದು ಸಂಜೆ 6ಕ್ಕೆ ಜರುಗಿದ ಕಾರ್ಣಿಕೋತ್ಸವದಲ್ಲಿ `ಆಕಾಶದತ್ತ ಚಿಗರಿತಲೇ, ಬೇರು ಮುದ್ದಾತಲೇ ಪರಾಕ್' ಎಂದು ಕಾರಣಿಕವಾಗಿದೆ.
ಗೊರವಯ್ಯ ನಾಗಪ್ಪಜ್ಜ ಅವರು ನುಡಿದಿರುವ ಪ್ರಸಕ್ತ ವರ್ಷದ ಭವಿಷ್ಯವಾಣಿಯನ್ನು ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ಟ ಗುರೂಜಿ ವಿಶ್ಲೇಷಣೆ ಮಾಡಿದ್ದು ಅವರ ಪ್ರಕಾರ, ಈ ವರ್ಷ ಉತ್ತಮ ಮಳೆ, ಬೆಳೆಯಾಗಿ ರೈತರಿಗೆ ಒಳ್ಳೆಯ ಬೆಳೆ ಸಿಗುತ್ತದೆ. ಇನ್ನು ರಾಜಕೀಯವಾಗಿ ನೋಡುವುದಾದರೆ, ಈಗಿರುವ ನಾಯಕತ್ವ ಆಕಾದೆತ್ತರಕ್ಕೆ ಬೆಳೆದುಬಿಟ್ಟಿದೆ. ಕಾನೂನು ವ್ಯವಸ್ಥೆಯಲ್ಲಿ ಏನೇ ಬದಲಾವಣೆಯಾದರೂ ಕೂಡ ಈಗಿರುವ ನಾಯಕತ್ವ ಹೇಳಿದಂತೆ ಅವರು ಒಪ್ಪಿಕೊಳ್ಳುತ್ತಾರೆ ಎಂದು ಪರೋಕ್ಷವಾಗಿ ರಾಜ್ಯ ರಾಜಕೀಯದ ಕುರಿತು ವಿಶ್ಲೇಷಿಸಿದರು.
ಹರಿದು ಬಂದ ಜನಸಾಗರ:ದೇವರಗುಡ್ಡದ ಗೊರವಯ್ಯ ಅವರು ನುಡಿಯುವ ಕಾರ್ಣಿಕದ ಮೇಲೆ ಜನರಿಗೆ ಮೊದಲಿಂದಲೂ ಅಪಾರ ನಂಬಿಕೆಯಿದೆ. ರಾಜ್ಯದ ಮೂಲೆ ಮೂಲೆಯಿಂದ ಸಹಸ್ರಾರು ಸಂಖ್ಯೆಯ ಜನಸಾಗರ ಹರಿದುಬಂದಿತ್ತು. ಪ್ರತಿ ವರ್ಷ ಆಯುಧ ಪೂಜೆಯ ದಿನ ದೇವರಗುಡ್ಡದ ಕಾರ್ಣಿಕೋತ್ಸವ ನಡೆಯುತ್ತದೆ. ಮೈಲಾರದ ಕಾರ್ಣಿಕ ''ಮುಂಗಾರು ಮಳೆಯ ಭವಿಷ್ಯವಾಣಿ''''ಎಂದು ನಂಬಿದರೆ. ದೇವರಗುಡ್ಡದ ಕಾರ್ಣಿಕೋತ್ಸವವನ್ನು ''''ಹಿಂಗಾರಿನ ಭವಿಷ್ಯವಾಣಿ'''' ಎಂದು ನಂಬಲಾಗುತ್ತದೆ.