ಜ್ಞಾನ ಹೆಚ್ಚಾದಂತೆ ಜಾತೀಯತೆ ಹೆಚ್ಚಳ

| Published : Nov 03 2025, 02:45 AM IST

ಸಾರಾಂಶ

ಎಲ್ಲ ರಂಗಗಳಲ್ಲಿಯೂ ಮುಂದುವರಿಯುತ್ತಿರುವ ಭಾರತ ಜ್ಞಾನ-ವಿಜ್ಞಾನದೊಂದಿಗೆ ಸಾಮಾಜಿಕವಾಗಿಯೂ ಮುಂದುವರಿಯಬೇಕಾಗಿತ್ತು. ಆದರೆ, ಸಮಾಜಕ್ಕೆ ಬೇಡವಾದ ಅಮಾನವೀಯ ಸಂಗತಿಗಳನ್ನು ತನ್ನೊಳಗಿಟ್ಟುಕೊಂಡು ಪೋಷಿಸುತ್ತಿರುವುದು ಬೇಸರದ ಸಂಗತಿ.

ಧಾರವಾಡ:

ಜ್ಞಾನ-ವಿಜ್ಞಾನ-ತಂತ್ರಜ್ಞಾನ ಹೆಚ್ಚಾದಂತೆ ಜಾತೀಯತೆ, ಅತಿಯಾದ ಧಾರ್ಮಿಕತೆ, ಸ್ವಾರ್ಥ ಹೆಚ್ಚಾಗುತ್ತಿರುವುದು ನೋವಿನ ಸಂಗತಿ ಎಂದು ಮಾಜಿ ಸಹಕಾರ ಸಚಿವ ಎಸ್.ಎಸ್. ಪಾಟೀಲ ವಿಷಾದಿಸಿದರು.

ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗಣಕರಂಗ ಮತ್ತು ವಚನಮಂದಾರ ಸಾಹಿತ್ಯ ಫೌಂಡೇಶನ್‌ ಆಯೋಜಿಸಿದ್ದ ಬುದ್ಧ-ಬಸವ-ಬಾಬಾಸಾಹೇಬರು ತ್ರಿಬಿ ಲೇಖನಗಳ ಸಂಕಲನ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಲ್ಲ ರಂಗಗಳಲ್ಲಿಯೂ ಮುಂದುವರಿಯುತ್ತಿರುವ ಭಾರತ ಜ್ಞಾನ-ವಿಜ್ಞಾನದೊಂದಿಗೆ ಸಾಮಾಜಿಕವಾಗಿಯೂ ಮುಂದುವರಿಯಬೇಕಾಗಿತ್ತು. ಆದರೆ, ಸಮಾಜಕ್ಕೆ ಬೇಡವಾದ ಅಮಾನವೀಯ ಸಂಗತಿಗಳನ್ನು ತನ್ನೊಳಗಿಟ್ಟುಕೊಂಡು ಪೋಷಿಸುತ್ತಿರುವುದು ಬೇಸರದ ಸಂಗತಿ. ಸಾಮಾಜಿಕ ಅನಿಷ್ಠಗಳ ವಿರುದ್ಧ ಬುದ್ಧ-ಬಸವ-ಬಾಬಾಸಾಹೇಬರು ಆಯಾ ಕಾಲಘಟ್ಟದಲ್ಲಿ ಜಾಗೃತಿ ಮೂಡಿಸಿರುವುದನ್ನು ಇಂಥ ಕೃತಿಗಳ ಮೂಲಕ ಮರು ನೆನಪಿಸಿಕೊಳ್ಳಬೇಕಾಗಿದೆ ಎಂದು ವಿವರಿಸಿದರು.

ಕೃತಿ ಬಿಡುಗಡೆಗೊಳಿಸಿದ ವಚನಮಂದಾರ ಸಾಹಿತ್ಯ ಫೌಂಡೇಶನ್‌ ಅಧ್ಯಕ್ಷ ಡಾ. ವಿಜಯಕುಮಾರ ಕಮ್ಮಾರ, ಕೆಲವೊಂದು ಹಿತಾಸಕ್ತಿಗಳು ಇಂದಿನ ಸಮಾಜವನ್ನು ವ್ಯವಸ್ಥಿತವಾಗಿ ಎಲ್ಲ ರೀತಿಯಿಂದ ಕಲುಷಿತಗೊಳಿಸುತ್ತಿವೆ. ಅದಕ್ಕೆ ಪ್ರತಿರೋಧಕ ಶಕ್ತಿಯ ಚುಚ್ಚುಮದ್ದುಗಳಂತೆ ಬುದ್ಧ-ಬಸವ-ಬಾಬಾಸಾಹೇಬರ ಚಿಂತನೆ ಬಳಸಿಕೊಂಡು ಸಮಾಜದಲ್ಲಿ ಸಾಮರಸ್ಯ ಮೂಡಿಸುವುದು ಅವಶ್ಯಕ. ಅದಕ್ಕೆ ಪೂರಕವಾಗಿ ಗಣಕರಂಗ ಪ್ರಕಾಶನದ ಈ ಕೃತಿಯು ಸ್ಪಂದಿಸುತ್ತದೆ ಎಂದರು.

ಸಾಹಿತಿ ಸುನೀತಾ ಮೂರಶಿಳ್ಳಿ ಕೃತಿ ಪರಿಚಯಿಸಿದರು. ಕೃತಿಯ ಸಂಪಾದಕ ಸಿದ್ಧರಾಮ ಹಿಪ್ಪರಗಿ ಪ್ರಾಸ್ತಾವಿಕ ಮಾತನಾಡಿದರು. ಪ್ರೊ. ಶಶಿಧರ ತೋಡಕರ್‌, ಡಾ. ಸದಾಶಿವ ಮಿರ್ಜಿ ಇದ್ದರು. ಡಾ. ಮೃತ್ಯುಂಜಯ ಶೆಟ್ಟರ್‌ ವಚನ ಗಾಯನ ಪ್ರಸ್ತುತಪಡಿಸಿದರು. ಡಾ. ಪ್ರಕಾಶ ಮಲ್ಲಿಗವಾಡ ಪ್ರಾರ್ಥಿಸಿದರು. ಡಾ. ಪುಷ್ಪಾವತಿ ಶಲವಡಿಮಠ ನಿರೂಪಿಸಿದರು. ನಂತರ ಸ್ಪರ್ಧಾ ವಿಜೇತರಿಗೆ ಬಹುಮಾನ, ಪ್ರಮಾಣಪತ್ರ ವಿತರಿಸಲಾಯಿತು.