ಜಿಪಂ ಸಿಇಒ ಗಿಟ್ಟೆ ಮಾಧವ್ ವಿಠ್ಠಲರಾವ್ ಅವರ ಬೆಳಗಿನ ನಡೆ ಗ್ರಾಮಗಳ ಕಡೆ ಅಭಿಯಾನದ ಅಂಗವಾಗಿ ಮಂಗಳವಾರ ಭಾಲ್ಕಿ ತಾಲ್ಲೂಕಿನ ಹಲಬರ್ಗಾ, ಭಾತಂಬ್ರಾ, ಕೆರೂರ ಮತ್ತು ಮಳಚಾಪೂರ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಜಿಪಂ ಸಿಇಒ ಗಿಟ್ಟೆ ಮಾಧವ್ ವಿಠ್ಠಲರಾವ್ ಅವರ ಬೆಳಗಿನ ನಡೆ ಗ್ರಾಮಗಳ ಕಡೆ ಅಭಿಯಾನದ ಅಂಗವಾಗಿ ಮಂಗಳವಾರ ಭಾಲ್ಕಿ ತಾಲ್ಲೂಕಿನ ಹಲಬರ್ಗಾ, ಭಾತಂಬ್ರಾ, ಕೆರೂರ ಮತ್ತು ಮಳಚಾಪೂರ ಗ್ರಾಮ ಪಂಚಾಯತ್‌ಗಳಿಗೆ ಭೇಟಿ ನೀಡಿ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಸೌಕರ್ಯಗಳನ್ನು ಪರಿಶೀಲಿಸಿದರು.

ಹಲಬರ್ಗಾ ಗ್ರಾಮಕ್ಕೆ ಭೇಟಿ ನೀಡಿದ ಸಿಇಒ ಅವರು, ಸುಸಜ್ಜಿತವಾಗಿರುವ ಗ್ರಾಮದ ಬಸ್ ನಿಲ್ದಾಣವನ್ನು ಪರಿಶೀಲಿಸಿ ನಿಲ್ದಾಣವನ್ನು ಸಂಪೂರ್ಣವಾಗಿ ಸ್ವಚ್ಛ ಗೊಳಿಸಿ, ಆಕರ್ಷಕವಾಗಿ ಬಣ್ಣ ಹಚ್ಚಿ, ಇಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವಿನೂತನ ಅಭಿಯಾನವಾದ ‘ಪುಸ್ತಕ ಗೂಡು’ (ಗ್ರಂಥಾಲಯ) ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಗ್ರಾಮೀಣ ಪ್ರದೇಶದ ಜನರಲ್ಲಿ, ವಿದ್ಯಾರ್ಥಿಗಳಲ್ಲಿ ಹಾಗೂ ಪ್ರಯಾಣಿಕರಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಬಸ್ಸಿ ಗಾಗಿ ಕಾಯುವ ಸಾರ್ವಜನಿಕರು ಸುಮ್ಮನೆ ಸಮಯ ವ್ಯರ್ಥ ಮಾಡುವ ಬದಲು, ಇಲ್ಲಿ ಲಭ್ಯವಿರುವ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಲು ಇದು ಅತ್ಯಂತ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಆರೋಗ್ಯ ಕೇಂದ್ರ, ಶಾಲೆ, ಅಂಗನವಾಡಿ ಪರಿಶೀಲನೆ:

ಗ್ರಾಮ ಸಂಚಾರದ ವೇಳೆ ಹಲಬರ್ಗಾ ಗ್ರಾಮದ ಅಂಗನವಾಡಿ ಕೇಂದ್ರ, ನಿರ್ಮಾಣ ಹಂತದಲ್ಲಿರುವ ಸರ್ಕಾರಿ ಶಾಲಾ ಕಟ್ಟಡ ಹಾಗೂ ಸ್ಥಳೀಯ ಗ್ರಂಥಾಲಯಕ್ಕೆ ಭೇಟಿ ನೀಡಿ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದರು. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಎಚ್‌ಸಿ) ಭೇಟಿ ನೀಡಿ, ಅಲ್ಲಿನ ಔಷಧಿ ದಾಸ್ತಾನು ಕೋಣೆಯನ್ನು ಪರಿಶೀಲಿಸಿ ದಾಸ್ತಾನಿರುವ ಔಷಧಿಗಳ ಮುಕ್ತಾಯ ದಿನಾಂಕವನ್ನು ಖುದ್ದಾಗಿ ಪರಿಶೀಲಿಸಿದ ಅವರು, ಆಯಾ ಔಷಧಿಗಳ ಹೆಸರುಗಳನ್ನು ಸ್ಪಷ್ಟವಾಗಿ ಬರೆದು, ಶಿಸ್ತು ಬದ್ಧವಾಗಿ ನಿರ್ವಹಣೆ ಮಾಡಬೇಕು. ರೋಗಿಗಳಿಗೆ ಗುಣಮಟ್ಟದ ಸೇವೆ ಸಿಗುವಂತಾಗಬೇಕು ಎಂದು ಆರೋಗ್ಯ ಸಿಬ್ಬಂದಿಗೆ ಕಟ್ಟುನಿಟ್ಟಿನ ಮಾರ್ಗದರ್ಶನ ನೀಡಿದರು.

ಐಎಎಸ್ ಪ್ರೊಬೇಷನರಿ ಅಧಿಕಾರಿಗಳಿಗೆ ಕ್ಷೇತ್ರ ಭೇಟಿ ತರಬೇತಿ:

ಭಾತಂಬ್ರಾ ಗ್ರಾಮ ಪಂಚಾಯತ್‌ಗೆ ಭೇಟಿ ನೀಡಿದ ಸಿಇಒ ಅವರು, ಪ್ರೊಬೇಷನರಿ ಐಎಎಸ್ ಅಧಿಕಾರಿಗಳ ತಂಡದೊಂದಿಗೆ ಗ್ರಾಮ ಸಂಚಾರ ಕೈಗೊಂಡರು. ಭವಿಷ್ಯದ ಆಡಳಿತಾಧಿಕಾರಿಗಳಿಗೆ ತಳಮಟ್ಟದ ಆಡಳಿತ ವ್ಯವಸ್ಥೆಯ ಪರಿಚಯ ಮಾಡಿಕೊಡುವ ನಿಟ್ಟಿನಲ್ಲಿ, ಗ್ರಾಮದಲ್ಲಿರುವ ಸಮಸ್ಯೆಗಳು ಹಾಗೂ ವಿವಿಧ ವಿಷಯ ಗಳ ಕುರಿತು ಪ್ರಾಯೋಗಿಕವಾಗಿ ವಿಶ್ಲೇಷಿಸಿ, ಅತ್ಯಮೂಲ್ಯವಾದ ಕ್ಷೇತ್ರ ಭೇಟಿ ತರಬೇತಿ ನೀಡಿದರು.

ಮಳಚಾಪೂರ ಗ್ರಾಪಂ ವ್ಯಾಪ್ತಿಯ ಗ್ರಾಮದ ಹೊರವಲಯದಲ್ಲಿ ವಿವಿಧ (ನರೇಗಾ) ಯೋಜನೆಯಡಿ ನಡೆಯುತ್ತಿದ್ದ ಎಸ್‌ಎಂಸಿ ಸಮುದಾಯ ಕಾಮಗಾರಿ ಸ್ಥಳಕ್ಕೆ ಸಿಇಒ ಅವರು ಭೇಟಿ ನೀಡಿ ಕಾಮಗಾರಿಯಲ್ಲಿ ತೊಡಗಿದ್ದ ಕೂಲಿಕಾರರೊಂದಿಗೆ ಆತ್ಮೀಯವಾಗಿ ಸಂವಾದ ನಡೆಸಿ, ಅವರ ಸಮಸ್ಯೆಗಳು ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದು ಸ್ವತಃ ಶ್ರಮದಾನ ಮಾಡುವ ಮೂಲಕ ಕಾರ್ಮಿಕರಲ್ಲಿ ಉತ್ಸಾಹ ತುಂಬಿದರು.

ಈ ಸಂದರ್ಭದಲ್ಲಿ ತಾಪಂ ಅಧಿಕಾರಿ ಬೀರೇಂದ್ರ ಸಿಂಗ್ ಠಾಕೂರ್, ನೀರು ಸರಬರಾಜು ಇಲಾಖೆಯ ಅಧಿಕಾರಿಗಳು, ತಾಪಂ ಸಹಾಯಕ ನಿರ್ದೇಶಕ ಬಾಲಾಜಿ ಕೋಟೆ, ಜೆಇ ಬಸವರಾಜ ರುಮ್ಮಾ, ಪಿಡಿಒ ಬಲಭೀಮ ಮತ್ತು ವಿಶ್ವ ಶಾಲಾ, ತಾಂತ್ರಿಕ ಸಂಯೋಜಕ ಅಮರನಾಥ ಪಾಟೀಲ್, ಐಇಸಿ ಸಂಯೋಜಕ ಗಣಪತಿ ಹಾರಕೂಡೆ ಹಾಗೂ ಇತರರು ಇದ್ದರು.