ಚುನಾವಣೆ ಬಂದಾಗಷ್ಟೇ ಮೋದಿಗೆ ರಾಜ್ಯದ ನೆನಪಾಗತ್ತೆ: ಬಸವರಾಜ

| Published : Mar 21 2024, 01:08 AM IST

ಸಾರಾಂಶ

ನರೇಂದ್ರ ಮೋದಿಗೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಿವಿ ಹಿಂಡುವ ಕೆಲಸ ಮಾಡಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಹೇಳಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಅತಿವೃಷ್ಟಿ, ಅನಾವೃಷ್ಟಿ ಬಂದಾಗ ರಾಜ್ಯದತ್ತ ಕಾಲಿಡದ, ಬರ ಪರಿಹಾರ ಹಣ, ಜಿಎಸ್‌ಟಿ ಪಾಲಿನ ಹಣ ನೀಡದ ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೆ ಮತ ಕೇಳಲು ಮಾತ್ರ ತಪ್ಪದೇ ರಾಜ್ಯಕ್ಕೆ ಬರುತ್ತಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ವ್ಯಂಗ್ಯವಾಡಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದ ಸಂಕಷ್ಟದ ಸಂದರ್ಭದಲ್ಲಿ ಚಕಾರ ಎತ್ತದ, ಬರ ಮತ್ತು ಅತಿವೃಷ್ಟಿ ಸಂದರ್ಭದಲ್ಲಿ ರಾಜ್ಯಕ್ಕೆ ಕಿಂಚಿತ್ತೂ ಸ್ಪಂದಿಸದ ನರೇಂದ್ರ ಮೋದಿ ಇದೀಗ ಮತ್ತೆ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಪ್ರವಾಸ ಶುರು ಮಾಡಿದ್ದಾರೆ ಎಂದರು.

ರಾಜ್ಯಕ್ಕೆ ಸಂಕಷ್ಟ ಆವರಿಸಿದಾಗ ನರೇಂದ್ರ ಮೋದಿಗೆ ಕರ್ನಾಟಕ ಯಾವುದೇ ಕಾರಣಕ್ಕೂ ನೆನಪಿರುವುದೇ ಇಲ್ಲ. ಆದರೆ, ವಿಧಾನಸಭೆ, ಲೋಕಸಭೆ ಚುನಾವಣೆಗಳು ಬಂದಾಗ ಬಿಡುವು ಮಾಡಿಕೊಂಡು, ರಾಜ್ಯಕ್ಕೆ ಬರುತ್ತಾರೆ. ಇದನ್ನು ಪ್ರಜ್ಞಾವಂತ ಕನ್ನಡಿಗರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಹೇಳಿದರು.

ಇದೀಗ ಮೂರನೇ ಸಲ ಪ್ರಧಾನಿ ಆಗಬೇಕೆಂದು ಮೋದಿ ಹೇಳುತ್ತಿದ್ದಾರೆ. ಆದರೆ, ಸಾಧನೆ ಮಾತ್ರ ಶೂನ್ಯ. ದೇಶದಲ್ಲಿ ಕೋಮು ಭಾವನೆ ಕೆರಳಿಸುವುದೇ ಬಿಜೆಪಿ ಜಾಯಮಾನವಾಗಿದೆ. ಇಂತಹ ಅವಕಾಶವಾದಿ ಬಿಜೆಪಿಗೆ, ನರೇಂದ್ರ ಮೋದಿಗೆ ಲೋಕಸಭೆ ಚುನಾವಣೆಯಲ್ಲಿ ಮತದಾರರು ಕಿವಿ ಹಿಂಡುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆಂದು ಹೇಳುತ್ತಿದ್ದ ಬಿಜೆಪಿಯವರೇ ಈಗ ನಮ್ಮ ಪಕ್ಷದ ಗ್ಯಾರಂಟಿ ಟೈಟಲ್ ಕೃತಿಚೌರ್ಯ ಮಾಡಿದ್ದಾರೆ. ಸ್ವತಃ ನರೇಂದ್ರ ಮೋದಿ ನಮ್ಮ ಪಕ್ಷದ ಗ್ಯಾರಂಟಿ ಪದ ಕದ್ದಿದ್ದಾರೆ ಎಂದರು. ಇನ್ನು ಚುನಾವಣಾ ಬಾಂಡ್ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ದೇಶದ ಜನರ ಮುಂದೆ ನರೇಂದ್ರ ಮೋದಿ ಬೆತ್ತಲಾಗಿದ್ದಾರೆ. ರಾಜ್ಯದ 28ಕ್ಕೆ ಕನಿಷ್ಟ 20 ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವೇ ಗೆಲ್ಲಲಿದೆ. ಕಾಂಗ್ರೆಸ್ ನೇತೃತ್ವದ ಐಎನ್‌ಡಿಐಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಡಿ.ಬಸವರಾಜ ಭವಿಷ್ಯ ನುಡಿದರು.

ಪಕ್ಷದ ಮುಖಂಡರಾದ ಎಸ್.ಎಂ.ಜಯಪ್ರಕಾಶ, ಬಿ.ವಿನಾಯಕ, ಮಹಮ್ಮದ್ ಜಿಕ್ರಿಯಾ, ಡಿ.ಬಸವರಾಜ, ಎಂ.ಕೆ.ಲಿಯಾಖತ್ ಅಲಿ, ಡಿ.ಎಸ್.ಸುರೇಶ, ಮುಬಾರಕ್‌ ಇತರರಿದ್ದರು.