ನಾಗಮಂಗಲ:
ತಾಲೂಕಿನ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ಸಂಜೆ ನಡೆದ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಸ್ವಾಮೀಜಿ ಅವರ ಜ್ವಾಲಾಪೀಠಾರೋಹಣ ಮತ್ತು ಸಿದ್ಧಸಿಂಹಾಸನ ಪೂಜೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.ಭಾನುವಾರ ಬೆಳಗ್ಗೆ 6.30ಕ್ಕೆ ಶ್ರೀಕಾಲಭೈರವೇಶ್ವರಸ್ವಾಮಿಗೆ ಸುವರ್ಣ ಕವಚಾಲಂಕಾರ ಪೂಜೆ ಮತ್ತು ಶ್ರೀಗಂಗಾಧರೇಶ್ವರ ಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ ನೆರವೇರಿತು.
ಜ್ವಾಲಾಪೀಠಾರೋಹಣ:ಮಠದ ಪೀಠಾಧ್ಯಕ್ಷರು ಜಾತ್ರಾ ಸಮಯದಲ್ಲಿ ಜ್ವಾಲಾಪೀಠಾರೋಣ ಮಾಡುವುದು ಸಂಪ್ರದಾಯ. ಆದಿಚುಂಚನಗಿರಿ ಕ್ಷೇತ್ರದಲ್ಲಿ ಪರಶಿವನು ಬಂದು ತಪಸ್ಸು ಮಾಡಿದ ಸ್ಥಳವೇ ಜ್ವಾಲಾಪೀಠ ಎಂಬ ಉಲ್ಲೇಖವಿದೆ. ಅದರಂತೆ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಭಾನುವಾರ ರಾತ್ರಿ ಸರ್ವಾಲಂಕಾರಭೂಷಿತರಾಗಿ ಜ್ವಾಲಾಪೀಠಕ್ಕೆ ಪೂಜೆ ಸಲ್ಲಿಸಿ ಜ್ವಾಲಾಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು. ನೆರೆದಿದ್ದ ಭಕ್ತರು ಕೈಲಾಸದಲ್ಲಿ ಪರಶಿವನನ್ನೇ ದರ್ಶನ ಮಾಡಿದ ಪುಣ್ಯವೆಂದು ಭಾವಿಸಿ ಶ್ರೀಗಳ ಜ್ವಾಲಾಪೀಠಾರೋಹಣವನ್ನು ಕಣ್ತುಂಬಿಕೊಂಡರು.
ಸಿದ್ಧಸಿಂಹಾಸನರೂಢರಾದ ಆದಿಶ್ರೀ:
ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಿನ್ನದ ಕಿರೀಟದೊಂದಿಗೆ ಸರ್ವಾಲಂಕಾರಭೂಷಿತರಾಗಿದ್ದ ನಿರ್ಮಲಾನಂದನಾಥಶ್ರೀಗಳು ಶ್ರೀಮಠದ ಸಿದ್ಧ ಸಿಂಹಾಸನವನ್ನೇರಿ ಭಕ್ತರಿಗೆ ದರ್ಶನ ನೀಡುವುದಕ್ಕೂ ಮುನ್ನ, ಸಹಸ್ರಾರು ಭಕ್ತರನಡುವೆ ಶ್ರೀಮಠದ ವಟುಗಳ ವೇದ ಘೋಷಗಳ ಝೇಂಕಾರದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿ ಶ್ರೀ ಕಾಲಭೈರವೇಶ್ವರಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪೂಜೆ ಸಲ್ಲಿಸಿದ ನಂತರ ಸಿದ್ಧಸಿಂಹಾಸನರೂಢರಾಗಿ ದರ್ಶನ ನೀಡಿದರು.
ಈ ವೇಳೆ ಶ್ರೀಮಠದ ವೇದಪಂಡಿತರು, ವಟುಗಳು, ಷೋಡೋಶೋಪಚಾರ ಪೂಜೆ ಪುರಸ್ಕಾರ ನೆರವೇರಿಸಿದರು. ನಂತರ ಶ್ರೀಗಳು ಭಕ್ತರಿಗೆ ವಿಭೂತಿ ತಿಲಕವನ್ನಿಟ್ಟು ಹರಸಿ ಆಶೀರ್ವದಿಸಿದರು. ನಂತರ ಚಂದ್ರಮಂಡಲೋತ್ಸವ ಪೂಜೆ ನೆರವೇರಿತು.ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನಕಾರ್ಯದರ್ಶಿ ಪುರುಷೋತ್ತಮಾನಂದನಾಥಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥಸ್ವಾಮೀಜಿ, ಹಾಸನ ಶಾಖಾ ಮಠದ ಶಂಭೂನಾಥಸ್ವಾಮೀಜಿ, ಶ್ರೀಮಠದ ಚೈತನ್ಯನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಸಾಧು ಸಂತರು ಹಾಗೂ ಸಹಸ್ರಾರು ಮಂದಿ ಭಕ್ತರು ಇದ್ದರು.