ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಸಿಎಂ ಸಿದ್ದರಾಮಯ್ಯ ಘೋಷಿಸಿದ ಮಾಸಿಕ ಗೌರವಧನ, ಮಾಸಿಕ ೧೦,೦೦೦ ಮತ್ತು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ೧೦೦೦ ರು. ಹೆಚ್ಚಳ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಘಟಕ ಮತ್ತು ಆಲ್ ಇಂಡಿಯಾ ಯುನೈಡೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಯಿತು.ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾವಣೆಗೊಂಡ ಜಿಲ್ಲೆಯ ವಿವಿಧ ಕಡೆಗಳಿಂದ ಆಗಮಿಸಿದ್ದ ಆಶಾ ಕಾರ್ಯಕರ್ತೆಯರು ಸರ್ಕಾರ ವಿರುದ್ಧ ಘೋಷಣೆ ಕೂಗಿ ತಮ್ಮ ಆಕ್ರೋಶ ಹೊರಹಾಕಿದರು.
ಈ ಸಂದರ್ಭ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಉಪಾಧ್ಯಕ್ಷೆ ಎಂ.ಉಮಾದೇವಿ, ಸುಮಾರು ೧೫ ವರ್ಷಗಳಿಂದ ಅತ್ಯಂತ ಕನಿಷ್ಠ ಸಂಭಾವನೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನತೆಯ ಆರೋಗ್ಯ ಕಾಪಾಡಲು ಅತ್ಯಂತ ಕಾಳಜಿಯಿಂದ ಕಾರ್ಯಕರ್ತೆಯರು ದುಡಿಯುತ್ತಿದ್ದಾರೆ. ಕೋವಿಡ್ ಕಾಲದಲ್ಲಿ ಜೀವ ಪಣಕ್ಕಿಟ್ಟು ಕಾರ್ಯ ನಿರ್ವಹಿಸಿದ್ದಾರೆ. ಆದರೆ ಇಂದು ನಿಗದಿತ ಪ್ರೋತ್ಸಾಹಧನ ನ್ಯಾಯವಾಗಿ ಕೈ ಸೇರುತ್ತಿಲ್ಲ. ಇದರ ನಡುವೆ ಆಶಾಕಾರ್ಯಕರ್ತೆಯರನ್ನು ಜನಸಂಖ್ಯೆ, ಮೌಲ್ಯಮಾಪನ ಹೆಸರಿನಲ್ಲಿ ಕೆಲಸದಿಂದ ಕೈಬಿಡಲಾಗುವುದು ಎಂದು ಹೇಳಲಾಗುತ್ತಿದೆ. ಆಶಾ ಕಾರ್ಯಕರ್ತರನ್ನು ಹೆದರಿಸುವ ಸರ್ಕಾರದ ಪ್ರಯತ್ನ ಸಫಲವಾಗದು ಎಂದರು.ಈ ಹಿಂದೆ ರಾಜ್ಯ ಸರ್ಕಾರ ನಿಗದಿತ ವೇತನ ೧೦,೦೦೦ ವನ್ನು ನೀಡುತ್ತೇವೆ ಎಂದು ಭರವಸೆ ನೀಡಿ ೬ ತಿಂಗಳುಗಳೇ ಕಳೆದಿದೆ. ಆದರೂ ಈ ವರೆಗೆ ಯಾವುದೇ ಹಣ ಬಂದಿಲ್ಲ. ಆದೇಶ ಪತ್ರವೂ ಬರಲಿಲ್ಲ. ಇನ್ನಾದರೂ ಎಚ್ಚೆತ್ತುಕೊಂಡು ಸರ್ಕಾರ ನಿಗದಿತ ವೇತನವನ್ನು ನೀಡದಿದ್ದಲ್ಲಿ ಆ.೪, ೫, ೬ರಂದು ಜಿಲ್ಲಾಕೇಂದ್ರಗಳಲ್ಲಿ ಆಹೋರಾತ್ರಿ ಧರಣಿ ನಡೆಸಲಾಗುತ್ತಿದೆ ಎಂದು ಎಚ್ಚರಿಕೆ ನೀಡಿದರು.ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ತೆಕ್ಕಡೆ ಪೂರ್ಣಿಮ ಮಾತನಾಡಿ, ೧೬ ವರ್ಷಗಳಿಂದ ಬಡವರ ಸೇವೆ ಮಾಡುತ್ತಾ ಬರುತ್ತಿದ್ದೇವೆ. ಆದರೆ ಇತ್ತೀಚೆಗೆ ಎಲ್ಲಾ ಇಲಾಖೆಗಳ ಕೆಲಸಗಳನ್ನು ಕೂಡ ಮಾಡಿಸುತ್ತಿದ್ದಾರೆ. ಇಲ್ಲಿರುವವರು ಯಾರು ಶ್ರೀಮಂತರಲ್ಲ, ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶ. ಜೀವನಕ್ಕಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದು, ಸರ್ಕಾರ ಶೀಘ್ರದಲ್ಲಿ ನಿಗದಿತ ವೇತನವನ್ನು ನೀಡಬೇಕೆಂದು ಆಗ್ರಹಿಸಿದರು.ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಪತ್ರಿಭಟನಾ ನಿರತರು ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಪತ್ರಿಭಟನೆಯಲ್ಲಿ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷೆ ಐ.ಜಿ.ಶಾಂತಿ, ಜಿಲ್ಲಾ ಕಾರ್ಯದರ್ಶಿ ನಾಗಮಣಿ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ೨೦೦ಕ್ಕೂ ಅಧಿಕ ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.