ಗೌರವ ಧನ ಹೆಚ್ಚಳಕ್ಕೆ ಆಶಾಗಳ ಕಾರ್ಯಕರ್ತರ ಪಟ್ಟು

| Published : Mar 21 2025, 12:30 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025 ಏಪ್ರಿಲ್‌ನಿಂದ ಗೌರವಧನ ಸೇರಿಸಿ ಕನಿಷ್ಠ ₹ ೧೦೦೦೦ ಮಾಸಿಕ ಗೌರವ ಧನ ಮತ್ತು ಬಜೆಟ್‌ನಲ್ಲಿ ₹ ೧೦೦೦ ಹೆಚ್ಚಿಸುವುದಾಗಿ ಹೇಳಿದ್ದರು. ಆದರೆ, ತಮ್ಮ ಘೋಷಣೆ ಮರೆತಿದ್ದಾರೆ.

ಕೊಪ್ಪಳ:

ಆಶಾ ಕಾರ್ಯಕರ್ತರಿಗೆ ಮಾಸಿಕ ₹ 10000 ಹಾಗೂ ಬಜೆಟ್‌ನಲ್ಲಿ ಗೌರವಧನ ₹ 1000 ಹೆಚ್ಚಿಸುವ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪಿದ್ದಾರೆಂದು ಆರೋಪಿಸಿರುವ ಆಶಾ ಕಾರ್ಯಕರ್ತರು, ರಾಜ್ಯ ಆಶಾ ಕಾರ್ಯಕರ್ತೆಯರ ಸಂಯುಕ್ತ ಸಂಘ ಹಾಗೂ ಆಲ್ ಇಂಡಿಯಾ ಯುನಿಟೆಡ್ ಟ್ರೇಡ್ ಯುನಿಯನ್ ಸೆಂಟರ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025 ಏಪ್ರಿಲ್‌ನಿಂದ ಗೌರವಧನ ಸೇರಿಸಿ ಕನಿಷ್ಠ ₹ ೧೦೦೦೦ ಮಾಸಿಕ ಗೌರವ ಧನ ಮತ್ತು ಬಜೆಟ್‌ನಲ್ಲಿ ₹ ೧೦೦೦ ಹೆಚ್ಚಿಸುವುದಾಗಿ ಹೇಳಿದ್ದರು. ಆದರೆ, ತಮ್ಮ ಘೋಷಣೆ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯದ ೨.೫೦ ಲಕ್ಷ ಅಂಗನವಾಡಿ ಹಾಗೂ ಬಿಸಿಯೂಟ ಕಾರ್ಯಕರ್ತೆಯರಿಗೆ ₹ ೧೦೦೦ ಹೆಚ್ಚಿಸಿದಂತೆ, ೪೨೦೦೦ ಆಶಾ ಕಾರ್ಯಕರ್ತೆಯರಿಗೂ ₹ ೧೦೦೦ ಹೆಚ್ಚಿಸಬೇಕು. ಆರೋಗ್ಯ ಸಚಿವರ ಸಮ್ಮುಖದಲ್ಲಿ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ ನಮ್ಮ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಘೋಷಿಸಿದಂತೆ ಏಪ್ರಿಲ್‌ನಿಂದ ಪ್ರೋತ್ಸಾಹಧನ ಹಾಗೂ ಕನಿಷ್ಠ ವೇತನ ನೀಡಬೇಕು. ಕಾಂಪೋನೆಂಟ್‌ಗಳ ಹೆಚ್ಚುವರಿ ಕೆಲಸದ ಆಧಾರದ ಮೇಲೆ ಹೆಚ್ಚುವರಿ ಪ್ರೋತ್ಸಾಹ ಧನವನ್ನು ತಕ್ಷಣದಿಂದ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.

ಈ ವೇಳೆ ಆಲ್ ಇಂಡಿಯಾ ಯುನಿಟೆಡ್ ಟ್ರೇಡ್ ಯುನಿಯನ್ ಸೆಂಟರ್‌ ಜಿಲ್ಲಾಧ್ಯಕ್ಷ ಶರಣು ಗಡ್ಡಿ, ಕಾರ್ಯದರ್ಶಿ ಕೌಶಲ್ಯ ದೊಡ್ಡಗೌಡರ, ಆಶಾ ಜಿಲ್ಲಾ ಸಮಿತಿ ಮುಖಂಡರಾದ ಶೋಭಾ ಹೂಗಾರ, ಸುನೀತಾ ಆಚಾರ್, ಶಂಕ್ರಮ್ಮ, ರಜಿಯಾ ಬೇಗಂ, ದ್ರಾಕ್ಷಿಯಣಿ, ಶರಣಮ್ಮ, ತಿಪ್ಪಮ್ಮ, ಅನ್ನಪೂರ್ಣ, ಶಿವಮ್ಮ, ಸುಧಾ, ರೇಣುಕಾ ಬಂಗಾರಿ, ಸವಿತಾ, ಗೀತಾ, ರೇಖಾ, ಸಂಗೀತ, ಅನ್ನಪೂರ್ಣ, ಗಾಯತ್ರಿ ಸೇರಿದಂತೆ ಆಶಾ ಕಾರ್ಯಕರ್ತೆಯರಿದ್ದರು.