ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿವಿಧ ಬೇಡಿಕೆಗಳು ಈಡೇರಿಸಬೇಕೆಂದು ಆಗ್ರಹಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ ಬುಧವಾರ ಎರಡನೇ ದಿನಕ್ಕೆ ಕಾಲಿರಿಸಿದೆ. ಪ್ರತಿಭಟನೆಯು ಜಿಲ್ಲಾಧಿಕಾರಿ ಕಚೇರಿ ಮುಂದೆ ನಡೆದಿದ್ದು, ಪ್ರತಿಭಟನಾ ಸ್ಥಳಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.ಈ ವೇಳೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಭರವಸೆ ನೀಡಿದರು. ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯ ಕರ್ತೆಯರ ಸಂಘದ ರಾಜ್ಯ ಉಪಾಧ್ಯಕ್ಷ ಎಚ್.ಟಿ ಮಲ್ಲಿಕಾರ್ಜುನ ಮಾತನಾಡಿ, ಆಶಾ ಕಾರ್ಯಕರ್ತೆಯರಿಗೆ ₹10 ಸಾವಿರ ವೇತನ ಕೊಡುವ ಭರವಸೆ ಉಳಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಕೊಡುವ ಅಲ್ಪ-ಸ್ವಲ್ಪ ವೇತನಕ್ಕಾಗಿ ಪ್ರತಿ ಸಲ ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಬಂದಿದೆ. ಅವರನ್ನು ಕಡೆಗಣಿಸಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ 7 ತಿಂಗಳ ಹಿಂದೆ ತೀರ್ಮಾನಿಸಿ, ಘೋಷಿಸಿದ ಆದೇಶವನ್ನು ಕೂಡಲೇ ಜಾರಿಗೊಳಿಸಬೇಕು. ಆಶಾ ಕಾರ್ಯಕರ್ತೆಯರ ಸಮಸ್ಯೆಗಳನ್ನು ಬಗೆಹರಿಸಲು ಹಲವು ತಿಂಗಳೂ ಸಮಯ ಕೇಳುವ ಅಧಿಕಾರಿಗಳು, ಅವರ ವಿರುದ್ಧ ದಿನಕ್ಕೊಂದು ಆದೇಶ ಮಾಡುತ್ತಿದ್ದಾರೆ ಎಂದು ದೂರಿದರು.ಪೋರ್ಟಲ್ ಸಮಸ್ಯೆಯಿಂದ ಮಾಡಿರುವ ಕೆಲಸಗಳು ದಾಖಲಾಗದಿದ್ದರೂ, ಅದರ ಆಧಾರದ ಮೇಲೆ ಮೌಲ್ಯಮಾಪನ ಮಾಡುವುದು ಅವೈಜ್ಞಾನಿಕವಾಗಿದೆ. ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡುವಾಗ ಯಾವುದೇ ವಿದ್ಯಾರ್ಹತೆ ಕೇಳದ ಇಲಾಖೆ, ಈಗ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಎಂದು ವಿದ್ಯಾರ್ಹತೆ ಕೇಳುತ್ತಿರುವುದು ಸರಿಯಲ್ಲ. ಇಂತಹ ನೀತಿಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಹೋರಾಟ ಬೆಂಬಲಿಸಿ ಮಾತನಾಡಿದ ರೈತ ಪಕ್ಷದ ಮುತ್ತಪ್ಪ ಹಿರೇಕುಂಬಿ, ಆಶಾ ಕಾರ್ಯಕರ್ತೆಯರನ್ನು ಕೇವಲ 5 ಸಾವಿರಕ್ಕೆ ದುಡಿಸಿಕೊಳ್ಳುವ ಎಲ್ಲರೂ ಇವರನ್ನು ನಿರ್ಲಕ್ಷಿಸಿದ್ದಾರೆ. ದುಡಿಯುವ ಜನರ ವಿರೋಧಿಗಳಾಗಿದ್ದಾರೆ ಎಂದರು. ಜಿಲ್ಲಾ ನಾಯಕಿ ಅಂಜನಾ ಕುಂಬಾರ ಮಾತನಾಡಿ, ಸರ್ಕಾರ ಬೇಡಿಕೆ ಈಡೇರಿಸದೇ ಈಗ ಹೋರಾಟಕ್ಕೆ ಹೆದರಿ ಶಿಸ್ತುಕ್ರಮ ಕೈಗೊಳ್ಳುವ ಬೆದರಿಕೆ ಹಾಕುತ್ತಿದೆ. ಅದಕ್ಕೆ ಯಾರೂ ಅಂಜದೇ ಒಗ್ಗಟ್ಟಾಗಿ ಹೋರಾಟ ಮಾಡೋಣ. ಎಐಯುಟಿಯುಸಿ ಸಂಘಟನೆ ನಮಗೆ ಶಕ್ತಿ ತುಂಬಿದೆ ಎಂದು ಹೇಳಿದರು.ಎಐಯುಟಿಯುಸಿಗೆ ಸಂಯೋಜಿತ ಸಂಯುಕ್ತ ಕೆಬಿಜೆಎನ್ಎಲ್ ಆಲಮಟ್ಟಿ ಗಾರ್ಡನ್ ಡಿ.ಗ್ರೂಪ್ ನೌಕರರ ಸಂಘದ ಉಪಾಧ್ಯಕ್ಷ ದ್ಯಾಮಣ್ಣ ಬಿರಾದಾರ, ರಾಜ್ಯ ಬಹುಹಳ್ಳಿ ಕುಡಿಯುವ ನೀರು ಸರಬರಾಜು ನೌಕರರ ಸಂಘದ ಪದಾಧಿಕಾರಿಗಳು ಬೆಂಬಲಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾ ವೈದ್ಯಾಧಿಕಾರಿ ಡಾ. ಮಂಜುನಾಥ್, ಸರ್ಕಾರಕ್ಕೆ ನಿಮ್ಮ ಮನವಿಯಲ್ಲಿ ಕಳುಹಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.