ಹೊಸಪೇಟೆ: ಐದು ತಿಂಗಳ ಬಾಕಿ ಇನ್ಸೆಂಟಿವ್ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಎಐಯುಟಿಯುಸಿಗೆ ಸಂಯೋಜನೆಗೊಂಡ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ನಗರದ ಆರೋಗ್ಯಾಧಿಕಾರಿ ಕಚೇರಿ ಮುಂದೆ ಸೋಮವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಸಂಘದ ಜಿಲ್ಲಾ ಗೌರವ ಅಧ್ಯಕ್ಷ ಡಾ.ಪ್ರಮೋದ್ ಮಾತನಾಡಿ, ಒಂದು ತಿಂಗಳ ಹಿಂದೆ ಇದೇ ಸಮಸ್ಯೆ ಪರಿಹರಿಸಲು ರಾಜ್ಯಾದ್ಯಂತ ಹೋರಾಟ ನಡೆಸಲಾಗಿತ್ತು. ಅದರ ಫಲವಾಗಿ 20 ದಿನದ ಹಿಂದೆ ಎಲ್ಲ ಜಿಲ್ಲೆಗಳು ಸೇರಿ ₹260 ಕೋಟಿ ಇನ್ಸೆಂಟಿವ್ ಬಿಡುಗಡೆಯಾಗಿದೆ. ಇದರಲ್ಲಿ ವಿಜಯನಗರ ಜಿಲ್ಲೆಗೆ ₹5.6 ಕೋಟಿ ನಿಗದಿಯಾಗಿದೆ. ತಾಂತ್ರಿಕ ಸಮಸ್ಯೆಯ ಹೆಸರಲ್ಲಿ ಇಲ್ಲಿವರೆಗೂ ಆಶಾಗಳಿಗೆ ದುಡಿದ ಹಣ ಅವರ ಕೖೆ ತಲುಪಿಲ್ಲ. ಅನೇಕ ಸಮಸ್ಯೆಗಳಿಂದ ಪರದಾಡುತ್ತಿದ್ದಾರೆ ಎಂದರು.

ತಕ್ಷಣವೇ ಆಶಾಗಳಿಗೆ ಸಲ್ಲಬೇಕಾದ ಗೌರವಧನ, ಇನ್ಸೆಂಟಿವ್ ಬಿಡುಗಡೆ ಮಾಡಬೇಕು. ಮತ್ತಷ್ಟು ವಿಳಂಬವಾದದ್ದಲ್ಲಿ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಕೆ.ಎಸ್. ಮಾತನಾಡಿ, ಇತ್ತೀಚೆಗೆ 9 ಕಾಂಪೋನೆಂಟ್ ಗಳನ್ನು ಆಶಾ ಪೋರ್ಟಲ್ ನಲ್ಲಿ ನಿಷ್ಕ್ರಿಯಗೊಳಿಸಲಾಗಿದೆ. ಕೇಂದ್ರ ಸರ್ಕಾರ ಅನುಮೋದನೆ ನೀಡಿಲ್ಲ ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ ಈ ಕ್ರಮ ಕೖೆಗೊಂಡಿದೆ. ವಾರದ ಲಸಿಕಾ ಕಾರ್ಯಕ್ರಮ ಒಳಗೊಂಡಂತೆ ಸುಮಾರು 9 ಚಟುವಟಿಕೆಗಳಿಗೆ ಇನ್ಸೆಂಟಿವ್ ಹಣ ನೀಡಲಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಆಶಾಗಳು ಈ ಚಟುವಟಿಕೆಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. 9 ಕಾಂಪೋನೆಂಟ್ ಗಳಿಗೆ ಇನ್ಸೆಂಟಿವ್ ನೀಡುವ ಆದೇಶ ಬರುವವರೆಗೂ ಯಾವ ಆಶಾಗಳು ಈ ಚಟುವಟಿಕೆಗಳಲ್ಲಿ ತೊಡಗಬಾರದು ಎಂದು ಅವರು ಹೇಳಿದರು.

ಪ್ರತಿಭಟನೆಯಲ್ಲಿ ಮಂಗಳಾ, ಮಹೇಶ್ವರಿ, ಚೆನ್ನಮ್ಮ, ನಾಗಮ್ಮ, ಸ್ಫೂರ್ತಿ, ಗೌರಿ, ರುಕ್ಮಿಣಿ, ಲಕ್ಷ್ಮೀದೇವಿ ಭಾಗವಹಿಸಿದ್ದರು.


ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಶಂಕರ್ ನಾಯ್ಕ್‌ ಮನವಿ ಸ್ವೀಕರಿಸಿದರು.

ಹೊಸಪೇಟೆ ನಗರದ ಆರೋಗ್ಯಾಧಿಕಾರಿ ಕಚೇರಿ ಮುಂದೆ ಸೋಮವಾರ ವಿವಿಧ ಬೇಡಿಕೆಗಳಿಗಾಗಿ ಒತ್ತಾಯಿಸಿ ಆಶಾ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ ನಡೆಸಿದರು.