ವಿವಿಧ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

| Published : Aug 13 2025, 12:30 AM IST

ವಿವಿಧ ಬೇಡಿಕೆ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಸಿಕ ಗೌರವ ಧನ 10 ಸಾವಿರ ರು. ನಿಗದಿಪಡಿಸಲು ಆಗ್ರಹ

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಮಾಸಿಕ ಗೌರವ ಧನವನ್ನು 10 ಸಾವಿರ ರು. ನಿಗದಿಪಡಿಸಬೇಕು, ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು ಎಂಬ ಹಲವು ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ಚಿತ್ರದುರ್ಗದಲ್ಲಿ ಬ್ರಹತ್ ಪ್ರತಿಭಟನೆ ನಡೆಸಿ ಮೂರು ದಿನಗಳ ಅಹೋರಾತ್ರಿ ಧರಣಿ ಆರಂಭಿಸಲಾಯಿತು.

ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಿಂದ ಹೊರಟ ಮೆರವಣಿಗೆಗೆ ಎಐಯುಟಿಯುಸಿ ರಾಜ್ಯ ಉಪಾಧ್ಯಕ್ಷ ಮಂಜುನಾಥ್ ಕೈದಾಳೆ ಚಾಲನೆ ನೀಡಿ ಮಾತನಾಡಿ, ಗ್ರಾಮೀಣ ಮತ್ತು ನಗರ ಕೊಳಚೆ ಪ್ರದೇಶದ ಜನರ ಆರೋಗ್ಯದ ಆಶಾಕಿರಣವಾಗಿರುವ ಆಶಾ ಕಾರ್ಯಕರ್ತೆಯರು ಸರ್ಕಾರದ ನಿರೀಕ್ಷೆಯಂತೆ ತಮ್ಮ ಸೇವೆ ಮೂಲಕ ಜನರನ್ನು ಆರೋಗ್ಯವಾಗಿಡಲು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ತಮ್ಮ ಸೇವೆಯ ನಿಗದಿತ ಗೌರವ ಧನಕ್ಕೆ ಆಗ್ರಹಿಸಿ ಕಳೆದ ಜನವರಿಯಲ್ಲಿ ಸತತ ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿ ಧರಣಿ ನಡೆಸಿದಾಗ ಮುಖ್ಯಮಂತ್ರಿಗಳ ಸಮಕ್ಷಮದಲ್ಲಿ ಸರ್ಕಾರ ಏಪ್ರಿಲ್‌ನಿಂದ ಮಾಸಿಕ ಕನಿಷ್ಠ 10 ಸಾವಿರ ಗೌರವ ಧನ ನೀಡುವ ಭರವಸೆ ನೀಡಿತ್ತು. ಆದರೆ ಇದುವರೆಗೂ ಅವರ ಭರವಸೆ ಜಾರಿಯಾಗಿಲ್ಲ. ಜತೆಗೆ ಆಶಾ ಕಾರ್ಯಕರ್ತರು ಕೆಲಸ ನಿರ್ವಹಿಸುವ ಜನವಸತಿಯ ಜನಸಂಖ್ಯೆಯ ಮಿತಿಯನ್ನು 1000 ದಿಂದ 2000ಕ್ಕೆ ಹೆಚ್ಚಿಸಿ ಸಾವಿರ ಜನಸಂಖ್ಯೆಗಿಂತ ಕಡಿಮೆ ಇರುವ ಗ್ರಾಮಗಳ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯುವ ಹುನ್ನಾರ ನಡೆಸಲಾಗುತ್ತಿದೆ. ಗೌರವ ಧನ ಕೇಳಿದರೆ ಅವೈಜ್ಞಾನಿಕವಾಗಿ ಅವರ ಮೇಲೆ ಕಾರ್ಯ ನಿರ್ವಹಣಾ ಮೌಲ್ಯ ಮಾಪನವನ್ನು ಹೇರಿ ಕರ್ತವ್ಯದಲ್ಲಿ ಮುಂದುವರೆಸುವ ಹಾಗೂ ತೆಗೆದು ಹಾಕುವ ಬೆದರಿಕೆ ಒಡ್ಡಲಾಗುತ್ತಿದೆ. ಮುಖ್ಯಮಂತ್ರಿಗಳು ಆಶಾಗಳ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಹಾಗೂ ಅವರನ್ನು ಕೆಲಸದಿಂದ ತೆಗೆಯುವ ಕ್ರಮಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪತ್ರಕರ್ತ ಜಿ ಎಸ್ ಉಜ್ಜಿನಪ್ಪ, ಲೇಖಕ ಆನಂದ್ ಕುಮಾರ್,ಅಲೆಮಾರಿ ಮತ್ತು ಅರೆ ಅಲೆಮಾರಿ ಒಕ್ಕೂಟದ ಜಿಲ್ಲಾಧ್ಯಕ್ಷ ಲಕ್ಷ್ಮಿಕಾಂತ್, ಎಐಯುಟಿಯುಸಿ ಜಿಲ್ಲಾ ಸಂಚಾಲಕ ರವಿಕುಮಾರ್, ಆಶಾ ಸಂಘದ ಜಿಲ್ಲಾಧ್ಯಕ್ಷೆ ಗಿರಿಜಮ್ಮ,ಮುಖಂಡರುಗಳಾದ ಮಂಜುಳಮ್ಮ,ಲಕ್ಷ್ಮಿಬಾಯಿ, ಗುರುಶಾಂತ, ನಾಗವೇಣಿ,ಪಾರ್ವತಮ್ಮ, ರಾಜಮ್ಮ ಮಮತಾ ಸೇರಿದಂತೆ ನೂರಾರು ಆಶಾ ಕಾರ್ಯಕರ್ತೆಯರು ಧರಣಿಯಲ್ಲಿ ಪಾಲ್ಗೊಂಡಿದ್ದರು.

ಧರಣಿ ಸ್ಥಳದಲ್ಲಿ ಜಿಪಂ ಸಿಇಒ ಡಾ.ಎಸ್ ಆಕಾಶ್ ರವರಿಗೆ ಹಕ್ಕೊತ್ತಾಯಗಳ ಮನವಿ ಸಲ್ಲಿಸಲಾಯಿತು.