ಸಾರಾಂಶ
ಹಳಿಯಾಳ: ರಾಜ್ಯ ಸರ್ಕಾರ ನೀಡಿದ ವಾಗ್ದಾಣದಂತೆ ತಮ್ಮ ಮಾತು ಕೊಟ್ಟಂತೆ ನಡೆದುಕೊಳ್ಳಬೇಕು. ರಾಜ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರ ಸೇವಾ ಸಂಬಂಧಿತ ನ್ಯಾಯೋಚಿತವಾದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ಬುಧವಾರ ಪಟ್ಟಣದಲ್ಲಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದರು.
ಪಟ್ಟಣದ ವಲ್ಲಭಬಾಯಿ ಉದ್ಯಾನದಿಂದ ತಾಲೂಕಾಡಳಿತ ಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಆಶಾ ಕಾರ್ಯಕರ್ತೆಯರು, ರಾಜ್ಯ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಉಪ-ತಹಸೀಲ್ದಾರ ಅಶೋಕ ಚನ್ನಬಸವ ಅವರಿಗೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಕಾರ್ಯದರ್ಶಿ ಸಂಗೀತಾ ಮಾರುತಿ ಅಂಗ್ರೋಳ್ಳಿ, ರಾಜ್ಯ ಸರ್ಕಾರ ಕಳೆದ 7ತಿಂಗಳ ಹಿಂದೆ ಘೋಷಿಸಿದ ಆದೇಶಗಳನ್ನು ಜಾರಿ ಮಾಡಬೇಕೆಂದು ರಾಜ್ಯವ್ಯಾಪಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ಆರಂಭಿಸಿದ್ದಾರೆ. ಈ ಮುಷ್ಕರದ ಕರೆಗೆ ಬೆಂಬಲಿಸಿ ಹಳಿಯಾಳದಲ್ಲೂ ಪ್ರತಿಭಟನೆ ನಡೆಸಿ ನಾವು ಮನವಿ ನೀಡುತ್ತಿದ್ದೇವೆ. ನಮ್ಮ ಸೇವೆಗೆ ತಕ್ಕ ಪ್ರತಿಫಲವನ್ನು ನಮಗೆ ಸರ್ಕಾರ ನೀಡಬೇಕೆಂದು ಆಗ್ರಹಿಸಿದರು.
ಸಲ್ಲಿಸಿದ ಮನವಿಯಲ್ಲಿ ಮುಖ್ಯಮಂತ್ರಿ ಘೋಷಿಸಿದಂತೆ ಮಾಸಿಕ ಕನಿಷ್ಠ ಗೌರವಧನ ₹10 ಸಾವಿರ ಏಪ್ರಿಲ್ ತಿಂಗಳಿನಿಂದ ಅನ್ವಯವಾಗುವಂತೆ ಬಿಡುಗಡೆ ಮಾಡಿ ಆದೇಶ ಹೊರಡಿಸಬೇಕು. 2025ರ ಬಜೇಟನಲ್ಲಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ₹1000 ಪ್ರೋತ್ಸಾಹಧನ ಹೆಚ್ಚಳ ಮಾಡಿದಂತೆ ಆಶಾ ಕಾರ್ಯಕರ್ತೆಯರಿಗೂ ಹೆಚ್ಚಳ ಮಾಡಬೇಕು. ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು. ಅವೈಜ್ಞಾನಿಕವಾಗಿರುವ ಆಶಾ ಕಾರ್ಯಕರ್ತೆಯರ ಕಾರ್ಯ ನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು. ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಬಂಗಾಳ ಸರ್ಕಾರದ ಮಾದರಿಯಲ್ಲಿ ಇಡಿಗಂಟು ನೀಡಬೇಕು. ನಗರದಲ್ಲಿ ಸೇವೆ ಸಲ್ಲಿಸುವ ಆಶಾ ಕಾರ್ಯಕರ್ತೆಯರಿಗೆ ₹2 ಸಾವಿರ ಗೌರವ ಧನವನ್ನು ಹೆಚ್ಚಿಸಬೇಕು. ಪ್ರಸಕ್ತ ಸಾಲಿನ ಜೂನ್-ಜುಲೈ ತಿಂಗಳಲ್ಲಿ ಕೇಂದ್ರ ಸರ್ಕಾರ ಹೆಚ್ಚಿಸಿದ ಪ್ರೋತ್ಸಾಹ ಧನ ಯೋಜನೆಯನ್ನು ರಾಜ್ಯದಲ್ಲಿಯೂ ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ಮನವಿಯಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.ತಾಲೂಕ ಅಧ್ಯಕ್ಷೆ ನೀಲವ್ವಾ ಬೇಡಿಗೇರಿಮಠ, ರೇಣುಕಾ ಕಂಬಳಿ, ಗೀತಾ ಮೊರೆ, ಸುಜಾತಾ ಬಿಷ್ಟಣ್ಣನವರ, ಅನಸೂಯಾ ಜಾವಳೇಕರ, ರುಕ್ಮಣಿ ಮಡಿವಾಳ, ಜ್ಯೋತಿ ಬೆಳವಟಗಿ, ಚಂದ್ರಕಲಾ ಬಂಡಿ, ಸಂಗೀತಾ ಕಿತ್ತೂರ, ಪೂಜಾ ರೆಡೆಕರ, ಜಾಸ್ಮಿನ ದಾಂಡೇಲಿ ಇದ್ದರು.