ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಎರಡನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನ ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಿ ದರ್ಶನಕ್ಕೆ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಭಕ್ತರು ನೆರೆದಿದ್ದರು.ಆಷಾಢ ಮಾಸದ 2ನೇ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ವರುಣ ಸಿಂಚನದೊಂದಿಗೆ ಭಕ್ತಿಯ ಸಿಂಚನವೂ ಆಯಿತು. ಮಳೆ, ಮಂಜು, ಚಳಿಯನ್ನೂ ಲೆಕ್ಕಿಸದೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಚಾಮುಂಡೇಶ್ವರಿ ದರ್ಶನ ಪಡೆದು ಭಕ್ತಿ ಮೆರೆದರು.
ಮುಂಜಾನೆಯಿಂದಲೇ ರಾಜ್ಯದ ಮೂಲೆ ಮೂಲೆಯಿಂದ ಬೆಟ್ಟಕ್ಕೆ ಆಗಮಿಸಿದ್ದ ಭಕ್ತರು, ಸರತಿ ಸಾಲಿನಲ್ಲಿ ನಿಂತು ಜೈ ಚಾಮುಂಡಿ ಜಯ ಘೋಷ ಕೂಗುತ್ತ ಚಾಮುಂಡೇಶ್ವರಿ ದರ್ಶನ ಪಡೆದರು.ಬೆಟ್ಟಕ್ಕೆ ಸಾರ್ವಜನಿಕರ ವಾಹನಕ್ಕೆ ನಿರ್ಬಂಧ ವಿಧಿಸಿದ್ದು, ಲಲಿತಮಹಲ್ ಮೈದಾನದಿಂದ ಚಾಮುಂಡಿಬೆಟ್ಟಕ್ಕೆ ಭಕ್ತರಿಗೆ ಉಚಿತ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಸಾವಿರಾರು ಮಂದಿ ಮಳೆಯಲ್ಲೂ ಮೆಟ್ಟಿಲುಗಳಿಗೆ ಅರಿಶಿಣ ಕುಂಕುಮ ಹಚ್ಚುತ್ತಾ ತಮ್ಮ ಹರಕೆ ತೀರಿಸಿದರು.
ವಿಶೇಷ ಪೂಜೆ: 2ನೇ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಮುಂಜಾನೆ 3 ಗಂಟೆಯಿಂದಲೇ ಚಾಮುಂಡಿಬೆಟ್ಟದಲ್ಲಿ ಪೂಜಾ ಕೈಂಕರ್ಯಗಳು ಆರಂಭಗೊಂಡವು.ನಾಗಲಕ್ಷ್ಮೀ ಅಲಂಕಾರ: ಆಷಾಢ ಮಾಸದ ಪ್ರತಿ ಶುಕ್ರವಾರಗಳಲ್ಲೂ ಚಾಮುಂಡೇಶ್ವರಿಗೆ ವಿವಿಧ ರೀತಿಯ ಅಲಂಕಾರಗಳನ್ನು ಮಾಡಲಾಗುತ್ತದೆ. ಅದೇ ರೀತಿ ಈ ವಾರ ಚಾಮುಂಡೇಶ್ವರಿ ದೇವಿಗೆ ನಾಗಲಕ್ಷ್ಮೀ ಅಲಂಕಾರ ಮಾಡಲಾಗಿತ್ತು. ಬದನೆಕಾಯಿ, ಕುಂಬಳಕಾಯಿ, ಮಂಗಳೂರು ಸೌತೆ, ಕಿತ್ತಳೆ, ದಾಳಿಂಬೆ, ಮೋಸಂಬಿ, ಡ್ರ್ಯಾಗನ್ ಫ್ರೂಟ್, ತೆಂಗಿನಕಾಯಿ ಸೇರಿ ವಿವಿಧ ಫಲಪುಷ್ಪಗಳಿಂದ ದೇವಸ್ಥಾನದ ಆವರಣವನ್ನು ಅಲಂಕರಿಸಲಾಗಿತ್ತು.
ಡಿಕೆಶಿ ಕುಟುಂಬ: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಟುಂಬ, ನಟಿ ಸುಧಾರಾಣಿ, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತರೆಡ್ಡಿ ಸೇರಿ ಹಲವು ಗಣ್ಯರು ಬೆಟ್ಟಕ್ಕೆ ಭೇಟಿ ನೀಡಿ ಅಮ್ಮನ ದರ್ಶನ ಪಡೆದರು.