ಆಷಾಢ ಜಾತ್ರೆ: ಜುಲೈ 16 ರಂದು ಚೆಲುವನಾರಾಯಣಸ್ವಾಮಿ ಕೃಷ್ಣರಾಜಮುಡಿ ಉತ್ಸವ

| Published : Jul 07 2025, 11:48 PM IST

ಆಷಾಢ ಜಾತ್ರೆ: ಜುಲೈ 16 ರಂದು ಚೆಲುವನಾರಾಯಣಸ್ವಾಮಿ ಕೃಷ್ಣರಾಜಮುಡಿ ಉತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಶ್ರದ್ಧಾಭಕ್ತಿಯಿಂದ ಆಷಾಢ ಮಾಸದಲ್ಲಿ ಆರಂಭಿಸಿರುವ ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳು ಜುಲೈ 11ರಿಂದ 21ರವರೆಗೆ ನಡೆಯಲಿದೆ. ಜುಲೈ 16ರ ರಾತ್ರಿ 7 ಗಂಟೆಗೆ ಶ್ರೀಚೆಲುವನಾರಾಯಣ ಸ್ವಾಮಿಗೆ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ಜರುಗಲಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮೈಸೂರು ದೊರೆ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಶ್ರದ್ಧಾಭಕ್ತಿಯಿಂದ ಆಷಾಢ ಮಾಸದಲ್ಲಿ ಆರಂಭಿಸಿರುವ ಜಾತ್ರಾ ಮಹೋತ್ಸವದ ಧಾರ್ಮಿಕ ಕೈಂಕರ್ಯಗಳು ಜುಲೈ 11ರಿಂದ 21ರವರೆಗೆ ನಡೆಯಲಿದೆ. ಜುಲೈ 16ರ ರಾತ್ರಿ 7 ಗಂಟೆಗೆ ಶ್ರೀಚೆಲುವನಾರಾಯಣ ಸ್ವಾಮಿಗೆ ಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ಜರುಗಲಿದೆ.

ಮೇಲುಕೋಟೆ ದೇವಾಲಯದಲ್ಲಿ ವರ್ಷಕ್ಕೆರಡು ಸಲ ಮಾತ್ರ ಸ್ವಾಮಿಗೆ ಕಲ್ಯಾಣೋತ್ಸವ ಹಾಗೂ ಮಹಾಭಿಷೇಕ ನಡೆಯುವ ಸಂಪ್ರದಾಯವಿದ್ದು, ವೈರಮುಡಿ ಬ್ರಹ್ಮೋತ್ಸವ ಬಿಟ್ಟರೆ ಮಹಾರಾಜ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮ ನಕ್ಷತ್ರದಂದು ಮಹಾಭಿಷೇಕ ಮತ್ತು ಕಲ್ಯಾಣೋತ್ಸವ ನಡೆಯುತ್ತಿದೆ.

ಈ ವರ್ಷ ಮುಮ್ಮುಡಿ ಶ್ರೀಕೃಷ್ಣರಾಜ ಒಡೆಯರ್ ಜನ್ಮನಕ್ಷತ್ರದ ಅಂಗವಾಗಿ ಆಷಾಢ ಮಾಸದ ಉತ್ತರಾಷಾಡ ದ್ವಿತೀಯೆಯಂದು ಮಹಾವಿಷ್ಣುವಿನ ಅನುಗ್ರಹಕ್ಕೆ ಪ್ರಶಸ್ತವಾದ ಜುಲೈ 12ರಂದು ಚೆಲುವನಾರಾಯಣಸ್ವಾಮಿಗೆ ಮಹಾಭಿಷೇಕ ಹಾಗೂ ಸಂಜೆ ಕಲ್ಯಾಣೋತ್ಸವ ನಡೆಯಲಿದೆ.

ಕೃಷ್ಣರಾಜಮುಡಿ ಬ್ರಹ್ಮೋತ್ಸವದ ಅಂಗವಾಗಿ ಜುಲೈ 16ರಂದು ಶ್ರೀಕೃಷ್ಣರಾಜಮುಡಿ ಕಿರೀಟಧಾರಣ ಮಹೋತ್ಸವ ನಡೆಯಲಿದೆ. ಮಂಡ್ಯ ಜಿಲ್ಲಾ ಖಜಾನೆಯಲ್ಲಿರುವ ಕೃಷ್ಣರಾಜಮುಡಿ ತಿರುವಾಭರಣ ಪೆಟ್ಟಿಗೆಯನ್ನು ಪೊಲೀಸ್ ಭದ್ರತೆಯೊಂದಿಗೆ ಮೇಲುಕೋಟೆಗೆ ತಂದು ಪಾರ್ಕಾವಣೆ ಮಾಡಿ ಶ್ರೀದೇವಿ-ಭೂದೇವಿ ಸಮೇತನಾಗಿ ಗರುಡಾರೂಢನಾದ ಚೆಲುವನಾರಾಯಣ ಸ್ವಾಮಿಗೆ ಧರಿಸಿ ನಾಲ್ಕು ಬೀದಿಗಳಲ್ಲಿ ಉತ್ಸವ ನೆರವೇರಿಸಲಾಗುತ್ತದೆ.

ಕೃಷ್ಣರಾಜಮುಡಿ ಕಿರೀಟ 16ರಿಂದ 21ರವರೆಗೆ ವಿವಿಧ ಉತ್ಸವಗಳಲ್ಲಿ ಚೆಲುವನಾರಾಯಣನನ್ನು ಅಲಂಕರಿಸಲಿದೆ. ಜುಲೈ 21 ರಂದು ಕಲ್ಯಾಣಿಯಲ್ಲಿ ನಡೆಯುವ ತೀರ್ಥಸ್ನಾನದೊಂದಿಗೆ ಬ್ರಹ್ಮೋತ್ಸವ ಸಂಪನ್ನವಾಗಲಿದೆ. ಸರಳ ದೀಪಾಲಂಕಾರ, ಪುಷ್ಪಾಲಂಕಾರ

ಜುಲೈ 11ರಿಂದ 22ರವರೆಗೆ ದೇವಾಲಯದ ರಾಜಗೋಪುರಕ್ಕೆ ದೀಪಾಲಂಕಾರ, ರಾಜಬೀದಿಗೆ ದೀಪಗಳ ತೋರಣ ಅಳವಡಿಸಲಾಗುತ್ತದೆ. ಮಹಾರಾಜರ ಜನ್ಮ ನಕ್ಷತ್ರದಂದು ಮುಮ್ಮುಡಿ ಕೃಷ್ಣರಾಜ ಒಡೆಯರ್ ಮತ್ತು ರಾಣಿಯರ ಭಕ್ತ ವಿಗ್ರಹಕ್ಕೆ ಸಾಂಪ್ರದಾಯಿ ವಿಶೇಷ ಪೂಜೆ ಅರ್ಪಿಸಲಾಗುತ್ತದೆ. ಬ್ರಹ್ಮೋತ್ಸವಗಳ ವೇಳೆ ನಡೆಯುವ ಪ್ರಮುಖ ಉತ್ಸವಗಳಿಗೆ ವಿಶೇಷ ಮಂಗಳವಾದ್ಯ ನಿಯೋಜಿಸಲಾಗುವುದು ಎಂದು ದೇಗುಲದ ಇಒ ಶೀಲಾ ಮಾಹಿತಿ ನೀಡಿದ್ದಾರೆ

ಆಷಾಢ ಜಾತ್ರಾ ಮಹೋತ್ಸವ ಕೃಷ್ಣರಾಜಮುಡಿ ಬ್ರಹ್ಮೋತ್ಸವದಲ್ಲಿ ಪುಷ್ಪಾಲಂಕಾರ, ಪುಷ್ಪ ಕೈಂಕರ್ಯ ಸೇರಿ ಹಲವು ಸೇವೆಗಳನ್ನು ಭಕ್ತರು ನೆರವೇರಿಸಬಹುದು. ಸ್ವಾಮಿ ಸನ್ನಿಧಿ ಆವರಣ ಕಲ್ಯಾಣೋತ್ಸವ ನಡೆಯುವ ಅಮ್ಮನವರ ಸನ್ನಿಧಿ ಪ್ರಾಂಗಣಕ್ಕೆ ಪುಷ್ಪಾಲಂಕಾರ ಸೇವೆ ಮಾಡಬಹುದು. ಬ್ರಹ್ಮೋತ್ಸವದಲ್ಲಿ ನಡೆಯುವ ವಾಹನೋತ್ಸವಗಳಿಗೂ ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಿ ಹಲವು ಸೇವೆ ಮಾಡಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.