ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಇಲ್ಲಿನ ಪುರಸಭೆಗೆ ನೂತನ ಅಧ್ಯಕ್ಷರಾಗಿ ಎ.ಆರ್. ಅಶೋಕ್ ಹಾಗೂ ಉಪಾಧ್ಯಕ್ಷರಾಗಿ ಉಷಾ ಸತೀಶ್ ಅವಿರೋಧವಾಗಿ ಆಯ್ಕೆಯಾದರು.ಪುರಸಭೆಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ತಹಸೀಲ್ದಾರ್ ಮಮತಾ ಎಂ ಆಯ್ಕೆಯನ್ನು ಪ್ರಕಟಿಸಿದರು. ನಂತರ ಮಾತನಾಡಿದ ಅಧ್ಯಕ್ಷ ಎ.ಆರ್. ಅಶೋಕ್ ಅಧ್ಯಕ್ಷರಾಗಿ ಆಯ್ಕೆಯಾಗಲು ಶ್ರಮಿಸಿದ ಮಾಜಿ ಸಚಿವ ಬಿ. ಶಿವರಾಂ, ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಆರ್. ವೆಂಕಟೇಶ್, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಜೆ. ನಿಶಾಂತ್ ಹಾಗೂ ಜೊತೆಗಿದ್ದ ಎಲ್ಲ ಸದಸ್ಯರಿಗೂ ಅಭಿನಂದನೆ ಸಲ್ಲಿಸಿ ಮಾತನಾಡಿ, ಶಾಸಕರ ಅನುದಾನ ಸೇರಿ ನಾನಾ ಯೋಜನೆಗಳಡಿ ಅನುದಾನ ತಂದು ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು. ಪುರಸಭೆ ವತಿಯಿಂದ ಹಣವನ್ನು ವೆಚ್ಚ ಮಾಡಿ ಪಟ್ಟಣದ ವಾಹನಗಳ ನಿಲುಗಡೆಗೆ ಸೂಕ್ತ ಸ್ಥಳ ಮಾಡಲಾಗುವುದು ಜೊತೆಗೆ ಪುರಸಭಾ ವ್ಯಾಪ್ತಿಯ 23 ವಾರ್ಡ್‌ಗಳನ್ನ ಅಭಿವೃದ್ಧಿಪಡಿಸುವುದಾಗಿ ತಿಳಿಸಿದರು.
ಮಾಜಿ ಸಚಿವ ಬಿ ಶಿವರಾಂ ಮಾತನಾಡಿ, ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಂಡು ಪುರಸಭೆಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು. ಅಭಿವೃದ್ಧಿಗೆ ಸಂಪೂರ್ಣ ನಮ್ಮ ಸಹಕಾರ ನೀಡುವುದರ ಜೊತೆಗೆ ಸರ್ಕಾರದ ಅನುದಾನ ಕೊಡಿಸಲಾಗುವುದು. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಧಿಕಾರ ನಡೆಸಬೇಕು ತಾಳ್ಮೆಯನ್ನು ಮೈಗೂಡಿಸಿಕೊಳ್ಳಬೇಕು ಎಂದರು.ಪಟ್ಟಣದ ಪುರಸಭೆಯಲ್ಲಿ ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ತಹಸೀಲ್ದಾರ್ ಮಮತಾ ಅವರು ಅವಿರೋಧ ಆಯ್ಕೆ ಘೋಷಣೆ ಮಾಡುತ್ತಿದ್ದಂತೆ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಸಿದ್ದ ಶಾಂತಕುಮಾರ್ ಜೊತೆ ಸಿ.ಎನ್. ದಾನಿ , ಸಭಾ ಕೌಸರ್, ಮೀನಾಕ್ಷಿ ವೆಂಕಟೇಶ್, ಭರತ್ ಸೇರಿದಂತೆ ಕೆಲ ಸದಸ್ಯರು ಸಭಾಭವನದಿಂದ ಹೊರ ನಡೆದರು.
ಅಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಇಬ್ಬರ ನಡುವೆ ಬಾರಿ ಪೈಪೋಟಿ ನಡೆದಿತ್ತು. ಕೊನೆ ಕ್ಷಣದವರೆಗೂ ಎಲ್ಲ ರೀತಿಯ ರಾಜಕೀಯ ತಂತ್ರಗಾರಿಕೆಗಳು ನಡೆದಿದ್ದವು. ಅಧ್ಯಕ್ಷ ಗಾದಿಗೇರುವ ಪೈಪೋಟಿ ಹಾಗೂ ಅಸಮಾಧಾನ ಪಕ್ಷದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.