ಸಿಂದಗಿಯಲ್ಲಿ ತಲೆ ಎತ್ತಲಿದೆ ಅಶೋಕ ಸ್ತಂಭ

| Published : Nov 18 2025, 02:15 AM IST

ಸಾರಾಂಶ

ಜಿಲ್ಲೆಯಲ್ಲಿ ಎಲ್ಲಿಯೂ ನಿರ್ಮಾಣಗೊಳ್ಳದ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭದ ವೃತ್ತ ಸಿಂದಗಿಯಲ್ಲಿ ನಿರ್ಮಾಣವಾಗುತ್ತಿರುವುದು ಪಟ್ಟಣದ ಜನತೆಗೆ ಖುಷಿ ತಂದಿದೆ.

ಸಿದ್ದಲಿಂಗ ಕಿಣಗಿ

ಕನ್ನಡಪ್ರಭ ವಾರ್ತೆ ಸಿಂದಗಿ

ಜಿಲ್ಲೆಯಲ್ಲಿ ಎಲ್ಲಿಯೂ ನಿರ್ಮಾಣಗೊಳ್ಳದ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭದ ವೃತ್ತ ಸಿಂದಗಿಯಲ್ಲಿ ನಿರ್ಮಾಣವಾಗುತ್ತಿರುವುದು ಪಟ್ಟಣದ ಜನತೆಗೆ ಖುಷಿ ತಂದಿದೆ. ಜತೆಗೆ ಈ ಕಾರ್ಯ ಕೈಗೆತ್ತಿಕೊಂಡಿರುವ ಶಾಸಕ ಅಶೋಕ ಮನಗೂಳಿ ಕಾರ್ಯಕ್ಕೆ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಆಲಮೇಲ ರಸ್ತೆಯ ಬಳಿಯಿರುವ 1994 ರಲ್ಲಿ ದಿ.ಎಂ.ಸಿ.ಮನಗೂಳಿ ಅವರ ಅಧಿಕಾರವಧಿಯಲ್ಲಿ ನಿರ್ಮಾಣಗೊಂಡಿರುವ ಗಾಂಧಿ ವೃತ್ತವನ್ನು ಪ್ರಸ್ತುತ ಸ್ಥಳಾಂತರಿಸಿ, ಹಿಂದಿನ ಬದಿಯಲ್ಲಿ ಭವ್ಯವಾಗಿ ಗಾಂಧಿ ವೃತ್ತ ನಿರ್ಮಾಣ ಮಾಡಲಾಗುತ್ತಿದೆ. ಈ ಸ್ಥಳಾಂತರಿಸಿದ ಜಾಗದಲ್ಲಿ ರಾಷ್ಟ್ರೀಯ ಲಾಂಛನ ಅಶೋಕ ಸ್ತಂಭದ ವೃತ್ತ ಇನ್ನೇನು ಕೆಲವೇ ತಿಂಗಳಲ್ಲಿ ತಲೆ ಎತ್ತಲಿದೆ. ಈಗಾಗಲೇ ಕಾಮಗಾರಿ ಕಾರ್ಯ ಭರದಿಂದ ಸಾಗಿದ್ದು, 2026ರ ಜನವರಿ 26ರ ಗಣರಾಜ್ಯೋತ್ಸವದಂದು ಬಹುತೇಕ ಉದ್ಘಾಟನೆಗೊಳ್ಳುವ ಸಾಧ್ಯತೆ ಇದೆ.

ಏನಿದು ಅಶೋಕ ಸ್ತಂಭ?:

ಅಶೋಕ ಸ್ತಂಭವು ನಮ್ಮ ರಾಷ್ಟ್ರೀಯ ಲಾಂಛನ. ಸಾರಾನಾಥದಲ್ಲಿರುವ ಬೌದ್ಧ ಸ್ತಂಭವನ್ನು ಆಧರಿಸಿದೆ. ಇದು ನಾಲ್ಕು ಸಿಂಹಗಳ ಪ್ರತಿಮೆ ಹೊಂದಿದ್ದು, ಅವುಗಳಲ್ಲಿ ಮೂರು ಗೋಚರಿಸುತ್ತವೆ. ಕೆಳಗೆ ಗೂಳಿ ಹಾಗೂ ಕುದುರೆಯ ಚಿತ್ರಗಳಿವೆ. ಜನವರಿ 26, 1950 ರಂದು ಇದನ್ನು ಭಾರತದ ಅಧಿಕೃತ ರಾಷ್ಟ್ರೀಯ ಲಾಂಛನವನ್ನಾಗಿ ಮಾಡಲಾಗಿದೆ. ಮೌರ್ಯ ಸಾಮ್ರಾಜ್ಯದ ಚಕ್ರವರ್ತಿ ಅಶೋಕನ ಶೌರ್ಯ, ಸಾಹಸಗಳನ್ನು ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ಉಳಿದಿವೆ. ಅಶೋಕ ಚಕ್ರವರ್ತಿಯ ಆಳ್ವಿಕೆ ಸಮಯದಲ್ಲಿ ಹಲವಾರು ಸೂಪ್ತ, ಶಾಸನಗಳನ್ನು ಕಾಣಬಹುದು. ಅವುಗಳಲ್ಲಿ ಸಾರಾನಾಥದಲ್ಲಿರುವ ಅಶೋಕ ಸ್ತಂಭ ಬಹು ಪ್ರಾಮುಖ್ಯತೆ ಪಡೆದುಕೊಂಡಿದೆ. ಇನ್ನು ನಮ್ಮ ಭಾರತೀಯ ತ್ರಿವರ್ಣ ಧ್ವಜದ ಮಧ್ಯೆಯೂ ಅಶೋಕ ಚಕ್ರ ಕಾಣಬಹುದಾಗಿದೆ.

ಶಾಸಕ ಅಶೋಕ ಮನಗೂಳಿ ಕನಸಿದು:

ಅಧಿಕಾರ ಶಾಶ್ವತವಲ್ಲ ಅಧಿಕಾರದಲ್ಲಿ ಇದ್ದಾಗ ಶಾಶ್ವತ ಯೋಜನೆಗಳನ್ನು ರೂಪಿಸುವುದು ಒಬ್ಬ ಜನಪ್ರತಿನಿಧಿಯ ಕರ್ತವ್ಯ. ಮಿನಿ ವಿಧಾನಸೌಧ, ಪುರಸಭೆಯನ್ನು ನಗರಸಭೆ ಆಗಿಸಿದ್ದು, ಸಿಂದಗಿ ಕೆರೆಗೆ ಬಳಗಾನೂರ ಕೆರೆಯಿಂದ ನೀರು ಹರಿಸಿದ್ದು, ವಿವಿಧ ಗ್ರಾಮಗಳಲ್ಲಿ ನೂತನ ಶಾಲಾ ಕಾಲೇಜು ಸ್ಥಾಪನೆ ಮಾಡಿದ್ದು, ವಿದ್ಯುತ್‌ ಘಟಕ ನಿರ್ಮಾಣ ಸೇರಿದಂತೆ ಹತ್ತು ಹಲವಾರು ಶಾಶ್ವತ ಯೋಜನೆ ರೂಪಿಸಲಾಗಿದೆ. ಸಿಂದಗಿಯಲ್ಲಿ ಅಶೋಕ ಸ್ತಂಭವನ್ನು ನಿರ್ಮಾಣ ಮಾಡಬೇಕು ಎಂದು ನಾನು ಶಾಸಕನಾದ ಮೇಲೆ ಕನಸು ಕಂಡಿದ್ದೆ. ಅದು ಪ್ರಸ್ತುತ ನೆರವೇರುತ್ತಿದೆ ಎಂದು ಶಾಸಕ ಅಶೋಕ ಮನಗೂಳಿ ಸಂತಸ ವ್ಯಕ್ತ ಪಡಿಸಿದ್ದಾರೆ.

ಈ ಲಾಂಛನ ನಮ್ಮ ದೇಶದ ಪ್ರತಿಕವಾಗಿದೆ. ಇದೊಂದು ರಾಷ್ಟ್ರಪ್ರೇಮದ ಕಾರ್ಯ. ಎಲ್ಲ ಸರ್ಕಾರಿ ಕಚೇರಿಗಳು ಇದೆ ದಾರಿಯಲ್ಲಿ ಇರುವುದರಿಂದ ಈ ಜಾಗೆ ಸೂಕ್ತವಾಗಿದೆ. ಅಶೋಕ ಸ್ತಂಭ ನಿರ್ಮಾಣವು ಸುಮಾರು ₹15 ಲಕ್ಷ ವೆಚ್ಚದ ಕಾಮಗಾರಿಯಲ್ಲಿ ನಡೆಯುತ್ತಿದೆ. ನೂತನ ಗಾಂಧಿ ವೃತ್ತದ ಕಾರ್ಯವು ಅಂದಾಜು ₹20 ಲಕ್ಷ ವೆಚ್ಚದಲ್ಲಿದ್ದು ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದೆ. ಸಿಂದಗಿ ಮತಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಮಂಜೂರಾದ ಕಾಮಗಾರಿಗಳು ಬೇಗನೆ ಆಗುವುದಿಲ್ಲ. ಕೆಲವು ತಾಂತ್ರಿಕ ತೊಂದರೆಗಳು ಬರುವುದು ಸ್ವಾಭಾವಿಕ. ಸಾರ್ವಜನಿಕರ ಸಹಕಾರ ಮುಖ್ಯವಾಗಿ ಬೇಕು ಹಂತ ಹಂತವಾಗಿ ಈ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವುದೇ ನನ್ನ ಮೊದಲ ಗುರಿ.

- ಅಶೋಕ ಮನಗೂಳಿ, ಶಾಸಕರು ಸಿಂದಗಿ

ಸಿಂದಗಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಶೋಕ ಸ್ತಂಭದ ಕಾರ್ಯ ಒಂದು ಇತಿಹಾಸ. ಶಾಸಕರ ಈ ಸೃಜನಶೀಲತೆ ಅಭಿವೃದ್ಧಿಗೆ ಪೂರಕವಾಗಿದೆ. ರಾಷ್ಟ್ರಪ್ರೇಮವನ್ನು ಮೆರೆಸುವ ಕಾರ್ಯ ಇದಾಗಿದ್ದು ಅವರ ಕಾರ್ಯ ಯೋಜನೆಗಳೊಂದಿಗೆ ನಾವು ಸದಾ ಜೊತೆಗಿದ್ದೇವೆ. ಆದಷ್ಟು ಬೇಗನೆ ಅಶೋಕ ಸ್ತಂಭ ಮತ್ತು ನೂತನ ಗಾಂಧಿ ವೃತ್ತ ನಿರ್ಮಾಣವಾಗಲಿದೆ.

- ಸತೀಶ ಸೋಮನಗೌಡ ಬಿರಾದಾರ, ಗುತ್ತಿಗೆದಾರರು ಸಿಂದಗಿ