ಶ್ರೀರಂಗಪಟ್ಟಣದ ದೇವಾಲಯದಿಂದ ಮುಂಜಾನೆ 7ರಿಂದ ದೇಗುಲದ ಪ್ರಧಾನ ಅರ್ಚಕ ವಿಜಯಸಾರಥಿ ಅವರ ನೇತೃತ್ವದಲ್ಲಿ ಶ್ರೀದೇವಿ, ಭೂದೇವಿ ಹಾಗೂ ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಶ್ರೀರಂಗನಾಥಸ್ವಾಮಿಯವರ ಉತ್ಸವ ಮೂರ್ತಿಯನ್ನು ವಿಶೇಷ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಶ್ರೀ ಆದಿರಂಗನಾಥಸ್ವಾಮಿಗೆ ತುಲಾ ಮಾಸದ ದಶಮಿ ಪ್ರಯುಕ್ತ ಅಷ್ಟ ತೀರ್ಥೋತ್ಸವವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.ಪಟ್ಟಣದ ದೇವಾಲಯದಿಂದ ಮುಂಜಾನೆ 7ರಿಂದ ದೇಗುಲದ ಪ್ರಧಾನ ಅರ್ಚಕ ವಿಜಯಸಾರಥಿ ಅವರ ನೇತೃತ್ವದಲ್ಲಿ ಶ್ರೀದೇವಿ, ಭೂದೇವಿ ಹಾಗೂ ಶ್ರೀರಂಗನಾಯಕಿ ಅಮ್ಮನವರ ಸಮೇತವಿರುವ ಶ್ರೀರಂಗನಾಥಸ್ವಾಮಿಯವರ ಉತ್ಸವ ಮೂರ್ತಿಯನ್ನು ವಿಶೇಷ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿ ಬಳಿಕ ಪಟ್ಟಣದ ಗಿಡ್ಡಿ ಬಾಗಿಲು (ಜಿ.ಬಿ.) ಹೊಳೆ, ವಾಟರ್ ಗೇಟ್, ಬಂಗಾರದೊಡ್ಡಿ ಗೂಳಿ ತಿಟ್ಟು ಬಳಿಕ ಚಂದ್ರವನ ಆಶ್ರಮದ ಪೀಠಾಧ್ಯಕ್ಷ ಶ್ರೀ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳು ಸಹ ವಿಶೇಷ ಪೂಜೆ ಸಲ್ಲಿಸಿ ನಾಡು ನಾಡಿನ ಜನರ ಒಳಿತಿಗೆ ಪ್ರಾರ್ಥನೆ ಸಲ್ಲಿಸಿದರು.

ನಂತರ ಪಶ್ಚಿಮವಾಹಿನಿ ಮೂಲಕ ಮುಂದುವರೆದು ಸಾಗಿದ ಉತ್ಸವ ಚಂದಗಾಲು ರಸ್ತೆಯ ನದಿ, ಗಂಜಾಂನ ಶ್ರೀ ನಿಮಿಷಾಂಬ ಸನ್ನಿಧಿ ಹಾಗೂ ತ್ರಿವೇಣಿ ಸಂಗಮಕ್ಕೆ ಹೊತ್ತೊಯ್ದು ಅಷ್ಟ (೮) ದಿಕ್ಕುಗಳಾದ ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಈಶಾನ್ಯ, ಅಜ್ಞೆಯ, ನೈಋತ್ಯ ಮತ್ತು ವಾಯುವ್ಯ ದಿಕ್ಕುಗಳಲ್ಲಿ ಹರಿವ ಕಾವೇರಿ ನದಿಯಲ್ಲಿ ಶ್ರೀರಂಗನ ಪಂಚಲೋಹದ ಮೂರ್ತಿಗೆ ತೀರ್ಥ ಸ್ನಾನ ನೆರವೇರಿಸಿ ಅಷ್ಟ ಋಷಿ ವರ್ಯರಿಗೆ ಶ್ರೀರಂಗನಾಥಸ್ವಾಮಿಯ ಪುಣ್ಯ ದರ್ಶನವನ್ನು ಪ್ರಾಪ್ತಿ ಕರಿಸಿ ಅನೂಚನವಾಗಿ ನಡೆದುಬಂದ ಸಂಪ್ರದಾಯ ಪೂಜಾ ಕಾರ್ಯ ಸಮರ್ಪಿಸಲಾಯಿತು.

ಈ ವೇಳೆ ವೇದಮಂತ್ರ ಹಾಗೂ ವಿಷ್ಣು ಸಹಸ್ರನಾಮ ಪಠಣೆಯೊಂದಿಗೆ ದೇಗುಲದ ವೈದ್ದಿಕರು ಹಾಗೂ ಶ್ರೀರಂಗನ ಭಕ್ತರು ಸಹ ಜೀವನದಿ ಕಾವೇರಿಯಲ್ಲಿ ಪುಣ್ಯಸ್ನಾನ ನಡೆಸಿ ತೀರ್ಥ ಪ್ರಸಾದ ಪಡೆದು ಪುನೀತತೆಯ ಭಾವ ಮೆರೆದರು. ಆಶ್ರಮದ ಆಡಳಿತಾಧಿಕಾರಿ ಚಿಕ್ಕತಿಮ್ಮಯ್ಯ, ಕಾರ್ಯದರ್ಶಿ ಟಿ.ಪಿ. ಶಿವಕುಮಾರ್ ಸೇರಿದಂತೆ ಹಲವರು ಈ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.