ರಾಷ್ಟ್ರೀಯ ಹೆದ್ದಾರಿ-೬೬ ಅಗಲೀಕರಣ ಮಾಡಿ ಚತುಷ್ಪಥ ರಸ್ತೆ ನಿರ್ಮಿಸುವುದಕ್ಕೋಸ್ಕರ ಪಟ್ಟಣದ ರಂಗಿನಕಟ್ಟೆಯ ಅಶ್ವತ್ಥ ಮರದ ಕಟ್ಟೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಭಕ್ತಾದಿಗಳಿಗೆ ಪೂಜೆ, ಪ್ರಾರ್ಥನೆ ಇತ್ಯಾದಿಗಳನ್ನು ಸಲ್ಲಿಸಲು ಒಂದು ವಾರಗಳ ಕಾಲಾವಕಾಶವನ್ನು ತಾಲೂಕು ಆಡಳಿತದಿಂದ ನೀಡಲಾಗಿದೆ.

ಪೂಜೆ, ಪುನಸ್ಕಾರ ಸಲ್ಲಿಸಲು ಸಾರ್ವಜನಿಕರಿಗೆ ಅವಕಾಶ

ಕನ್ನಡಪ್ರಭ ವಾರ್ತೆ ಭಟ್ಕಳ

ರಾಷ್ಟ್ರೀಯ ಹೆದ್ದಾರಿ-೬೬ ಅಗಲೀಕರಣ ಮಾಡಿ ಚತುಷ್ಪಥ ರಸ್ತೆ ನಿರ್ಮಿಸುವುದಕ್ಕೋಸ್ಕರ ಪಟ್ಟಣದ ರಂಗಿನಕಟ್ಟೆಯ ಅಶ್ವತ್ಥ ಮರದ ಕಟ್ಟೆಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗಿದ್ದು, ಭಕ್ತಾದಿಗಳಿಗೆ ಪೂಜೆ, ಪ್ರಾರ್ಥನೆ ಇತ್ಯಾದಿಗಳನ್ನು ಸಲ್ಲಿಸಲು ಒಂದು ವಾರಗಳ ಕಾಲಾವಕಾಶವನ್ನು ತಾಲೂಕು ಆಡಳಿತದಿಂದ ನೀಡಲಾಗಿದೆ.

ಈ ಕುರಿತು ಜಿಲ್ಲಾಧಿಕಾರಿಗಳ ಆದೇಶ ನೀಡಿದ ಹಿನ್ನೆಲೆಯಲ್ಲಿ ತಹಸೀಲ್ದಾರ್ ನಾಗೇಂದ್ರ ಕೋಳಶೆಟ್ಟಿಯವರು ಪತ್ರಿಕಾ ಪ್ರಕಟಣೆ ನೀಡಿದ್ದು ಸೂಸಗಡಿ ಸರ್ವೆ ನಂ. ೬೦೪ರ ಜಮೀನನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಜಮೀನಿನ ಮಾಲೀಕರು ಸ್ವಾಧೀನ ನೋಟಿಸ್‌ಗೆ ಸ್ಪಂದಿಸದ ಕಾರಣ, ಭಟ್ಕಳ ತಹಸೀಲ್ದಾರರಿಗೆ ಜಮೀನನ್ನು ಬಲವಂತವಾಗಿ ಸ್ವಾಧೀನ ಪಡೆಯುವಂತೆ ಸೂಚನೆ ನೀಡಲಾಗಿದೆ. ರಸ್ತೆ ಅಗಲೀಕರಣ ಕಾಮಗಾರಿಗಾಗಿ ಜಮೀನನ್ನು ಈಗಾಗಲೇ ಸ್ವಾಧೀನಪಡಿಸಿಕೊಂಡಿದ್ದು, ರಂಗಿನಕಟ್ಟೆಯಲ್ಲಿರುವ ಅಶ್ವತ್ಥ ಕಟ್ಟೆ ತೆರವುಗೊಳಿಸುವುದು ಅನಿವಾರ್ಯವಾಗಿರುವ ಕಾರಣ, ಸಾರ್ವಜನಿಕರ ಧಾರ್ಮಿಕ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು, ಅಶ್ವತ್ಥ ಕಟ್ಟೆಗೆ ಸಂಬಂಧಿಸಿದಂತೆ ಯಾವುದೇ ಪೂಜೆ, ಪ್ರಾರ್ಥನೆ, ಹೋಮ ಹಾಗೂ ಇತರೆ ಧಾರ್ಮಿಕ ವಿಧಿ-ವಿಧಾನಗಳಿದ್ದಲ್ಲಿ ಅದನ್ನು ಶೃದ್ಧಾ ಭಕ್ತಿಯುಳ್ಳ ಆಸ್ತಿಕರು ನಡೆಸಿಕೊಳ್ಳಲುವುದಕ್ಕೆ ಒಂದು ವಾರಗಳ ಕಾಲಾವಕಾಶ ನೀಡಲಾಗಿದೆ. ಡಿ. ೨೩ರ ಒಳಗಾಗಿ ಸಾರ್ವಜನಿಕರು ಅಥವಾ ಸಂಬಂಧ ಪಟ್ಟವರು ಪೂಜೆ, ಪ್ರಾರ್ಥನೆ ಸೇರಿದಂತೆ ಯಾವುದೇ ವಿಧಿ ವಿಧಾನಗಳನ್ನು ಪೂರೈಸಿಕೊಳ್ಳಬೇಕು. ಡಿ. 24ರ ನಂತರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು. ಈ ಅವಧಿಯಲ್ಲಿ ಸಾರ್ವಜನಿಕರು ವೈಯಕ್ತಿಕವಾಗಿ ಅಥವಾ ಒಟ್ಟಾಗಿ ಪೂಜೆ-ಕಾರ್ಯಕ್ರಮಗಳನ್ನು ನಡೆಸಿಕೊಳ್ಳಬಹುದು ಎಂದೂ ತಿಳಿಸಿದ್ದಾರೆ. ನಂತರ ಜಮೀನನ್ನು ವಿಶೇಷ ಭೂಸ್ವಾಧೀನಾಧಿಕಾರಿಗಳಿಗೆ ಹಸ್ತಾಂತರಿಸಿ, ನಿಯಮಾನುಸಾರ ಅಶ್ವತ್ಥ ಕಟ್ಟೆ ತೆರವು ಕಾರ್ಯ ಕೈಗೊಳ್ಳಲಾಗುತ್ತದೆ. ಡಿ. ೨೩ರ ನಂತರ ಸಲ್ಲಿಸುವ ಯಾವುದೆ ಮನವಿ ಅಥವಾ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದೂ ತಹಸೀಲ್ದಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.