ಸಾರಾಂಶ
ಮಳೆ ಬಂದಾಗ ಕೆಸರುಗದ್ದೆಯಂತಾಗುವ ರಸ್ತೆಯಲ್ಲಿ ಪ್ರತಿನಿತ್ಯ 3 ಕಿಲೋ ಮೀಟರ್ ನಡೆದು, ಓಡಾಡುವ ಪರಿಸ್ಥಿತಿ ಇದೆ.
ಕನ್ನಡಪ್ರಭ ವಾರ್ತೆ ಎಚ್.ಡಿ. ಕೋಟೆ
ಸರಗೂರು ತಾಲೂಕಿನ ಹಂಚಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ದಡದಹಳ್ಳಿ ಹಾಡಿಗೆ ದಡದಹಳ್ಳಿ ಗ್ರಾಮದಿಂದ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಾಂಬರೀಕರಣ ಮಾಡಲು ಆಗ್ರಹಿಸಿ ಕೆಸರು ತುಂಬಿದ ರಸ್ತೆಗೆ ಗಿಡ ನೆಟ್ಟು ಪ್ರತಿಭಟಿಸಿದರು.ದಡದಹಳ್ಳಿ ಹಾಡಿಯಲ್ಲಿ ಆದಿವಾಸಿ ಜನರು ಕಾಡಂಚಿನ ಪ್ರದೇಶದಲ್ಲಿ ವಾಸಿಸುತ್ತಿದ್ದು, ಪ್ರತಿನಿತ್ಯ ಅವರು ಕಲ್ಲು, ಮಣ್ಣು, ಗುಂಡಿಗಳಿರುವ ಹಾಗೂ ಮಳೆ ಬಂದಾಗ ಕೆಸರುಗದ್ದೆಯಂತಾಗುವ ರಸ್ತೆಯಲ್ಲಿ ಪ್ರತಿನಿತ್ಯ 3 ಕಿಲೋ ಮೀಟರ್ ನಡೆದು, ಓಡಾಡುವ ಪರಿಸ್ಥಿತಿ ಇದೆ. ಒಂದೆಡೆ ಕಾಡುಪ್ರಾಣಿಗಳ ಹಾವಳಿಯಿಂದಾಗಿ ಜೀವ ಭಯದಿಂದ ಓಡಾಡುವಂತಾಗಿದೆ.
ಇನ್ನೊಂದೆಡೆ ಹಾಡಿಯಲ್ಲಿ ಶಾಲೆಯು ಇಲ್ಲದಿರುವುದರಿಂದ ಪ್ರತಿನಿತ್ಯ ಮಕ್ಕಳು ನಡೆದು ಹೋಗಬೇಕಾಗುತ್ತದೆ. ತುರ್ತು ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆಗೆ ಹೋಗಲು ಸಹ ಬಹಳ ಕಷ್ಟವಿದೆ. ಪೌಷ್ಟಿಕ ಆಹಾರ ಸಾಮಗ್ರಿ ಬರುವ ವಾಹನವು ಸಹ ಸರಿಯಾದ ಸಮಯಕ್ಕೆ ಬರಲು ಆಗುವುದಿಲ್ಲ. ಇದರಿಂದಾಗಿ ಆರೋಗ್ಯ, ಶಿಕ್ಷಣ ಜೊತೆಗೆ ಅವರ ಜೀವನವೇ ಪ್ರತಿನಿತ್ಯ ಸಂಕಷ್ಟದಲ್ಲಿ ಬದುಕುವ ಪರಿಸ್ಥಿತಿ ಇದೆ. ಕನಿಷ್ಠ ರಸ್ತೆ ಸಂಪರ್ಕವನ್ನು ಸಹ ಕಲ್ಪಿಸಲಾಗದ ಸರ್ಕಾರದ ವಿರುದ್ಧ ಹಾಡಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಈ ಕೂಡಲೇ ರಸ್ತೆ ಕಾಮಗಾರಿಯನ್ನು ಪ್ರಾರಂಭ ಮಾಡಬೇಕೆಂದು ದಡದಹಳ್ಳಿ ಹಾಡಿ ಜನರು ಹಾಗೂ ಜನಾಧಿಕಾರ ಸುರಕ್ಷಾ ಸಮಿತಿ ಆಗ್ರಹಿಸಿದೆ.
ಹಾಡಿಯ ಮುಖಂಡರಾದ ನಂಜುಂಡ, ಕಾವ್ಯ, ರೇಖಾ, ಕುಮಾರ ,ರಾಜು , ಬೊಮ್ಮ, ದೇವಿ, ಬಸಪ್ಪ, ಬೈರಮ್ಮ, ರಾಜಪ್ಪ, ಶೋಭಾ, ಸೋಮಣ್ಣ, ಭಾಗ್ಯ, ಶಶಿಕಲಾ ಹಾಗೂ ಅಖಿಲ ಭಾರತ ಜನ ಅಧಿಕಾರ ಸುರಕ್ಷಾ ಸಮಿತಿಯ ಮುಖಂಡರಾದ ಟಿ.ಆರ್. ಸುನಿಲ್ ಭಾಗವಹಿಸಿದ್ದರು.